Advertisement

ಲೇಹ್‌ಗೆ ಐಟಿಬಿಪಿ ನಿಯೋಜನೆ

12:30 AM Jan 18, 2019 | |

ಹೊಸದಿಲ್ಲಿ: ಭಾರತ-ಚೀನ ಗಡಿಯಲ್ಲಿ ಚೀನ ಸೇನೆ ನಿಯೋಜನೆ ಹೆಚ್ಚುತ್ತಿರುವುದರಿಂದ ಭಾರತ ಕೂಡ ಈ ಭಾಗದ ಗಡಿಯನ್ನು ಭದ್ರಗೊಳಿಸಲು ನಿರ್ಧರಿಸಿದೆ. ಇದಕ್ಕಾಗಿ ಚಂಡೀಗಢದಲ್ಲಿರುವ ಐಟಿಬಿಪಿ ಪಡೆಯನ್ನು ಲೇಹ್‌ಗೆ ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ. ಇದರಿಂದಾಗಿ ಸೇನೆಯ ಹಲವು ವರ್ಷಗಳ ಬೇಡಿಕೆ ಈಡೇರಿದಂತಾಗಿದೆ.

Advertisement

ಚೀನ ಗಡಿ ಶಾಂತವಾಗಿದ್ದಾಗ ಕಾಯಲೆಂದೇ ಐಟಿಬಿಪಿಯನ್ನು ರಚಿಸಲಾಗಿದ್ದು, ಈ ಪಡೆ 3,488 ಕಿ.ಮೀ ಗಡಿಯಲ್ಲಿದೆ. ಆದರೆ ಲೇಹ್‌ನಲ್ಲಿ ಸೇನೆಯೇ ಈ ಕೆಲಸ ಮಾಡುತ್ತಿದೆ. ಇದೀಗ ಲೇಹ್‌ನಲ್ಲಿ ಸೇನೆಯ ಜೊತೆಗೆ ಐಟಿಬಿಪಿ ಕೂಡ ಗಡಿ ಪಹರೆ ನಡೆಸಲಿದೆ. ಕಳೆದ ಕೆಲವೇ ದಿನಗಳ ಹಿಂದೆ ಸರಕಾರ‌ ಈ ಆದೇಶ ಹೊರಡಿಸಿದ್ದು, ಮಾರ್ಚ್‌ ಒಳಗೆ ಇಡೀ ಚಂಡೀಗ‌ಢ ನೆಲೆಯನ್ನು ಲೇಹ್‌ಗೆ ಸ್ಥಳಾಂತರಿಸಿ, ಎಪ್ರಿಲ್‌ 1ರಿಂದ ಕಾರ್ಯನಿರ್ವಹಿಸಲು ಸಿದ್ಧರಾಗಿ ಎಂದು ಸೂಚನೆ ನೀಡಿದೆ.

ಲೆ| ಜನರಲ್‌ ಮಟ್ಟದ ಅಧಿಕಾರಿ ನೇತೃತ್ವದಲ್ಲಿ ಸೇನೆಯ ಪಡೆ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದು, 1999ರಲ್ಲಿ ಕಾರ್ಗಿಲ್‌ ಕದನ ನಡೆದ ಅನಂತರದಿಂದಲೂ ಐಟಿಬಿಪಿಯಿಂದ ಸಹಕಾರಕ್ಕಾಗಿ ಕೋರಲಾಗಿತ್ತು. ಆದರೆ ಸರಕಾರ‌ಗಳು ಈ ಬೇಡಿಕೆಯನ್ನು ನಿರಾಕರಿಸುತ್ತಲೇ ಬಂದಿದ್ದವು. 2015ರಲ್ಲಿ ಸರಕಾರ‌ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲು ಮುಂದಾಗಿತ್ತಾದರೂ ಆಡಳಿತಾತ್ಮಕ ಕಾರಣಗಳಿಗಾಗಿ ಇದು ಸಾಧ್ಯವಾಗಿರಲಿಲ್ಲ.

ಪಾಕ್‌ಗಿಂತ ಒಂದು ಹೆಜ್ಜೆ ಮುಂದಿದ್ದೇವೆ!: ಗಡಿಯಲ್ಲಿ ಕದನ ವಿರಾಮ ಉಲ್ಲಂ ಸುತ್ತಿರುವ ಪಾಕಿಸ್ಥಾನಕ್ಕೆ ನಾವು ತಕ್ಕ ಪ್ರತ್ಯುತ್ತರ ನೀಡುತ್ತಿದ್ದು, ಪಾಕ್‌ಗಿಂತ ನಾವು ಒಂದು ಹೆಜ್ಜೆ ಮುಂದಿದ್ದೇವೆ ಎಂದು ಉತ್ತರ ಸೇನಾ ಕಮಾಂಡರ್‌ ಲೆ|ಜ| ರಣಬೀರ್‌ ಸಿಂಗ್‌ ಹೇಳಿದ್ದಾರೆ. ಕಾಶ್ಮೀರದ ಪೂಂಛ… ಜಿಲ್ಲೆಯಲ್ಲಿ ಕಲೈ ಸೇತುವೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, 2018ರಲ್ಲಿ 250ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈದಿದ್ದೇವೆ. 54 ಜನರನ್ನು ಜೀವಂತ ಸೆರೆಹಿಡಿದಿದ್ದು, 4 ಉಗ್ರರು ಶರಣಾಗಿದ್ದಾರೆ ಎಂದಿದ್ದಾರೆ. ಕಳೆದ ಕೆಲವು ದಿನಗಳಿಂದ ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ ಹೆಚ್ಚುತ್ತಿದ್ದು, ಐವರು ಪಾಕ್‌ ಯೋಧರನ್ನು ಹತ್ಯೆಗೈಯಲಾಗಿದೆ ಎಂದಿದ್ದಾರೆ.

