Advertisement

ಐಟಿ ವಿಷನ್‌ ಗ್ರೂಪ್‌, ತಂತ್ರಜ್ಞಾನ ಅಭಿವೃದ್ಧಿ ಮಂಡಳಿ:  ಹೊಸ ನಿರೀಕ್ಷೆ

07:21 PM Dec 28, 2019 | mahesh |

ಭಾರತವೂ ತಂತ್ರಜ್ಞಾನ ಪೂರಕವಾಗಿ ಬೆಳೆದು ನಿಂತಿದೆ. ಎಲ್ಲ ಕ್ಷೇತ್ರಗಳಲ್ಲಿಯೂ ಕೂಡ ಇಂದು ತಂತ್ರಜ್ಞಾನ ಅಳವಡಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಆರಂಭಿಸಲಾಗುವ ಸ್ಮಾರ್ಟಾಪ್‌ಗ್ಳು ಕೂಡ ಹೆಚ್ಚಿನ ಉದ್ಯೋಗಾ ವಕಾಶಗಳ ಜತೆಗೆ ನಗರಗಳು ಅಭಿವೃದ್ಧಿಗೆ ಸಹಕಾರಿ ಯಾಗಿದೆ. ಏತನ್ಮಧ್ಯೆ ರಾಜ್ಯ ಸರಕಾರವೂ ಐಟಿ ವಿಷನ್‌ ಗ್ರೂಪ್‌, ಕೆಟಿಡಿಬಿ ಆರಂ ಭಿಸಲು ಐಟಿ ಇಲಾಖೆಗೆ ಜವಾಬ್ದಾರಿ ನೀಡಲಾಗಿದೆ. ಈ ಪ್ರಸ್ತಾವವೂ ಮಂಗಳೂರು ನಗರಕ್ಕೆ ಅನುಷ್ಟಾನಗೊಳ್ಳುವ ಅಶಾವಾದ ಗರಿಗೆದರಿದೆ.

Advertisement

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕದ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸುವ ಹಾಗೂ ದೇಶದಲ್ಲಿ ರಾಜ್ಯವನ್ನು ಸ್ಟಾರ್ಟಾಪ್‌ ಕೇಂದ್ರವಾಗಿ ರೂಪಿಸುವ ದೃಷ್ಟಿಯಿಂದ ರಾಜ್ಯ ಸರಕಾರ “ಐಟಿ ವಿಷನ್‌ ಗ್ರೂಪ್‌ ಹಾಗೂ “ಕರ್ನಾಟಕ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ’ (ಕೆಟಿಡಿಬಿ ) ಸ್ಥಾಪಿಸುತ್ತಿದೆ. ಈ ಮಹತ್ವಾಕಾಂಕ್ಷೆಯ ಉಪಕ್ರಮವನ್ನು ಅನುಷ್ಟಾನಗೊಳಿಸುವ ಜವಾಬ್ದಾರಿಯನ್ನು ಐಟಿ-ಬಿಟಿ ಇಲಾಖೆಗೆ ನೀಡಿರುವ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈಗಾಗಲೇ ಇದಕ್ಕೆ ಸಂಬಂಧಿಸಿದಂತೆ ಎರಡು ಪ್ಯಾನಲ್‌ಗ‌ಳನ್ನು ಘೋಷಣೆ ಮಾಡಿದ್ದಾರೆ. ರಾಜ್ಯದ ಪಾಲಿಗೆ ಅದರಲ್ಲೂ ಈ ರೀತಿಯ ಪೂರಕ ವ್ಯವಸ್ಥೆಯ ನಿರೀಕ್ಷೆಯಲ್ಲಿರುವ ಮಂಗಳೂರಿಗೆ ಇದೊಂದು ಆಶಾದಾಯಕ ಬೆಳವಣಿಗೆಯಾಗಿದೆ. ರಾಜ್ಯದ ಎರಡನೇ ಐಟಿ ಕೇಂದ್ರವಾಗಿ ಮತ್ತು ಹೂಡಿಕೆಯ ತಾಣವಾಗಿ ಮಂಗಳೂರನ್ನು ಬೆಳೆಸುವ ರಾಜ್ಯ ಸರಕಾರದ ಬಹುಕಾಲದ ಪ್ರಸ್ತಾವ ಅನುಷ್ಟಾನಕ್ಕೆ ಬರುವ ಆಶಾವಾದ ಗರಿಗೆದರಿದೆ.

