ಉತ್ತರಾಖಂಡ್: ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಯೋಧರು ಸ್ಥಳೀಯ ವ್ಯಕ್ತಿಯೊಬ್ಬರ ಶವವನ್ನು ಸುಮಾರು 8ಗಂಟೆಗಳ ಕಾಲ ಕಾಲ್ನಡಿಗೆಯಲ್ಲಿ 25 ಕಿಲೋ ಮೀಟರ್ ದೂರ ನಡೆದುಕೊಂಡು ಬಂದು ಮನೆಯವರಿಗೆ ಒಪ್ಪಿಸಿದ ಘಟನೆ ಉತ್ತರಾಖಂಡ್ ಜಿಲ್ಲೆಯ ಪಿಥೋರಾಗಢ್ ನ ಸೈಯೂನಿ ಕುಗ್ರಾಮದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಸ್ಥಳೀಯರು ಕಲ್ಲು ಹೊಡೆದ ಪರಿಣಾಮ ಈ ವ್ಯಕ್ತಿ ಮೃತಪಟ್ಟಿದ್ದ. ವರದಿಯ ಪ್ರಕಾರ 30 ವರ್ಷದ ಸ್ಥಳೀಯ ಯುವಕನೊಬ್ಬ ಸಾವನ್ನಪ್ಪಿರುವ ಬಗ್ಗೆ ಐಟಿಬಿಪಿಗೆ ಮಾಹಿತಿ ನೀಡಲಾಗಿತ್ತು. ಈತ ಪಿಥೋರಾಗಢ್ ಜಿಲ್ಲೆಯ ಸೈಯೂನಿ ಗ್ರಾಮದ ನಿವಾಸಿ ಎಂದು ಮಾಹಿತಿ ನೀಡಿದ್ದರು.
ಮಾಹಿತಿ ತಿಳಿದ ಕೂಡಲೇ ಐಟಿಬಿಪಿ ಯೋಧರು ಸ್ಥಳಕ್ಕೆ ತೆರಳಿ ಶವವನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದ್ದರು. ಈ ಪ್ರದೇಶದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಇದರ ಪರಿಣಾಮ ರಸ್ತೆಗಳ ಮೇಲೆ ಮಣ್ಣು ಕುಸಿದು ಬಿದ್ದು ವಾಹನ ಸಂಚಾರಕ್ಕೂ ಅಡ್ಡಿ ಉಂಟಾಗಿತ್ತು.
ಪರಿಸ್ಥಿತಿಯ ಗಂಭೀರತೆಯನ್ನು ಅವಲೋಕಿಸಿದ ಐಟಿಬಿಪಿ ಯೋಧರು ಸ್ಥಳೀಯ ನಿವಾಸಿಗಳ ನೆರವಿನೊಂದಿಗೆ ಶವವನ್ನು ಸ್ಟ್ರೆಚರ್ ಮೇಳೆ ಮಲಗಿಸಿ ಸುನೈ ಪ್ರದೇಶದಿಂದ 25 ಕಿಲೋ ಮೀಟರ್ ದೂರದ ಮುನ್ಶಿಯಾರಿಗೆ ಹೊತ್ತೊಯ್ಯಲು ನಿರ್ಧರಿಸಿದ್ದರು.
ರಸ್ತೆ ಮೂಲಕ ಮುನ್ಶಿಯಾರಿಗೆ ಕೊಂಡೊಯ್ಯೊದು ಕಷ್ಟಕರ ಕೆಲಸವಾಗಿತ್ತು. ಕೊನೆಗೂ ಶವವನ್ನು ತುಂಬಾ ಜಾಗರೂಗವಾಗಿ ಬರೋಬ್ಬರಿ ಎಂಟು ಗಂಟೆಗಳ ಕಾಲ ನಡೆದುಕೊಂಡು ಹೋಗಿ ಮನೆಯವರಿಗೆ ಹಸ್ತಾಂತರಿಸಿದ್ದರು.
ಎಂಟು ಮಂದಿ ಸೈನಿಕರು ಶವವನ್ನು ಹೊತ್ತು 25 ಕಿಲೋ ಮೀಟರ್ ನಡೆದುಕೊಂಡು ಹೋಗಿ ಕುಟುಂಬದ ಸದಸ್ಯರಿಗೆ ನೀಡಿದ್ದರು. ನಂತರ ಬಂಗಾಪಾನಿ ಗ್ರಾಮದಲ್ಲಿ ಅಂತಿಮ ಗೌರವ ಸಲ್ಲಿಸಿ ಶವಸಂಸ್ಕಾರ ನಡೆದ ನಂತರ ಯೋಧರು ವಾಪಸ್ ಆಗಿರುವುದಾಗಿ ವರದಿ ತಿಳಿಸಿದೆ.