Advertisement

ಇದು ಅದೃಷ್ಟದ ಗೆಲುವು: ಸ್ಮಿತ್‌

07:59 AM Apr 08, 2017 | Team Udayavani |

ಪುಣೆ: ಅಂತಿಮ ಓವರಿನಲ್ಲಿ ಪುಣೆ ಗೆಲುವಿಗೆ ಅಗತ್ಯವಿದ್ದದ್ದು 13 ರನ್‌. ಕ್ರೀಸಿನಲ್ಲಿದ್ದವರು ನಾಯಕ ಸ್ಟೀವನ್‌ ಸ್ಮಿತ್‌ ಮತ್ತು ಒಂದು ಕಾಲದ ಮ್ಯಾಚ್‌ ಫಿನಿಶರ್‌ ಮಹೇಂದ್ರ ಸಿಂಗ್‌ ಧೋನಿ. ಬೌಲರ್‌ ಕೈರನ್‌ ಪೊಲಾರ್ಡ್‌…

Advertisement

ಮೊದಲ 3 ಎಸೆತಗಳಲ್ಲಿ 3 ಸಿಂಗಲ್ಸ್‌ ಬಂದಾಗ ಆತಿಥೇಯ ಪುಣೆ ಕತೆ ಏನೋ ಎಂಬ ಆತಂಕ ಎದುರಾಗಿತ್ತು. ಆದರೆ ಮುಂದಿನೆರಡು ಎಸೆತ ಗಳನ್ನು ಸಿಕ್ಸರ್‌ಗೆ ಅಟ್ಟಿದ ಸ್ಮಿತ್‌ ತಂಡದ ಗೆಲುವನ್ನು ಸಾರಿಯೇ ಬಿಟ್ಟರು! ಆದ್ದರಿಂದಲೇ ಗುರುವಾರ ರಾತ್ರಿಯ ಐಪಿಎಲ್‌ ಗೆಲುವಿನ ಬಳಿಕ ಸ್ಮಿತ್‌ ಪ್ರತಿಕ್ರಿಯಿಸಿದ್ದು, “ಇದೊಂದು ಅದೃಷ್ಟದ ಗೆಲುವು. ನಾವು ಕೊನೆಯಲ್ಲಿ ಗೆರೆ ದಾಟುವಲ್ಲಿ ಯಶಸ್ವಿಯಾದೆವು…’ ಎಂದು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್‌ 8 ವಿಕೆಟಿಗೆ 184 ರನ್‌ ಪೇರಿಸಿ ಸವಾಲೊಡ್ಡಿದರೆ, ಪುಣೆ 19.5 ಓವರ್‌ಗಳಲ್ಲಿ 3 ವಿಕೆಟಿಗೆ 187 ರನ್‌ ಬಾರಿಸಿ ವಿಜಯಿಯಾಯಿತು. ಭಾರತದೆದುರಿನ ಟೆಸ್ಟ್‌ ಸರಣಿಯಲ್ಲಿ 3 ಶತಕ ಗಳೊಂದಿಗೆ 499 ರನ್‌ ಪೇರಿಸಿ ಮಿಂಚಿದ್ದ ಸ್ಟೀವನ್‌ ಸ್ಮಿತ್‌ ಐಪಿಎಲ್‌ನಲ್ಲೂ ಇದೇ ಫಾರ್ಮ್ ಮುಂದು ವರಿಸಿದರು. 54 ಎಸೆತಗಳಿಂದ ಅಜೇಯ 84 ರನ್‌ (7 ಬೌಂಡರಿ, 3 ಸಿಕ್ಸರ್‌) ಬಾರಿಸಿ ಮ್ಯಾಚ್‌ ವಿನ್ನರ್‌ ಎನಿಸಿದರು. 

“ಫಾರ್ಮ್ ಎನ್ನುವುದು ಫಾರ್ಮ್. ಇದು ಯಾವುದೇ ಮಾದರಿಯ ಪಂದ್ಯಕ್ಕಾದರೂ ಅನ್ವಯಿಸ ಬೇಕು. ಇಂಥ ಚುಟುಕು ಕ್ರಿಕೆಟ್‌ನಲ್ಲಿ ಸ್ಟ್ರೋಕ್‌ ಪ್ಲೇ ಬಹಳ ಮುಖ್ಯವಾಗುತ್ತದೆ. ಬೌಲಿಂಗ್‌ನಲ್ಲಿ ತಾಹಿರ್‌, ಭಾಟಿಯ ಅಮೋಘ ಪ್ರದರ್ಶನವಿತ್ತರು’ ಎಂಬುದಾಗಿ ಸ್ಮಿತ್‌ ಪ್ರಶಂಸಿಸಿದರು.