ಮಂಗಳೂರು, ಮೈಸೂರು, ಬೆಳಗಾವಿ, ಹುಬ್ಬಳ್ಳಿ ಮುಂತಾದ ರಾಜ್ಯದ ಎರಡನೇ ಹಂತದ ನಗರಗಳಲ್ಲಿ ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ನೀತಿಯೊಂದನ್ನು ಸಿದ್ಧಪಡಿಸುವ ಹೊಣೆಗಾರಿಕೆಯನ್ನು ಕರ್ನಾಟಕ ತಂತ್ರಜ್ಞಾನ ಅಭಿವೃದ್ಧಿ ಮಂಡಳಿಗೆ ವಹಿಸಿಕೊಡಲಾಗಿದೆ.

ವಿಷನ್‌ ಗ್ರೂಪ್‌, ಕೆಟಿಡಿಬಿ
ವಿಷನ್‌ ಗ್ರೂಪ್‌ ರಾಜ್ಯದಲ್ಲಿ ಸ್ಟಾರ್ಟಾಪ್‌ಗ್ಳಿಗೆ ಉತ್ತೇಜನ ಹಾಗೂ ಪೂರಕ ವಾತಾವರಣ ರೂಪಿಸಲು ರಾಜ್ಯ ಸರಕಾರದಿಂದ ಸಿದ್ಧಪಡಿಸಲು ಉದ್ದೇಶಿಸಿರುವ ನೀತಿ ಯಾವುದೆಲ್ಲಾ ಅಂಶಗಳನ್ನು ಒಳಗೊಳ್ಳಬೇಕು ಎಂಬ ಬಗ್ಗೆ ಸಲಹೆ ಮಾಡಲಿದೆ. ಕರ್ನಾಟಕ ತಂತ್ರಜ್ಞಾನ ಅಭಿವೃದ್ಧಿ ಮಂಡಳಿ ಹೂಡಿಕೆಗಳಿಗೆ ಉತ್ತೇಜನ, ಮಾನವ ಸಂಪನ್ಮೂಲ ಅಭಿವೃದ್ಧಿ ಹಾಗೂ ಉದ್ದಿಮೆಗಳ ಆವಶ್ಯಕತೆಗಳ ಪೂರೈಸುವ ನಿಟ್ಟಿನಲ್ಲಿ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ವಿಷನ್‌ ಗ್ರೂಪ್‌ ದೇಶದ, ರಾಜ್ಯದ ಪ್ರಮುಖ ಉದ್ದಿಮೆಗಳ ಪ್ರಮುಖರು ಹಾಗೂ ಇಲಾಖೆಗಳ ಅಧಿಕಾರಿಗಳನ್ನು ಒಳಗೊಂಡಿದ್ದು 5 ಅಂಶಗಳ ಕಾರ್ಯಸೂಚಿಯನ್ನು ವಿಷನ್‌ ಗ್ರೂಪ್‌ಗೆ ನೀಡಲಾಗಿದೆ. ಉದ್ಯಮಶೀಲತೆಗೆ ಉತ್ತೇಜನ, ಸ್ಟಾರ್ಟಾಪ್‌ಗ್ಳನ್ನು ಸಧೃಡಗೊಳಿಸುವುದು ಮತ್ತು ಅನುಕೂಲಕರ ವಾತಾವರಣ ಸೃಷ್ಠಿ ಹಾಗೂ ಇವುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಒಳನೋಟಗಳು, ಇನ್‌ಕುಬೇಶನ್‌ ಬೆಂಬಲವನ್ನು ಹೆಚ್ಚಿಸುವುದು, ನಾವೀನ್ಯತೆಗಳಿಗೆ ಉತ್ತೇಜನ ಹಾಗೂ ಈ ಪ್ರಕ್ರಿಯೆಗಳಲ್ಲಿ ವಿವಿಧ ಉದ್ದಿಮೆದಾರರನ್ನು ಹಾಗೂ ತಜ್ಞರ ಒಳಗೊಳ್ಳುವಿಕೆ ವಿಷನ್‌ ಗ್ರೂಪ್‌ ಕಾರ್ಯಸೂಚಿಯಲ್ಲಿ ಸೇರಿದೆ.

