ಹೊಸದಿಲ್ಲಿ: ವಿಶ್ವದ ಬೇರೆ ಭಾಗಗಳಂತೆ ಭಾರತಕ್ಕೆ ಕೋವಿಡ್ ಅಷ್ಟು ಭೀಕರವಾಗಿ ಬಾಧಿಸಿಲ್ಲ. ಲಾಕ್‌ಡೌನ್ ತೆರವಿನ ಅನಂತರ ಸಹಜ ಸ್ಥಿತಿಗೆ ಮರಳಿ ದ್ದೇವೆ. ಬೃಹತ್ ಜನಸಂಖ್ಯೆಯ ನಡುವೆಯೂ ಸಾವುಗಳನ್ನು ಕಟ್ಟಿಹಾಕಿದ್ದೇವೆ. ಭಾರತದಲ್ಲಿ ಚೇತರಿಕೆ ಪ್ರಮಾಣ ಶೇ.50ಕ್ಕಿಂತ ಅಧಿಕವಿದೆ. ನಾವು ತೆಗೆದು ಕೊಂಡ ಸಮಯೋಚಿತ ನಿರ್ಧಾರದಿಂದ ಇದು ಸಾಧ್ಯವಾಗಿದೆ ಎಂದು ಪ್ರಧಾನಿ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಖ್ಯಮಂತ್ರಿಗಳ ಜತೆಗಿನ 2 ದಿನಗಳ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಮಂಗಳವಾರ 21 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಿಎಂಗಳ ಜತೆಗೆ ಪ್ರಧಾನಿ ಚರ್ಚಿಸಿದರು. ಲಾಕ್‌ಡೌನ್ ತೆರವುಗೊಂಡು 2 ವಾರಗಳು ಕಳೆದಿವೆ. ಈ ಸಮಯದ ನಮ್ಮ ಅನುಭವವೇ ಭವಿಷ್ಯಕ್ಕೆ ದಿಕ್ಸೂಚಿ. ನಾನು ನಿಮ್ಮಿಂದ ವಾಸ್ತವಾಂಶ ತಿಳಿಯಲು ಬಯಸುತ್ತೇನೆ. ನಿಮ್ಮ ಸಲಹೆಗಳು ಭವಿಷ್ಯದ ಕಾರ್ಯತಂತ್ರ ರೂಪಿಸಲು ನೆರವಾಗುತ್ತದೆ ಎಂದು ಹೇಳಿದರು.
ಒಕ್ಕೂಟ ವ್ಯವಸ್ಥೆಗೆ ಉತ್ತಮ ಸಾಕ್ಷಿ: ಭವಿಷ್ಯದಲ್ಲಿ ಕೊರೊನಾ ವಿರುದ್ಧ ಹೋರಾಡಲು ನಮಗೆ ಈ ದಿನಗಳ ನೆನಪು ಅಮೂಲ್ಯ. ಏಕೆಂದರೆ ನಾವೆಲ್ಲ ಒಗ್ಗಟ್ಟಾಗಿ ಕೆಲಸ ಮಾಡಿದ್ದೇವೆ. ಸಹಕಾರಿ ಒಕ್ಕೂಟ ವ್ಯವಸ್ಥೆಯ ಉತ್ತಮ ನಿದರ್ಶನವಿದು. ಆರ್ಥಿಕತೆಯನ್ನು ವೇಗಗೊಳಿಸುತ್ತಲೇ ನಾವು ಕೊರೊನಾ ನಿಯಂತ್ರಿಸಲೂ ಸಮರ್ಥರಾಗಬೇಕು. ಕಚೇರಿಗಳು, ಮಾರುಕಟ್ಟೆಗಳು ತೆರೆಯಬೇಕು. ವಾಹನಗಳು ಸಂಚರಿಸಬೇಕು. ಈ ಮೂಲಕ ಹೊಸ ಆದಾಯದ ಮೂಲಗಳು ಹುಟ್ಟುತ್ತವೆ ಎಂದು ವಿವರಿಸಿದರು.
