Advertisement

ಹಾಡೋದು ನಿಲ್ಲಿಸ್ತೀನಿ ಅನ್ನೋದು ಕೂಡ ದೈವಪ್ರೇರಣೆಯೇ…!

10:50 AM Oct 28, 2017 | |

ಎಲ್ಲಾದರೂ ಏರ್‌ಪೋರ್ಟ್‌ನಲ್ಲಿ ಜಾನಕಿ ಅಮ್ಮ ಸಿಕ್ಕಾಗ ನಿಮ್ಮ ಮಗ ಚೆನ್ನಾಗಿದ್ದಾರ ಅಂತ ಕೇಳ್ಳೋರು.  ಅವರು “ಮುರಳೀನಾ, ಇಲ್ಲ ಅವನು ಹೈದರಾಬಾದ್‌ನಲ್ಲಿ ಇದ್ದಾನೆ ಅಂದ್ರೆ.’ “ಅಲ್ಲ, ಕಲ್ಯಾಣ್‌ ಹೇಗಿದ್ದಾರೆ’ ಅನ್ನೋರಂತೆ. ನಾನು ಎಲ್ಲಾದರೂ ಹೋದರೆ “ನೀವು ಜಾನಕಿ ಅವರ ಮಗ ಅಲ್ವಾ, ಹೇಗಿದ್ದಾರೆ ಅಮ್ಮ, ಚೆನ್ನಾಗಿದ್ದಾರಾ?’  ಹೀಗಂತ ಕೇಳಿಬಿಡೋರು. ಹೀಗೆ ಜನಗಳ ಮನಸ್ಸಲ್ಲಿ ತಾಯಿ ಮತ್ತು ಮಗನ ಅನುಬಂಧ ನಮ್ಮಿಬ್ಬರಿಗೂ ದೊರೆತಿದೆ.  

Advertisement

ನಾನು ಗಮನಿಸಿದ್ದು ಏನೆಂದರೆ,  ಜಾನಕಿ ಅಮ್ಮ ಮಂದ್ರ, ಮಧ್ಯಮ, ತಾರಕ ಸ್ಥಾಯಿಯಲ್ಲಿ ಹಾಡುವಾಗ ಧ್ವನಿಯ ಸಾಂಧ್ರತೆಯಲ್ಲಿ ಯಾವುದೇ ಬದಲಾವಣೆ ಆಗೋಲ್ಲ. ಬೇಕಾದರೆ ಎಲ್ಲಾ ರೇಂಜ್‌ನ ಅವರ ದನಿಯ ಚಿಕ್ಕ ತುಣಕನ್ನು ತಂದು ತಕ್ಕಡಿಗೆ ಹಾಕಿದರೆ ಮೀಟರ್‌ ಅಷ್ಟೇ ತೋರಿಸುತ್ತದೆ. ಅಂದರೆ ಅವರ ಟೋನ್‌ ಬ್ಯಾಲೆನ್ಸಿಂಗ್‌ ಅದ್ಬುತ. ಇವರು ತಾರಕ ಸ್ಥಾಯಿಯಲ್ಲಿ ಹಾಡುತ್ತಿದ್ದರೆ ವೈಯೋಲಿನ್‌ ಶೃತಿ  ಮಾಡಬಹುದು. ಅಷ್ಟೊಂದು ಪರಿಶುದ್ಧವಾಗಿರುತ್ತದೆ.  

ಇವೆಲ್ಲ ವೃತ್ತೀಯ ಅನುಭವ. ಅವರ ಮನೆಯ ಕಾರ್ಯಕ್ರಮದಲ್ಲಿ ನಮ್ಮ ಕುಟುಂಬ, ನಮ್ಮನೆ ಸಮಾರಂಭಗಳಲ್ಲಿ ಅವರ ಕುಟುಂಬ ಭಾಗವಹಿಸುತ್ತಲೇ ಇರುತ್ತವೆ. ಎಷ್ಟೋ ಸಲ ಒಟ್ಟೊಟ್ಟಿಗೆ ದೇವಾಲಯಕ್ಕೆ ಹೋಗುತ್ತೇವೆ. ಕೃಷ್ಣ, ಸಾಯಿಬಾಬಾ ಅವರ ಇಷ್ಟದ ದೇವರು. ಒಂದು ಸಲ ಚೆನ್ನೈ ನಲ್ಲಿರುವ ಮನೆಗೆ ಹೋಗಿದ್ದೆ. ಮಹಡಿ ಮೇಲಿನ ಬೆಡ್‌ ರೂಂ ಹತ್ತಿರ ಹೋಗ್ತಿದ್ದಾಗೆ ಘಮ್‌ ಅನ್ನೋ ವಿಭೂತಿ ವಾಸನೆ. ನೋಡಿದರೆ ಬಾಬಾ ದೇವಾಲಯದ ರೀತಿ ಇದೆ. 