ಕಾರ್ಯರೂಪಕ್ಕೆ ಬಾರದ ಪ್ರಸ್ತಾವನೆ
ಹೂಡಿಕೆಗಳಿಗೆ ಗುರುತಿಸಲಾಗಿರುವ ನಗರಗಳಲ್ಲಿ ಮಂಗಳೂರು ಮುಂಚೂಣಿಯಲ್ಲಿ ಸ್ಥಾನ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಒಂದಷ್ಟು ಹೂಡಿಕೆ ಪ್ರಸ್ತಾವನೆಗಳು ಕೂಡ ಈ ಹಿಂದೆ ರೂಪುಗೊಂಡಿದ್ದವು. ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಸಭೆಗಳು ಆಯೋಜನೆಗೊಂಡಿದ್ದವು. ಆದರೆ ಇವುಗಳು ಕಾರ್ಯರೂಪಕ್ಕೆ ಬರುವಲ್ಲಿ ಯಶಸ್ವಿಯಾಗಲಿಲ್ಲ. ಮಂಗಳೂರನ್ನು ರಾಜ್ಯದ ಎರಡನೇ ಐಟಿ ಹಬ್‌ ಆಗಿ ಅಭಿವೃದ್ಧಿಪಡಿಸುವ ಭರವಸೆಗಳು ಹಲವಾರು ವರ್ಷದಿಂದ ಕೇಳಿಬರುತ್ತಿವೆ. ಬೆಂಗಳೂರು ಬಿಟ್ಟರೆ ರಾಜ್ಯದ 2ನೇ ಐಟಿ ಹಬ್‌ ಆಗುವ ಎಲ್ಲ ಅರ್ಹತೆ ಮತ್ತು ಅವಕಾಶಗಳನ್ನು ಮಂಗಳೂರು ಹೊಂದಿದೆ. ಮಂಗಳೂರಿಗೆ ಐಟಿ ಉದ್ಯಮಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಕೈರಂಗಳ ಐಟಿ ಎಸ್‌ಇಝಡ್‌ ಸ್ಥಾಪಿಸಲಾಗಿದೆ. ಇಲ್ಲಿಗೆ ಈಗಾಗಲೇ ವಿಶಾಲ ಮತ್ತು ಸುಸಜ್ಜಿತ ರಸ್ತೆ ನಿರ್ಮಾಣವಾಗಿದೆ. ಐಟಿ ಉದ್ಯಮಗಳಿಗೆ ಉತ್ತೇಜನ ನೀಡಲು ಸಾಫ್ಟ್‌ವೇರ್‌ ಪಾರ್ಕ್‌ ಟೆಕ್ನಾಲಜಿ ಪಾರ್ಕ್ಸ್ ಆಫ್‌ ಇಂಡಿಯಾ (ಎಸ್‌ಟಿಪಿಐ ) ಕೇಂದ್ರ ಕಾರ್ಯಾಚರಿಸುತ್ತಿದೆ.

