ಇಟಲಿ: ಎರಡು ತಿಂಗಳ ಬಳಿಕ ಲಾಕ್‌ಡೌನ್ ಸಂಪೂರ್ಣ ತೆರವಿಗೆ ಇಟಲಿ ಸಿದ್ಧತೆ ಪೂರ್ಣಗೊಳಿಸಿದೆ. ಮೇ 4ರಿಂದ ಕೈಗಾರಿಕೆಗಳೂ ಸೇರಿದಂತೆ ಇನ್ನಿತರ ಚಟುವಟಿಕೆಗಳು ಪುನರಾರಂಭಗೊಳ್ಳಲಿದೆ. ಈ ಕುರಿತು ಪ್ರಧಾನಿ ಗ್ಯುಸೆಪ್ಪ್ ಕಾಂಟೆ, ದೇಶವನ್ನು ಲಾಕ್‌ಡೌನ್ ನಿಂದ ತೆರವುಗೊಳಿಸುವತ್ತ ಕಾರ್ಯೋನ್ಮುಖವಾಗಿ ದ್ದೇವೆ. ಹಾಗೆಂದು ನಾವು ಬಿಕ್ಕಟ್ಟಿನಿಂದ ಸಂಪೂರ್ಣವಾಗಿ ಹೊರ ಬಂದಿಲ್ಲ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಸೋಂಕಿನೊಟ್ಟಿಗೆ ಜೀವನ ನಡೆಸಬೇಕಾದ ಪರಿಸ್ಥಿತಿ ಇದೆ. ಹಾಗಾಗಿ ಪ್ರತಿಯೊಬ್ಬರೂ ಸುರಕ್ಷಾ ನಿಯಮಗಳನ್ನು ಪಾಲಿಸಬೇಕು ಎಂದಿದ್ದಾರೆ. ಸುಮಾರು 45 ಲಕ್ಷ ಕಾರ್ಮಿಕರು ಸೋಮವಾರದಿಂದ ಕೆಲಸಕ್ಕೆ ಸಜ್ಜುಗೊಳ್ಳುತ್ತಿದ್ದಾರೆ. ಸಂಪೂರ್ಣ ಲಾಕ್‌ಡೌನ್ ಮತ್ತೆ ಸೋಂಕಿಗೆ ಕಾರಣವಾಗ ಬಹುದೇ ಎಂಬ ಆತಂಕದಿಂದ ಜನರೇ ಹೊರ ಬರಲು ಒಪ್ಪುತ್ತಿಲ್ಲ.
ಉದ್ಯಾನವನಗಳು ತೆರವುಗೊಳ್ಳಲಿದ್ದು, ಧಾರ್ಮಿಕ ಸಮಾರಂಭಗಳ ಆಯೋಜನೆಗೆ ನಿರ್ಬಂಧವಿದೆ. ಮ್ಯೂಸಿಯಂ, ಗ್ರಂಥಾಲಯಗಳು ಮೇ 18 ರಿಂದ ಪ್ರಾರಂಭಗೊಳ್ಳಲಿವೆ. ರೆಸ್ಟೋರೆಂಟ್‌ಗಳು ಮತ್ತು ಬಾರ್‌ಗಳು ಜೂನ್ ಮೊದಲ ವಾರದಿಂದ ಹಾಗೂ ಶಾಲಾ-ಕಾಲೇಜುಗಳು ಸೆಪ್ಟಂಬರ್ ಬಳಿಕ ಆರಂಭಗೊಳ್ಳುವ ನಿರೀಕ್ಷೆಯಿದೆ.
ಯುರೋಝೋನ್‌ನ ಹಲವು ರಾಷ್ಟ್ರ ಗಳೂ ಆರ್ಥಿಕ ಸಂಕಷ್ಟಕ್ಕೆ ಗುರಿಯಾಗಿವೆ. ಈ ಒತ್ತಡವೂ ಏಕಾಏಕಿ ಲಾಕ್‌ಡೌನ್ ತೆರವಿಗೆ ಕಾರಣ ಎನ್ನಲಾಗುತ್ತಿದೆ. ಈ ಮಧ್ಯೆಯೇ ಪ್ರಧಾನಿ ನಿಲುವಿಗೆ ಜನರಿಂದ ಅಸಮಾಧಾನವೂ ವ್ಯಕ್ತವಾಗುತ್ತಿದೆ.