ಕೊಪ್ಪಳ: ಐಟಿಐ ವಿದ್ಯಾರ್ಥಿಗಳಿಗೆ ಆನ್‌ಲೈನ್ ಪರೀಕ್ಷಾ ಪದ್ಧತಿ ಜಾರಿ ಮಾಡಿದ್ದನ್ನು ಖಂಡಿಸಿ ಎಬಿವಿಪಿ ಸೇರಿದಂತೆ ವಿವಿಧ ಐಟಿಐ ಕಾಲೇಜುಗಳ ನೂರಾರು ವಿದ್ಯಾರ್ಥಿಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಡಿಜಿಇಟಿ ಈಗಾಗಲೇ ಆನ್‌ಲೈನ್ ಪರೀಕ್ಷೆ ಜಾರಿಗೊಳಿಸಿದೆ. ಇದೊಂದು ಅವೈಜ್ಞಾನಿಕ ನೀತಿಯಾಗಿದ್ದು, ಇದು ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಲಿದೆ. ಆನ್‌ಲೈನ್ ಪರೀಕ್ಷೆ ನಡೆಸಲು ಸಾಕಷ್ಟು ಕಂಪ್ಯೂಟರ್ ಜ್ಞಾನದ ಅವಶ್ಯಕತೆಯಿದೆ. ಆದರೆ ಸರ್ಕಾರಿ ಕೈಗಾರಿಕಾ ತರಬೇತಿ ಕೇಂದ್ರಗಳಲ್ಲಿ ಸರಿಯಾದ ಕಂಪ್ಯೂಟರ್ ಗಳೇ ಇಲ್ಲ. ಮೂಲ ಸೌಲಭ್ಯಗಳು ಇಲ್ಲದ ಸ್ಥಿತಿ ಇಂದಿಗೂ ಕಾಡುತ್ತಿದೆ. ಕೂಡಲೇ ಆನ್ ಲೈನ್ ಪರೀಕ್ಷಾ ಪದ್ಧತಿ ರದ್ದುಪಡಿಸಬೇಕೆಂದು ಒತ್ತಾಯಿಸಿದರು. ದ್ವಿತೀಯ ಪಿಯುಸಿ, ಬಿ.ಎ, ಬಿ.ಕಾಂ, ಎಂಬಿಬಿಎಸ್, ಡಿಪ್ಲೋಮಾ ಹಾಗೂ ಇತರ ಉನ್ನತ ಕೋರ್ಸ್ ಪಡೆಯಲು ಯಾವುದೇ ಆನ್ ಲೈನ್ ಪರೀಕ್ಷಾ ಪದ್ಧತಿ ಇಲ್ಲ. ಐಟಿಐ ತರಬೇತಿ ಪಡೆದಂತವರಿಗೆ ಆನ್‌ಲೈನ್ ಪರೀಕ್ಷಾ ಪದ್ಧತಿ ಜಾರಿ ಮಾಡಿದ್ದು ಎಷ್ಟರ ಮಟ್ಟಿಗೆ ಸರಿ?. ಕೂಡಲೇ ಕೇಂದ್ರ ಸರ್ಕಾರ ಮಧ್ಯ ಪ್ರವೇಶಿಸಿ ಆನ್‌ಲೈನ್ ಪರೀಕ್ಷಾ ಪದ್ಧತಿ ಕೈ ಬಿಟ್ಟು ಮೊದಲು ನಡೆಸುವಂತೆಯೇ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿದರು.