Advertisement

ಈಗ ಹೊಸದಾಗಿ ಕೈಗಾರಿಕ ನೀತಿ ರೂಪುಗೊಂಡಿದೆ. ರಾಜ್ಯದಲ್ಲಿ ಎರಡನೇ ಹಂತದ ನಗರಗಳಿಗೆ ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಒಂದಷ್ಟು ಉಪಕ್ರಮಗಳು ಆರಂಭಗೊಂಡಿವೆ. ಇದೆಲ್ಲರ ಪ್ರಯೋಜನಗಳು ಮಂಗಳೂರು ಬಳಸಿಕೊಳ್ಳುವ ಮತ್ತು ಹೂಡಿಕೆಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಒಂದಷ್ಟು ಪೂರಕ ಯೋಜನೆಗಳು ಸಿದ್ದಗೊಳ್ಳಬೇಕಾಗಿದೆ.

ಪೂರಕ ಕ್ರಮಗಳು ಅಗತ್ಯ
ಸರಕಾರದ ಪ್ರಸ್ತಾವನೆಗಳು ಜಾರಿಗೊಳ್ಳುವಲ್ಲಿ ಒಂದೆಡೆ ಪ್ರಯತ್ನಗಳ ಜತೆಗೆ ಜಿಲ್ಲೆಯ ಜನಪ್ರತಿನಿಧಿಗಳು, ಉದ್ಯಮಶೀಲರು, ಉದ್ದಿಮೆದಾರರಿಂದಲೂ ಪೂರಕ ಕ್ರಮಗಳು ಅವಶ್ಯವಿದೆ. ಜಿಲ್ಲೆಗೆ ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಹಿಂದೆ ಪ್ರಯತ್ನಗಳು ನಡೆದಿತ್ತಾದರೂ ಅದು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಂಡಿಲ್ಲ. ಹೂಡಿಕೆ ಮತ್ತು ಉದ್ಯಮಕ್ಕೆ ಇರುವ ಅವಕಾಶ ಅದರಲ್ಲೂ ಐಟಿ ಕ್ಷೇತ್ರದಲ್ಲಿ ಇರುವ ಅವಕಾಶ ಬಗ್ಗೆ ಬೆಂಗಳೂರಿನಲ್ಲಿ ಹೂಡಿಕೆದಾರರ ಸಮಾವೇಶ ನಡೆದಿದೆ. ಮಂಗಳೂರಿನಲ್ಲೂ ಐಟಿ ಕ್ಷೇತ್ರದಲ್ಲಿ ಹೂಡಿಕೆ ಬಗ್ಗೆ ಸಮಾವೇಶಗಳನ್ನು ಆಯೋಜಿಸಲು ಈ ಹಿಂದೆ ಉದ್ದೇಶಿಸಲಾಗಿತ್ತಾದರೂ ಅದು ಮುಂದೆ ಕಾರ್ಯರೂಪಕ್ಕೆ ಬಂದಿಲ್ಲ. ಕೊಲ್ಲಿ ರಾಷ್ಟ್ರಗಳಲ್ಲೂ ಮಂಗಳೂರಿನಲ್ಲಿ ಹೂಡಿಕೆಗೆ ಇರುವ ಅವಕಾಶಗಳ ಬಗ್ಗೆ ಸಭೆ ಆಯೋಜಿಸಿ ಚರ್ಚೆಗಳು ನಡೆದಿತ್ತು.

