ಶ್ರೀನಗರ: ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ದಳದ 37 ಯೋಧರು ಮತ್ತು ಇಬ್ಬರು ಜಮ್ಮು-ಕಾಶ್ಮೀರ ಪೊಲೀಸ್ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಬಸ್ ಚಂದನ್ವಾರಿ ಮತ್ತು ಪಹಲ್ಗಾಮ್ ನಡುವಿನ ಕಂದಕಕ್ಕೆ ಉರುಳಿ ಬಿದ್ದಿರುವ ಘಟನೆ ಮಂಗಳವಾರ (ಆಗಸ್ಟ್ 16) ನಡೆದಿದ್ದು, ಘಟನೆಯಲ್ಲಿ ಆರು ಮಂದಿ ಐಟಿಬಿಪಿ ಯೋಧರು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:ಬಜರಂಗದಳದ ಕಾರ್ಯಕರ್ತನ ಮೇಲೆ ಹಲ್ಲೆ ಪ್ರಕರಣ: ಕಾರಣ ಬಹಿರಂಗ
ಬಸ್ ಆಳವಾದ ಕಂದಕಕ್ಕೆ ಬಿದ್ದ ಪರಿಣಾಮ ಆರು ಮಂದಿ ಯೋಧರು ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದು, ಅವರನ್ನೆಲ್ಲಾ ಏರ್ ಲಿಫ್ಟ್ ಮೂಲಕ ಶ್ರೀನಗರದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತಕ್ಕೆ ಕಾರಣ ಏನೆಂಬುದು ಇನ್ನಷ್ಟೇ ತಿಳಿದು ಬರಬೇಕಾಗಿದೆ. ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದು, ಉಳಿದ ನಾಲ್ವರು ನಂತರ ಸಾವನ್ನಪ್ಪಿರುವುದಾಗಿ ವರದಿ ಹೇಳಿದೆ. ಗಾಯಗೊಂಡಿರುವವರ ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿ ವಿವರಿಸಿದೆ.
ಅಮರನಾಥ್ ಯಾತ್ರೆಯ ಭದ್ರತೆಗಾಗಿ 37 ಐಟಿಬಿಪಿ ಯೋಧರನ್ನು ಮತ್ತು ಇಬ್ಬರು ಜಮ್ಮು-ಕಾಶ್ಮೀರ ಪೊಲೀಸರನ್ನು ನಿಯೋಜಿಸಲಾಗಿತ್ತು. ಯಾತ್ರೆ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅಮರನಾಥನಿಂದ ವಾಪಸ್ ಆಗುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ ಎಂದು ವರದಿ ತಿಳಿಸಿದೆ.