ಆರಂಭಿಕನಾಗಿ ಇಳಿದ ಅಜಿಂಕ್ಯ ರಹಾನೆ 34 ಎಸೆತಗಳಿಂದ 60 ರನ್‌ (6 ಬೌಂಡರಿ, 3 ಸಿಕ್ಸರ್‌) ಬಾರಿಸಿ ತಂಡಕ್ಕೆ ಅಗತ್ಯವಿದ್ದ ರಭಸ ತಂದು ಕೊಟ್ಟಿದ್ದರು. ಸ್ಟೋಕ್ಸ್‌ 21, ಧೋನಿ ಅಜೇಯ 12 ರನ್‌ ಹೊಡೆದರು. ಓಪನರ್‌ ಮಾಯಾಂಕ್‌ ಅಗರ್ವಾಲ್‌ ಕೇವಲ 6 ರನ್‌ ಮಾಡಿ ನಿರ್ಗಮಿಸಿದರು.

Advertisement

11ನೇ ಓವರಿನ ಮೊದಲ ಎಸೆತದಲ್ಲಿ ರಹಾನೆ ಔಟಾದೊಡನೆ ಹೆಚ್ಚಿನ ಜವಾಬ್ದಾರಿಯೊಂದಿಗೆ ಆಡಿದ ಸ್ಮಿತ್‌ ತಂಡವನ್ನು ಯಶಸ್ವಿಯಾಗಿ ದಡ ತಲುಪಿಸಿದರು.

ಸಂಕ್ಷಿಪ್ತ ಸ್ಕೋರ್‌: ಮುಂಬೈ ಇಂಡಿಯನ್ಸ್‌-8 ವಿಕೆಟಿಗೆ 184. ರೈಸಿಂಗ್‌ ಪುಣೆ ಸೂಪರ್‌ ಜೈಂಟ್‌-19.5 ಓವರ್‌ಗಳಲ್ಲಿ 3 ವಿಕೆಟಿಗೆ 187 (ಸ್ಮಿತ್‌ ಔಟಾಗದೆ 84, ರಹಾನೆ 60, ಸ್ಟೋಕ್ಸ್‌ 21, ಧೋನಿ ಔಟಾಗದೆ 12, ಅಗರ್ವಾಲ್‌ 6, ಸೌಥಿ 34ಕ್ಕೆ 1, ಪಾಂಡ್ಯ 36ಕ್ಕೆ 1, ಮೆಕ್ಲೆನಗನ್‌ 36ಕ್ಕೆ 1).

ಪಂದ್ಯಶ್ರೇಷ್ಠ: ಸ್ಟೀವನ್‌ ಸ್ಮಿತ್‌.

ಎಕ್ಸ್‌ಟ್ರಾ ಇನ್ನಿಂಗ್ಸ್‌
ಪಂದ್ಯ   2     ಪುಣೆ-ಮುಂಬೈ

ಮುಂಬೈ ವಿರುದ್ಧ ಅತ್ಯಧಿಕ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಿ ಗೆದ್ದ ದಾಖಲೆ ಪುಣೆ ತಂಡದ್ದಾಯಿತು (187/3). 2015ರಲ್ಲಿ ಚೆನ್ನೈ 184 ರನ್‌ ಪೇರಿಸಿ ಗೆದ್ದದ್ದು ಈವರೆಗಿನ ದಾಖಲೆಯಾಗಿತ್ತು.

ಮುಂಬೈ 2012ರಲ್ಲಿ ಕೊನೆಯ ಸಲ ಐಪಿಎಲ್‌ ಋತುವಿನ ತನ್ನ ಮೊದಲ ಪಂದ್ಯವನ್ನು ಜಯಿಸಿತ್ತು.

ಮುಂಬೈ ಮೊದಲ ಬಾರಿಗೆ 184 ಪ್ಲಸ್‌ ರನ್‌ ಗಳಿಸಿಯೂ ಸೋಲನುಭವಿಸಿತು. 

ಐಪಿಎಲ್‌ ಇತಿಹಾಸದಲ್ಲೇ ಮೊದಲ ಬಾರಿಗೆ ಧೋನಿ ನಾಯಕತ್ವದ ಹೊಣೆಗಾರಿಕೆ ಇಲ್ಲದೆ ಸಾಮಾನ್ಯ ಆಟಗಾರನಾಗಿ ಕಣಕ್ಕಿಳಿದರು. ಇದಕ್ಕೂ ಹಿಂದಿನ ಎಲ್ಲ 143 ಪಂದ್ಯಗಳಲ್ಲೂ ಅವರು ನಾಯಕರಾಗಿದ್ದರು.

ಸ್ಟೀವನ್‌ ಸ್ಮಿತ್‌ 4ನೇ ಸಲ 50 ಪ್ಲಸ್‌ ರನ್‌ ಹೊಡೆದರು. ಇದರಲ್ಲಿ 2 ಮುಂಬೈ ವಿರುದ್ಧ ದಾಖಲಾಗಿದೆ. ಮುಂಬೈ ವಿರುದ್ಧ ಅವರ ಹಿಂದಿನ ಅರ್ಧ ಶತಕ ದಾಖಲಾದದ್ದು 2015ರಲ್ಲಿ (ಅಜೇಯ 79). ಆಗ ಸ್ಮಿತ್‌ ರಾಜಸ್ಥಾನ್‌ ರಾಯಲ್ಸ್‌ ಪರ ಆಡುತ್ತಿದ್ದರು.