ಇನ್ನೊಂದು ಘಟನೆ ನಡೆಯಿತು. ಹಲವು ವರ್ಷಗಳ ಹಿಂದೆ  ಜಾನಕಿಯಮ್ಮನ ಆರೋಗ್ಯದಲ್ಲಿ ಏರುಪೇರಾಗಿತ್ತು. ಡಾಕ್ಟರ್‌ ಕೊಟ್ಟ ಮಾತ್ರೆಯಲ್ಲಿ ಸ್ವಲ್ಪ ವ್ಯತ್ಯಾಸವಾಗಿ ಇಡೀ ದೇಹ ನೀಲಿಗಟ್ಟಿತು. ಪರಿಸ್ಥಿತಿ ವಿಪರೀತಕ್ಕೆ ಹೋಯಿತು. ಆಗ ಯಾರೋ ಟೈಂನಲ್ಲಿ ಸಾಯಿಬಾಬಾ ವಿಭೂತಿ ತಂದು ಕೊಟ್ಟರು. ಜಾನಕಿ ಅವರು ಭಕ್ತಿಯಿಂದ ಹಚ್ಚಿಕೊಳ್ಳುತ್ತಾ ಹೋದರು. ಮಿರಾಕಲ್‌ ರೀತಿ ಎಲ್ಲವೂ ವಾಸಿ ಆಯ್ತು. ಆ ನಂತರ ಒಂದಷ್ಟು ಜನ ಬಂದು, “ಅಮ್ಮಾ ನೀವು ಹೇಳಿದರೆ ಆ ಡಾಕ್ಟರ್‌ಗೆ ಗ್ರಹಚಾರ ಬಿಡಿಸುತ್ತೇವೆ.

ಕೇಸ್‌ ಜಡಿದು ಬುದ್ಧಿ ಕಲಿಸ್ತೀವಿ’ ಅಂತ ಕೇಳಿದರು. ಆಗ ಜಾನಕಿ ಅಮ್ಮ ಹೇಳಿದ್ದು ಏನು ಗೊತ್ತೆ? ಯಾವುದೇ ವೈದ್ಯರು ಪೇಷೆಂಟ್‌ನ ನೋಯಿಸಬೇಕು, ತೊಂದರೆ ಕೊಡಬೇಕು ಅಂತ ಮಾಡೋಲ್ಲ. ಏನೋ ಅಚಾತುರ್ಯವಾಗಿ ಈ ರೀತಿ ಆಗಿದೆ. ಬಿಡಿ ಪರವಾಗಿಲ್ಲ ಅಂತ ಅವರನ್ನು ಸಮಾಧಾನ ಮಾಡಿ, ಆವತ್ತು ಔಷಧ ಕೊಟ್ಟ ವೈದ್ಯರನ್ನು ಮನೆಗೆ ಕರೆದು ಊಟ ಹಾಕಿ ಕಳುಹಿಸಿದರು. ಇಲ್ಲಿ ಗಮನಿಸಬೇಕಾದದ್ದು ಜಾನಕಿ ಯವರ  ನಂಬಿಕೆ ಅವರ ಜೀವ ಉಳಿಸಿದರೆ,  ಇವರ ಮಾನವೀಯತೆ ಇನ್ನೊಬ್ಬರ ಜೀವನ ಉಳಿಸಿತು. 

