Advertisement
ಪಂಚಭೂತಗಳಲ್ಲಿ ಅಗ್ನಿ ಬಹು ಮುಖ್ಯವಾದುದು, ಅಗ್ನಿಯ ಮೂಲಕ ಬೆಳಕು ಲಭ್ಯ. ಗಗನ ಮಂಡಲದಲ್ಲಿ ಸೂರ್ಯನು ಉರಿಯುವ ಅಗ್ನಿಯೇ ಆಗಿದ್ದಾನೆ. ಅವನಿಂದಲೇ ಬೆಳಕು. ಈ ಬೆಳಕಿಗೆ ಶಕ್ತಿ ಇರುತ್ತದೆ. ಶಕ್ತಿಯ ನೆಲೆಯಲ್ಲಿ ಕಣ್ಣು ಕೋರೈಸುವ ಬೆಳಕು ಆರೋಗ್ಯಕ್ಕೆ ಸೂಕ್ತವಲ್ಲ. ಬೆಳದಿಂಗಳಿನಂಥ ಮಂದ ಬೆಳಕೂ ಎಲ್ಲಾ ಸಲವೂ ಯುಕ್ತವಲ್ಲ. ಮನಸ್ಸಿನ ಚೈತನ್ಯಕ್ಕೆ ನಮ್ಮ ಪಂಚೇಂದ್ರಿಯಗಳನ್ನು ಉದ್ದೀಪಿಸುವ ಬೆಳಕು ಸಮಯಾ ಸಮಯದ ರೀತಿ ನೀತಿಗಳನ್ನು ಅನುಸರಿಸಿಕೊಂಡು ಬೆಳಗಿಕೊಂಡಿರಬೇಕು.
Related Articles
Advertisement
ದೇವರ ಮನೆಯಲ್ಲಿ ವಿಶೇಷ ಹಬ್ಬಗಳ ವಿನಾ ದೇವರನ್ನು ಕೂಡ್ರಿಸಿದ ಮಂಟಪ ಹಾಗೂ ಗೂಡುಗಳಲ್ಲಿ ಬೆಳಕು ಕೋರೈಸಕೂಡದು. ದೇವರು ಎಂಬುದು ಶಕ್ತಿ. ಅದು ಮಾನಸಿಕ ಸ್ತರದಲ್ಲಿ ನಿಮ್ಮ ನಂಬಿಗೆಯ ಮೂಲಕವಾದ ಅಸ್ತಿತ್ವವನ್ನು ಪಡೆಯುವಂಥದು. ಒಂದು ಹದವಾದ ಬೆಳಕಲ್ಲಿ ಮಂಟಪದಲ್ಲಿನ ದೈವ ಮೂರ್ತಿಗಳನ್ನು ನವಿರಾಗಿ, ಸೂಕ್ಷ್ಮವಾಗಿ ಪ್ರತಿಫಲಿಸುವಂತೆ ಇರಬೇಕು.
ದೇವರ ಮುಂದಿನ ನೀಲಾಂಜನ ಹೊತ್ತಿ ಉರಿಯುವ ಜುಂಜಿನಂತಿರದು. ನೀಲಾಂಜನದ ಕಲ್ಪನೆಯೇ ಅನಂತವನ್ನೂ, ಲೌಕಿಕವಾದ ನೆಲವನ್ನು ಸೂಕ್ಷ್ಮ ಹಾಗೂ ವಿಶಿಷ್ಟ ನೆಲೆಯಲ್ಲಿ ಬೆಸೆಯುವಂಥದು. ಇದು ಅಸಾಧ್ಯವಾದುದನ್ನು ಸಾಧ್ಯವಾಗಿಸುವ ದಿವ್ಯಕ್ಕೆ ಕೊಂಡಿ ಕೂಡಿಸುತ್ತದೆ. ದೇವರ ಮುಂದಿನ ನೀಲಾಂಜನದ ಕಿರು ಹೊಯ್ದಾಟಕ್ಕೂ ಮನಸ್ಸನ್ನು ಪ್ರೇರೇಪಿಸುವ ಶಕ್ತಿ ಇದೆ.
ಜೊತೆಗೆ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ಅವಶ್ಯವಾದ ಬಲವನ್ನು ಗಟ್ಟಿಗೊಳಿಸುತ್ತದೆ. ಮುಖ್ಯವಾಗಿ ಏಕಾಗ್ರತೆಯನ್ನು ಒದಗಿಸುತ್ತದೆ. ಯಾವುದೇ ಕೆಲಸ ಫಲಪ್ರದವಾಗುವಲ್ಲಿ ಏಕಾಗ್ರತೆ ಬೇಕು. ಶಾಂತಿ, ಸಮಾಧಾನಗಳಿರಬೇಕು. ಮನೆಯ ಕತ್ತಲು ತುಂಬಿದ ಮೂಲೆಗಳನ್ನು ಯುಕ್ತವಾದ ಬೆಳಕಿಂದ ಶುಭ್ರಗೊಳಿಸಿರಿ. ಮನೆಯು ಬರೀ ಶುಭ್ರವಾಗಿದ್ದರೆ ಸಾಲದು. ಮುಸುಕಿದ ಮಬ್ಬನ್ನು ಕಳೆಯುವ ಬೆಳಕಿಗೆ ಅಲ್ಲಿ ಸ್ಥಾನ ಇರಬೇಕು. ಮನೆಯಲ್ಲಿ ಕಿಟಕಿಗಳಿಗೆ ಅವಕಾಶವಿರಲಿ.
ಇಲ್ಲಿಯೂ ಕೋರೈಸುವ ಬಿಸಿಲ ಬೇಗೆಗೆ ಅವಕಾಶ ಇರದಂತೆ ಕಿಟಕಿಗಳಿರಲಿ. ಅತಿಯಾದರೆ ಬೆಳಕು ಕತ್ತಲ ರೂಪದಷ್ಟೇ ಅಪಾಯಕಾರಿ. ಆಫೀಸಿನಲ್ಲೂ ಕೂಡ ಸೂಕ್ತ ಬೆಳಕಿನ ವ್ಯವಸ್ಥೆ ಇರಬೇಕು. ಅದು ಕಚೇರಿಗೆ ಬರುವ ಗ್ರಾಹಕರ ಮೇಲೂ ಸಕಾರಾತ್ಮಕ ಪ್ರಭಾವ ಬೀರುತ್ತದೆ. ಕವಿ ಮನಸ್ಸು ಕೂಡ, ಬೆಳಕನ್ನು ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸನ್ನನು ಎಂದು ಪ್ರಾರ್ಥಿಸುತ್ತದೆ. ಬೆಳಕನ್ನು ಕರುಣಾಳು ಎಂದು ಹೊಗಳುತ್ತದೆ. ಬೆಳಕಿನ ಪ್ರಚೋದನೆಯಿಂದ ಹೆಸರು, ಕೀರ್ತಿ, ಶಾಂತಿ, ಸಮಾಧಾನಗಳಿಗೆ ಅರ್ಥವಿರುತ್ತದೆ.
* ಅನಂತಶಾಸ್ತ್ರಿ