ಉದ್ಯೋಗ ಮತ್ತು ತರಬೇತಿ ಇಲಾಖೆಯಿಂದ ಈಗಾಗಲೇ ಎಸ್‌ಸಿ-ಎಸ್‌ಟಿ ತರಬೇತಿದಾರರಿಗೆ ಉಚಿತ ಲ್ಯಾಪ್‌ಟಾಪ್ ಹಾಗೂ ಇತರ ವಸ್ತುಗಳನ್ನು ವಿತರಿಸಲಾಗುತ್ತಿದೆ. ಅದೇ ರೀತಿ ಇತರೆ ಸಮುದಾಯದ ವಿದ್ಯಾರ್ಥಿಗಳಿಗೂ ಉಚಿತ ಲ್ಯಾಪ್‌ಟಾಪ್ ಸೇರಿ ಇತರೆ ವಸ್ತು ನೀಡಬೇಕು. ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಿರ್ಣರಾದ ವಿದ್ಯಾರ್ಥಿಗಳು ಶೇ.80ರಷ್ಟು ಗ್ರಾಮೀಣ ಭಾಗದವರಾಗಿದ್ದು, ಐಟಿಐ ಕೋರ್ಸ್‌ಗೆ ಪ್ರವೇಶ ಪಡೆದಿದ್ದಾರೆ. ಸ್ವಯಂ ಉದ್ಯೋಗಕ್ಕಾಗಿ ಈ ಕೋರ್ಸ್ ಪಡೆಯುತ್ತಿದ್ದಾರೆ. ಆದರೆ ಸರ್ಕಾರ ಜಾರಿ ಮಾಡಿರುವ ಆನ್‌ಲೈನ್ ಪರೀಕ್ಷಾ ಪದ್ಧತಿ ರದ್ದುಪಡಿಸಬೇಕೆಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಹಾಗೂ ಇಲಾಖೆ ಕೂಡಲೇ ಆನ್‌ಲೈನ್ ಪರೀಕ್ಷೆ ರದ್ದುಗೊಳಿಸುವ ಬಗ್ಗೆ ಆದೇಶ ಹೊರಡಿಸಬೇಕು. ಆಫ್‌ಲೈನ್ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಆನ್ ಲೈನ್ ಪರೀಕ್ಷೆಯಿಂದ ವಿದ್ಯಾರ್ಥಿಗಳಿಗೆ ಶುಲ್ಕ ಭರಿಸುವುದು ಕಷ್ಟ. ಈ ಪರಿಸ್ಥಿತಿ ಅರಿತು ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು. ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಹಾಗೂ 7 ವರ್ಷ ಪೂರೈಸಿದ ಐಟಿಐ ಕೇಂದ್ರಗಳನ್ನು ಕೂಡಲೇ ಅನುದಾನಕ್ಕೊಳಪಡಿಸಬೇಕು. ಕೆಇಬಿಯಲ್ಲಿ ಲೈನ್‌ಮನ್ ಹುದ್ದೆಗೆ ಐಟಿಐ ತರಬೇತಿ ಪಡೆದ ಅಭ್ಯರ್ಥಿಗಳಿಗೆ ನೇಮಕಾತಿಯಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ರಾಜ್ಯದ ಗ್ರಾಪಂಗಳಿಗೂ ನೀರಗಂಟಿ ಹುದ್ದೆಗೆ, ನೀರಿನ ವ್ಯವಸ್ಥೆ ನೋಡಿಕೊಳ್ಳುವ ಹುದ್ದೆಗೆ ಐಟಿಐ ಉತ್ತೀರ್ಣರಾದವನ್ನು ನೇಮಕ ಮಾಡಿಕೊಳ್ಳಬೇಕು. ಪೊಲೀಸ್, ಕಂಡಕ್ಟರ್, ಗ್ರಾಮ ಲೆಕ್ಕಿಗ ಸೇರಿ ಇತರ ಹುದ್ದೆಗಳಿಗೂ ಐಟಿಐ ಪೂರೈಸಿದ ಅಭ್ಯರ್ಥಿಗಳನ್ನು ಪರಿಗಣನೆ ಮಾಡಬೇಕು. ಜಿಲ್ಲಾ ಮಟ್ಟದಲ್ಲಿ ಪ್ರತಿ ವರ್ಷ ಐಟಿಐ ಪಾಸಾದ ತರಬೇತಿದಾರರಿಗೆ 15 ದಿನಗಳ ವ್ಯಕ್ತಿತ್ವ ವಿಕಸನ ತರಬೇತಿ ಶಿಬಿರ ಹಮ್ಮಿಕೊಳ್ಳಬೇಕು ಎಂದು ಒತ್ತಾಯಿಸಿ, ನೂರಾರು ಐಟಿಐ ವಿದ್ಯಾರ್ಥಿಗಳು ಗವಿಮಠದಿಂದ ಡಿಸಿ ಕಚೇರಿಯ ವರೆಗೂ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಎಬಿವಿಪಿ ಸಂಘಟನೆ ಮುಖಂಡ ಮಲ್ಲಪ್ಪ ಸೇರಿದಂತೆ ವಿವಿಧ ತಾಲೂಕಿನ ವಿದ್ಯಾರ್ಥಿಗಳು, ಉಪನ್ಯಾಸಕರು ಇದ್ದರು.