ಕೈಗಾರಿಕೆಗಳ ಕೈಹಿಡಿಯೋಣ: ಸಂಕಷ್ಟದಲ್ಲಿರುವ ಸಣ್ಣ ಕಾರ್ಖಾನೆಗಳ ಕೈಹಿಡಿವ ಅವಶ್ಯಕತೆಯಿದೆ. ನಿಮ್ಮ ಮೇಲ್ವಿಚಾರಣೆಯಲ್ಲಿ ಆ ಕೆಲಸಗಳು ನಡೆಯುತ್ತಿವೆ ಎಂಬು ದನ್ನು ಬಲ್ಲೆ. ಕೃಷಿ ಉತ್ಪನ್ನಗಳ ಮಾರಾಟದಲ್ಲಿ ಸುಧಾರಣೆ ತಂದ ನಂತರ ರೈತರಿಗೆ ಬಹಳಷ್ಟು ಅನುಕೂಲವಾಗಿದೆ. ಸ್ವದೇಶಿ ಉತ್ಪನ್ನಗಳತ್ತ ಹೆಚ್ಚು ಗಮನ ನೀಡೋಣ. ಜಿಲ್ಲಾ ಮಟ್ಟಗಳಲ್ಲಿ ಇಂಥ ಉತ್ಪನ್ನಗಳನ್ನು ಗುರುತಿಸಿ ಜಾಗತಿಕ ಮಾರುಕಟ್ಟೆಗೆ ಪರಿಚಯಿಸೋಣ ಎಂದು ಕರೆನೀಡಿದರು.
ಹೊಸ ಚಿಗುರು: ನಾವು ಆರ್ಥಿಕತೆಯಲ್ಲಿ ಹೊಸ ಚಿಗುರುಗಳನ್ನು ನೋಡುತ್ತಿದ್ದೇವೆ. ವಿದ್ಯುತ್ ಬಳಕೆ ಹೆಚ್ಚಾಗಿದೆ. ದ್ವಿಚಕ್ರ ವಾಹನಗಳ ಮಾರಾಟ ಲಾಕ್‌ಡೌನ್ ಪೂರ್ವದ ಶೇ.70ರಷ್ಟಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಿಣರಾಯ್, ಮಮತಾ ಗೈರು
ಲಾಕ್‌ಡೌನ್ ಅನಂತರವೂ ಕೇರಳ, ಪ. ಬಂಗಾಲ ಎಂದಿನ ಉದ್ಧಟತನ ಪ್ರದರ್ಶಿಸಿವೆ. “2 ದಿನಗಳ ಸಭೆಯಲ್ಲಿ 36ರಲ್ಲಿ ಕೇವಲ 13 ಸಿಎಂಗಳಿಗೆ ಮಾತ್ರವೇ ಮಾತನಾಡಲು ಅವಕಾಶ ನೀಡಲಾಗಿದೆ’ ಎಂಬ ಕುಂಟುನೆಪವೊಡ್ಡಿ ಪ. ಬಂಗಾಲ ಸಿಎಂ ಮಮತಾ ಬ್ಯಾನರ್ಜಿ ಸಭೆಯಿಂದ ದೂರ ಉಳಿದಿದ್ದಾರೆ. ಕೇರಳ ಸಿಎಂ ಪಿಣರಾಯ್ ವಿಜಯನ್ ಮಂಗಳವಾರ ಕಡೇ ಕ್ಷಣದಲ್ಲಿ ಕೈಕೊಟ್ಟರು.
ಮೊದಲ ದಿನ ಪಾಲ್ಗೊಂಡಿದ್ದ ರಾಜ್ಯಗಳು
ಪಂಜಾಬ್, ಕೇರಳ, ಗೋವಾ, ಉತ್ತರಖಂಡ, ಜಾರ್ಖಂಡ್, ಈಶಾನ್ಯ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು
ಇಂದು ಯಾವ ರಾಜ್ಯಗಳು?
ಬುಧವಾರ ಪ್ರಧಾನಿ ಕರ್ನಾಟಕವೂ ಸೇರಿದಂತೆ 15 ರಾಜ್ಯಗಳ ಸಿಎಂಗಳ ಜತೆಗೆ ಚರ್ಚಿಸಲಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ, ಪ.ಬಂಗಾಳ, ದಿಲ್ಲಿ, ಗುಜರಾತ್, ಬಿಹಾರ್, ಉತ್ತರ ಪ್ರದೇಶ ಪ್ರಮುಖವಾಗಿ ಭಾಗಿಯಾಗಲಿವೆ.