ಅನಾದಿ ಕಾಲದಿಂದಲೂ ವಿದೇಶ ವ್ಯವಹಾರದ ವಿಚಾರದಲ್ಲಿ ಭಾರತದ್ದು ಸ್ವತಂತ್ರ ನಿಲುವು. ಇದು ಇಂದಿನದ್ದಲ್ಲ. ದೇಶದ ಮೊದಲ ಪ್ರಧಾನಿ ಜವಾ ಹರ್ ಲಾಲ್ ನೆಹರೂ ಅವರ ಕಾಲದಿಂದಲೂ ಇದು ನಡೆದುಕೊಂಡು ಬರು ತ್ತಿದೆ. ಅಂದರೆ ಆಗ ಅಮೆರಿಕ ಮತ್ತು ಸೋವಿಯತ್ ಒಕ್ಕೂಟ ನಡುವಿನ ಶೀತಲ ಸಮರದ ವೇಳೆಯಲ್ಲಿ ಭಾರತ ಯಾರ ಜತೆಗೂ ನಿಲ್ಲದೇ ತಟಸ್ಥ ಧೋರಣೆ ಅನುಸರಿಸಿತ್ತು. ಹಾಗೆಯೇ ಇಡೀ ಜಗತ್ತಿನಲ್ಲಿ ಯಾರೇ ಯುದ್ಧ ಮಾಡಿದರೂ ಒಬ್ಬರ ಬೆಂಬಲಕ್ಕೆ ಹೋಗದೇ ಇರುವ ಆಲಿಪ್ತ ನೀತಿಯನ್ನೂ ಜಾರಿ ಮಾಡಿಕೊಂಡು ಬರಲಾಗಿತ್ತು; ಇದನ್ನು ಈಗಲೂ ಮುಂದುವರಿಸಿಕೊಂಡು ಬರಲಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ದೇಶದ ವಿದೇಶಾಂಗ ನೀತಿ ಮತ್ತಷ್ಟು ಗಟ್ಟಿಯಾಗಿದೆ. ಅದು ಉಕ್ರೇನ್ ಮೇಲಿನ ರಷ್ಯಾ ದಾಳಿಯ ವೇಳೆಯಲ್ಲೂ ಸಾಬೀ ತಾ ಗಿದೆ. ಜಗತ್ತಿನ ಯಾವುದೇ ದೇಶದ ಮಾತು ಕೇಳದೇ, ತನ್ನದೇ ಆದ ಸ್ವತಂತ್ರ ವಿದೇಶಾಂಗ ನೀತಿ ಅನುಸರಿಸಿಕೊಂಡು ಬರುತ್ತಿರುವ ಭಾರತ, ರಷ್ಯಾ ಜತೆಗಿನ ತನ್ನ ಹಿಂದಿನ ಸಂಬಂಧವನ್ನು ಹಾಗೇ ಉಳಿಸಿಕೊಂಡು, ಆ ದೇಶಕ್ಕೆ ಯುದ್ಧದಿಂದಲೇ ಎಲ್ಲವನ್ನೂ ಗೆಲ್ಲಲು ಸಾಧ್ಯವಿಲ್ಲ ಎಂಬ ನೀತಿ ಪಾಠವನ್ನೂ ಹೇಳಿದೆ.
ಇನ್ನು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಐರೋಪ್ಯ ಒಕ್ಕೂಟವೂ ಸೇರಿದಂತೆ ಪ್ರಬಲ ದೇಶಗಳಿಗೇ ಸರಿಯಾದ ರೀತಿಯಲ್ಲೇ ತಿರುಗೇಟು ನೀಡಿದ್ದಾರೆ. ಅದರಲ್ಲೂ ರಷ್ಯಾದಿಂದ ತೈಲ ಖರೀದಿ ವಿಚಾರದಲ್ಲಿ ವಿದೇಶಿ ಮಾಧ್ಯ ಮಗಳು ಭಾರತವನ್ನು ಟೀಕಿಸಿದಾಗಲೂ, ಮೊದಲು ನೀವೆಷ್ಟು ತೈಲ ತರಿಸಿ ಕೊಳ್ಳುತ್ತಿದ್ದೀರಿ ಎಂಬುದನ್ನು ಮೊದಲು ನೋಡಿಕೊಂಡು ಬಳಿಕ ಭಾರತದ ಬಗ್ಗೆ ಮಾತನಾಡಿ ಎಂದು ಖಂಡತುಂಡವಾಗಿ ಹೇಳಿದ್ದಾರೆ.