ಅಶೋಕ್‌ ದಿಂಡ ಅತ್ಯಧಿಕ 4 ಸಲ ಪಂದ್ಯವೊಂದರಲ್ಲಿ 50 ಪ್ಲಸ್‌ ರನ್‌ ನೀಡಿ ಐಪಿಎಲ್‌ನ ಅತ್ಯಂತ ದುಬಾರಿ ಬೌಲರ್‌ ಎನಿಸಿದರು. ಉಳಿದಂತೆ 6 ಬೌಲರ್‌ಗಳು 3 ಸಲ 50 ಪ್ಲಸ್‌ ರನ್‌ ನೀಡಿದ್ದಾರೆ.

ದಿಂಡ ಕೊನೆಯ ಓವರಿನಲ್ಲಿ ಐಪಿಎಲ್‌ ಚರಿತ್ರೆಯಲ್ಲೇ ಅತ್ಯಧಿಕವೆನಿಸಿದ 30 ರನ್‌ ನೀಡಿದರು. ಡೇವಿಡ್‌ ಹಸ್ಸಿ ಮತ್ತು ರಾಹುಲ್‌ ಶುಕ್ಲಾ 27 ರನ್‌ ನೀಡಿದ್ದು ಹಿಂದಿನ ದಾಖಲೆ.

ಮುಂಬೈ ಇಂಡಿಯನ್ಸ್‌ 20ನೇ ಓವರಿನಲ್ಲಿ ಸರ್ವಾಧಿಕ 30 ರನ್‌ ಪೇರಿಸಿ ತನ್ನದೇ ದಾಖಲೆ ಯನ್ನು ಮುರಿಯಿತು. 2013ರಲ್ಲಿ ಪಂಜಾಬ್‌ ವಿರುದ್ಧ 27 ರನ್‌ ಗಳಿಸಿದ್ದು ಹಿಂದಿನ ದಾಖಲೆ. 2014ರಲ್ಲಿ ಆರ್‌ಸಿಬಿ ವಿರುದ್ಧ ಡೆಲ್ಲಿ ಕೂಡ 20ನೇ ಓವರಿನಲ್ಲಿ 27 ರನ್‌ ಸೂರೆಗೈದಿತ್ತು.

ಸ್ಮಿತ್‌ ಮುಂಬೈ ವಿರುದ್ಧ ಅತ್ಯಧಿಕ 5ನೇ ಸಲ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು. ಉಳಿದ ಟಿ-20 ತಂಡಗಳೆದುರು ಅವರಿಗೆ ಒಲಿದದ್ದು 4 ಪಂದ್ಯಶ್ರೇಷ್ಠ ಪ್ರಶಸ್ತಿ ಮಾತ್ರ.

ಸ್ಮಿತ್‌ ಐಪಿಎಲ್‌ನಲ್ಲಿ ನಾಯಕತ್ವ ವಹಿಸಿದ 10 ಪಂದ್ಯಗಳಲ್ಲಿ 7ನೇ ಜಯ ಸಾಧಿಸಿದರು.

ಬೆನ್‌ ಸ್ಟೋಕ್ಸ್‌ ಮೊಟ್ಟಮೊದಲ ಬಾರಿಗೆ ಟಿ-20 ಪಂದ್ಯದಲ್ಲಿ ಜಾಸ್‌ ಬಟ್ಲರ್‌ಗೆ ಬೌಲಿಂಗ್‌ ಮಾಡಿದರು.

ಅಜಿಂಕ್ಯ ರಹಾನೆ ಐಪಿಎಲ್‌ನಲ್ಲಿ 25 ಸಲ 50 ಪ್ಲಸ್‌ ರನ್‌ ಬಾರಿಸಿದ 6ನೇ ಬ್ಯಾಟ್ಸ್‌ಮನ್‌ ಎನಿಸಿದರು. ಉಳಿದವರೆಂದರೆ ವಾರ್ನರ್‌ (34), ಗಂಭೀರ್‌ (31), ಕೊಹ್ಲಿ (30), ರೋಹಿತ್‌ (30) ಮತ್ತು ರೈನಾ (29).

ರಹಾನೆ 27 ಎಸೆತಗಳಲ್ಲಿ ಅರ್ಧ ಶತಕ ಬಾರಿಸಿದರು. ಇದು ಐಪಿಎಲ್‌ನಲ್ಲಿ ಅವರ ಅತೀ ವೇಗದ ಫಿಫ್ಟಿ ಆಗಿದೆ. 2016ರಲ್ಲಿ ಮುಂಬೈ ವಿರುದ್ಧ ಮೊದಲ ಪಂದ್ಯದಲ್ಲೇ 32 ಎಸೆತಗಳಲ್ಲಿ 50 ರನ್‌ ಹೊಡೆದದ್ದು ಹಿಂದಿನ ದಾಖಲೆ.

Advertisement

Udayavani is now on Telegram. Click here to join our channel and stay updated with the latest news.

Next