ಉಗ್ರರಿಂದ ಗ್ರೆನೇಡ್‌ ದಾಳಿ: ಮೂವರು ಪೊಲೀಸರಿಗೆ ಗಾಯ
ಶ್ರೀನಗರದಲ್ಲಿ ಗುರುವಾರ ಭದ್ರತಾ ಪಡೆಯ ಮೇಲೆ ಉಗ್ರರು ಗ್ರೆನೇಡ್‌ ದಾಳಿ ನಡೆಸಿದ್ದು, ಮೂವರು ಟ್ರಾಫಿಕ್‌ ಪೊಲೀಸರು ಗಾಯಗೊಂಡಿದ್ದಾರೆ. ನ್ಯಾಶನಲ್‌ ಕಾನ್ಫರೆನ್ಸ್‌ ಪ್ರಧಾನ ಕಚೇರಿ ಹಾಗೂ ಆಲ್‌ ಇಂಡಿಯಾ ರೇಡಿಯೋದ ಸ್ಥಳೀಯ ಕಚೇರಿಯಿಂದ 100 ಮೀಟರ್‌ ದೂರದಲ್ಲಿ ಈ ದಾಳಿ ನಡೆದಿದೆ. ಕೂಡಲೇ ಎಚ್ಚೆತ್ತ ಭದ್ರತಾ ಪಡೆ, ಶೋಧ ಕಾರ್ಯ ಆರಂಭಿಸಿದ್ದು, ಉಗ್ರರ ಪತ್ತೆಗೆ ಬಲೆ ಬೀಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Advertisement

ಪಾಕ್‌ನಿಂದ ಗುಂಡಿನ ದಾಳಿ
ಪಾಕಿಸ್ಥಾನದಿಂದ ಕದನ ವಿರಾಮ ಉಲ್ಲಂಘನೆ ಮುಂದುವರಿದಿದೆ. ಗುರುವಾರವೂ ಜಮ್ಮು- ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಗಡಿ ಗ್ರಾಮಗಳನ್ನು ಗುರಿಯಾಗಿಸಿಕೊಂಡು ಪಾಕ್‌ ಪಡೆ ಶೆಲ್‌ ದಾಳಿ ನಡೆಸಿದೆ. ಪರಿಣಾಮ ಓರ್ವ ನಾಗರಿಕ ಗಾಯಗೊಂಡಿದ್ದಾರೆ. ಭಾರತ-ಪಾಕ್‌ ಗಡಿಯಲ್ಲಿ 2018ರಲ್ಲಿ ಬರೋಬ್ಬರಿ 2,936 ಬಾರಿ ಪಾಕಿಸ್ಥಾನವು ಕದನ ವಿರಾಮ ಉಲ್ಲಂ ಸಿದೆ. ಇದು ಕಳೆದ 15 ವರ್ಷಗಳಲ್ಲೇ ಅತಿ ಹೆಚ್ಚು ಎಂದು ಸೇನಾ ಮೂಲಗಳು ತಿಳಿಸಿವೆ.

ಉಮರ್‌ ಅಬ್ದುಲ್ಲಾ ವಿವಾದ
ಕಳೆದ ವರ್ಷ ಕಣಿವೆ ರಾಜ್ಯದಲ್ಲಿ ಅತ್ಯಧಿಕ ಉಗ್ರರನ್ನು ಸದೆಬಡಿಯಲಾಗಿದೆ ಎಂಬ ಸೇನೆಯ ಮಾಹಿತಿಯನ್ನು ಉಲ್ಲೇಖೀಸಿ ವ್ಯಂಗ್ಯ ಮಾಡುವ ಮೂಲಕ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಉಮರ್‌ ಅಬ್ದುಲ್ಲಾ ವಿವಾದ ಸೃಷ್ಟಿಸಿದ್ದಾರೆ. ನನ್ನ ಪ್ರಕಾರ, “ಒಬ್ಬನೇ ಒಬ್ಬ ಯುವಕನೂ ಉಗ್ರ ಸಂಘಟನೆಗೆ ಸೇರ್ಪಡೆಯಾಗದೇ ಇರುತ್ತಿದ್ದರೆ, ಎನ್‌ಕೌಂಟರ್‌ನಲ್ಲಿ ಯಾವ ಭಯೋತ್ಪಾದಕನೂ ಸಾಯದೇ ಇರುತ್ತಿದ್ದರೆ, ಯಾವ ಯೋಧನೂ ಹುತಾತ್ಮನಾಗದೇ ಇರುತ್ತಿದ್ದರೆ ಅಂಥ ವರ್ಷವನ್ನು ಶ್ರೇಷ್ಠ ವರ್ಷ ಎಂದು ಹೇಳಬಹುದು’ ಎಂದು ಉಮರ್‌ ಟ್ವೀಟ್‌ ಮಾಡಿದ್ದಾರೆ. ಅವರ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next