ಈಗ ಅಮೆರಿಕ ಪ್ರವಾಸದಲ್ಲಿರುವ ಜೈಶಂಕರ್ ಅವರು, ಪಾಕಿಸ್ಥಾನಕ್ಕೆ ಅಮೆರಿಕವು ಎಫ್ 16 ಯುದ್ಧ ವಿಮಾನಗಳನ್ನು ನೀಡಲು ಮುಂದಾಗಿರುವ ಕ್ರಮ ವನ್ನು ಪ್ರಶ್ನಿಸಿದ್ದಾರೆ. ಅಮೆರಿಕದ ಈ ಕ್ರಮವನ್ನು ಟೀಕಿಸಿರುವ ಅವರು, ನೀವು ಯಾರನ್ನೂ ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ ಎಂದು ಬಿಸಿ ಮುಟ್ಟಿ ಸಿದ್ದಾರೆ. ಪಾಕಿಸ್ಥಾನವು ಈ ಯುದ್ಧ ವಿಮಾನ ಗಳನ್ನು ಪಡೆದು ಅವುಗಳನ್ನು ಎಲ್ಲಿ ನಿಯೋಜನೆ ಮಾಡುತ್ತದೆ ಎಂಬುದು ಇಡೀ ಜಗತ್ತಿಗೇ ಗೊತ್ತು. ಆ ದೇಶವು ಉಗ್ರಗಾಮಿಗಳಿಗೆ ಪೋಷಣೆ ಮಾಡಿಕೊಂಡೇ ಬರುತ್ತಿರುವ ದೇಶವಾಗಿದೆ. ಹೀಗಾಗಿ ಅವರಿಗೆ ಎಫ್ 16 ಯುದ್ಧ ವಿಮಾನಗಳನ್ನು ನೀಡುವ ಆವಶ್ಯಕತೆಯಾದರೂ ಏನಿತ್ತು ಎಂದು ಪ್ರಶ್ನಿಸಿದ್ದಾರೆ.
ವಿಚಿತ್ರವೆಂದರೆ, ಪಾಕಿಸ್ಥಾನ ವಿರುದ್ಧ ಅಮೆರಿಕದಲ್ಲಿದ್ದ ಹಿಂದಿನ ಡೊನಾಲ್ಡ್ ಟ್ರಂಪ್ ಸರಕಾರ, ಕಠಿನ ನೀತಿಯನ್ನೇ ಅನುಸರಿಸಿತ್ತು. ಪಾಕಿ ಸ್ಥಾನದ ದ್ವಿಮುಖ ನೀತಿಯನ್ನು ಟೀಕಿಸಿದ್ದ ಅದು, ಅಲ್ಲಿಗೆ ಮಿಲಿಟರಿ ನೆರವು ನೀಡುವುದನ್ನು ಸ್ಥಗಿತ ಮಾಡಿತ್ತು. ಆದರೆ ಈಗ ಜೋ ಬೈಡೆನ್ ಅವರ ಸರಕಾರ, ಟ್ರಂಪ್ ಸರಕಾರದ ಕ್ರಮವನ್ನು ರದ್ದು ಮಾಡಿ, ಮತ್ತೆ ಪಾಕಿಸ್ಥಾನದ ಮೇಲೆ ಪ್ರೀತಿ ತೋರುವ ಕೆಲಸ ಮಾಡುತ್ತಿದೆ.
ಪಾಕಿಸ್ಥಾನ ಎಂಥ ರಾಷ್ಟ್ರ ಎಂಬುದು ಇಡೀ ಜಗತ್ತಿಗೇ ಗೊತ್ತಿರುವ ಸಂಗತಿ. ಒಂದು ಕಡೆ ಉಗ್ರರನ್ನು ಸಾಕಿಕೊಂಡು, ಚೀನದ ಜತೆ ಸೇರಿಕೊಂಡು ಭಾರತದ ವಿರುದ್ಧ ಕತ್ತಿ ಮಸೆಯುತ್ತಲೇ ಇದೆ. ಭಾರತ ಇಂದಿಗೂ ವಿಶ್ವಶಾಂತಿಗಾಗಿ ಕೆಲಸ ಮಾಡುತ್ತಿರುವ ದೇಶವಾಗಿದ್ದು, ತನ್ನದೇ ಆದ ಸ್ವತಂತ್ರ ನಿಲುವನ್ನು ಹೊಂದಿದೆ. ಇಂಥ ಹೊತ್ತಿನಲ್ಲಿ ಮತ್ತೆ ಅಮೆರಿಕ ಎಫ್ 16 ಯುದ್ಧ ವಿಮಾನ ನೀಡಿದ್ದು ಖಂಡನಾರ್ಹ ಸಂಗತಿಯೇ ಸರಿ.