ಈ ಪ್ರಯತ್ನಗಳು ನಿಂತ ನೀರಾಗದೆ ಮುಂದಕ್ಕೆ ಕೊಂಡೋಯ್ಯಬೇಕಾಗಿದೆ. ಜಿಲ್ಲೆಯಲ್ಲಿ ಹೊಡಿಕೆಗೆ ಇರುವ ಅವಕಾಶಗಳ ಬಗ್ಗೆ ಫೋಕಸ್‌ ಮಾಡುವ ಕಾರ್ಯ ನಡೆಯಬೇಕಾಗಿದೆ. ಹೂಡಿಕೆದಾರರನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಭಾಗದ ಜನಪ್ರತಿನಿಧಿಗಳು, ಹೊರಜಿಲ್ಲೆಗಳಲ್ಲಿ ನೆಲೆಸಿರುವ ಜಿಲ್ಲೆಯ ಉದ್ಯಮಿಗಳಿಂದ ಪೂರಕ ಪ್ರಯತ್ನಗಳು, ಅವಕಾಶ ಸಿಕ್ಕಿದಾಗಲೆಲ್ಲ ಜಿಲ್ಲೆಯಲ್ಲಿರುವ ಅವಕಾಶಗಳ ಬಗ್ಗೆ ಪ್ರಮುಖ ವೇದಿಕೆಗಳಲ್ಲಿ ಪ್ರಚುರ ಪಡಿಸುವುದು ಅವಶ್ಯ. ಜತೆಗೆ ಕೈಗಾರಿಕೆ, ವಾಣಿಜ್ಯ ಇಲಾಖೆಯಿಂದ ಜಿಲ್ಲೆಯಲ್ಲಿ ಕೈಗಾರಿಕೆಗಳು ಮತ್ತು ಉದ್ದಿಮೆಗಳ ಸ್ಥಾಪನೆಗೆ ಲಭ್ಯವಿರುವ ಸೌಲಭ್ಯಗಳನ್ನು ಒದಗಿಸುವ ಕಾರ್ಯವೂ ನಡೆಯಬೇಕಾಗಿದೆ. ಮಂಗಳೂರನ್ನು ಒಂದು ಪ್ರಮುಖ ಐಟಿ ಕೇಂದ್ರವಾಗಿ ರೂಪುಗೊಳ್ಳಬೇಕಾಗಿದೆ.

ಉದ್ಯಮಸ್ನೇಹಿ ವಾತಾವರಣ ಅಗತ್ಯ
ಮಂಗಳೂರಿಗೆ, ಜಿಲ್ಲೆಗೆ ಉದ್ಯಮಗಳನ್ನು, ಹೂಡಿಕೆಗಳನ್ನು ಆಕರ್ಷಿಸುವ ಎಷ್ಟೇ ಪ್ರಯತ್ನಗಳು ನಡೆದರೂ ಉದ್ಯಮಸ್ನೇಹಿ ವಾತಾವರಣ ಇಲ್ಲದಿದ್ದರೆ ಇದು ನಿರೀಕ್ಷಿತ ಮಟ್ಟದಲ್ಲಿ ಫಲ ನೀಡದು ಎಂಬುದು ಗಮನಿಸಬೇಕಾದ ಅಂಶ. ಶಾಂತಿ ಸುವ್ಯವಸ್ಥೆ ಪರಿಸ್ಥಿತಿಯೂ ಹೂಡಿಕೆಗಳ ಮೇಲೆ ಮಹತ್ತರವಾದ ಪರಿಣಾಮ ಬೀರುತ್ತದೆ. ಜಿಲ್ಲೆಯಲ್ಲಿ ಆಗೊಮ್ಮೆ ಹೀಗೊಮ್ಮೆ ನಡೆಯುವ ಕೆಲವು ಅನಪೇಕ್ಷಿತ ಘಟನೆಗಳು ಅಗತ್ಯಕ್ಕಿಂತ ಹೆಚ್ಚು ಸುದ್ದಿ ಮಾಡಿ ಸೂಕ್ಷ್ಮ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟುವ ಪ್ರಯತ್ನಗಳ ಆಗುತ್ತಿವೆ. ಈ ಪ್ರಯತ್ನಗಳನ್ನು ಹಿಮ್ಮೆಟ್ಟಿಸಿ ಜಿಲ್ಲೆಯಲ್ಲಿ ಉದ್ಯಮಸ್ನೇಹಿ ವಾತಾವರಣವನ್ನು ಕಾಯ್ದುಕೊಳ್ಳುವ ಹೊಣೆಗಾರಿಕೆ ಪ್ರತಿಯೋರ್ವರ ಮೇಲಿದೆ.

- ಕೇಶವ ಕುಂದರ್‌

Advertisement

Udayavani is now on Telegram. Click here to join our channel and stay updated with the latest news.

Next