Advertisement

***
 ಅಮ್ಮನಿಗೆ ವೈಜಾಕ್‌ನಲ್ಲಿ ದೊಡ್ಡ ಸಮಾರಂಭ ಏರ್ಪಡಿಸಿ,  ದೊಡ್ಡ ಸನ್ಮಾನ, ಕ್ಯಾಷ್‌ ಪ್ರೈಸ್‌ ಎಲ್ಲ ಕೊಡಬೇಕು ಅಂತ ಯೋಜನೆಯಾಗಿತ್ತು.  ಅದೇ ಡೇಟ್‌ಗೆ ಬೆಂಗಳೂರಿನ ಅಭಿಮಾನಿಯೊಬ್ಬರು- ದಯವಿಟ್ಟು ನಮ್ಮ ಮದುವೆ ಕಾರ್ಯಕ್ರಮಕ್ಕೆ ತಾವು  ಬರಬೇಕು ಅಂತ ಕರೆದಿದ್ದಾರೆ.  ಜಾನಕಿ ಅವರಆಯ್ಕೆ ಯಾವುದಿರಬಹುದು? ವೈಜಾಕ್‌ ಸಮಾರಂಭವಲ್ಲ. ಮದುವೆ ಕಾರ್ಯಕ್ರಮ.

ಕೈಯಿಂದ ದುಡ್ಡುಹಾಕಿಕೊಂಡು ವಿಮಾನದಲ್ಲಿ ಬಂದು, ಊಟ ತಿಂಡಿ ಮಾಡಿಕೊಂಡು ಹೋದರು. ಇದು ಜಾನಕಿ ಅವರ ಸರಳತೆಗೆ ಉದಾಹರಣೆ.  ನಮ್ಮ ಮನೆಗೆ ಬಂದರೂ ಅಷ್ಟೇ.  ಹಾಲಲ್ಲಿ , ಅಡುಗೆ ಮನೆಯಲ್ಲಿ ಕೂರ್ತಾರೆ, ಅಮ್ಮನ ಹತ್ತಿರ ಮಾತಾಡ್ತಾರೆ, ಹಾಡ್ತಾರೆ, ನಗ್ತಾರೆ.  ಒಂಥರ ಮಗೂ ರೀತಿ. ಇವತ್ತಿಗೂ ಸಂಗೀತದಲ್ಲಿ ತಾನೇನೂ ಕಲಿತಿಲ್ಲ ಅನ್ನೋ ಭಾವನೆಯಲ್ಲೇ ಇದ್ದಾರೆ.

ಕೆಲವರು ಶೋ ಅಪ್‌ಗೆ ನಾನೇ ಕಲಿತಿಲ್ಲ ಅನ್ನಬಹುದು. ಜಾನಕಿ ಅಮ್ಮ ಹಾಗಲ್ಲ. ಏನೂ ಗೊತ್ತಿಲ್ಲ ಅನ್ನೋ ಅವರ ಒಳಗೆ ಶಾರದೆ, ಸರಸ್ವತಿ ಇದ್ದಾಳೆ. ನೀವು ಹಾಡುವುದನ್ನು ನಿಲ್ಲಿಸಿದರೂ ನಮಗಾಗಿ ಒಂದು ಕನ್ನಡದ ನಾಡಗೀತೆ ಹಾಡಬೇಕು ಅಂತ ಕೇಳಿದ್ದೀನಿ.

ಅವರ ಧ್ವನಿಗೆ ಹೊಂದುವಂತೆ ರಾಗ ಸಂಯೋಜನೆ ಮಾಡ್ತಾ ಇದ್ದೀನಿ.  ನೀವು ಹಾಡಲೇಬೇಕು ಅಂದಾಗ ಬೇಡ ಆಗೋಲ್ಲ ಅಂದರು. ಆಮೇಲೆ ನಕ್ಕು ಸುಮ್ಮನಾದರು. ಅವರಿಗೆ ಮೊದಲ ಹಾಡು ಸಿಕ್ಕಿದ್ದು, ಹಾಡಿದ್ದು ದೈವಪ್ರೇರಣೆ, ನಂತರ ಸಾವಿರಾರು ಹಾಡುಗಳನ್ನು ಹಾಡಿದ್ದು ದೈವಪ್ರೇರಣೆ ಆದಾಗ. ಹಾಡೋದು ನಿಲ್ಲಿಸ್ತೀನಿ ಅನ್ನೋದು ಕೂಡ ದೈವಪ್ರೇರಣೆಯೇ.   

* ಕೆ. ಕಲ್ಯಾಣ್‌, ಸಾಹಿತಿ, ಸಂಗೀತ ನಿರ್ದೇಶಕರು

Advertisement

Udayavani is now on Telegram. Click here to join our channel and stay updated with the latest news.

Next