Advertisement

ಕನ್ನಡದ ಮಾನ್ಯತೆಗೆ ಯತ್ನವಾಗಲೇಬೇಕು

07:52 AM May 28, 2018 | Harsha Rao |

ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಕೇಂದ್ರ ಸರ್ಕಾರವು ಘೋಷಿಸಿ ಒಂದು ದಶಕ ಕಳೆಯಿತು(2008). ತಮಿಳಿನಲ್ಲಿ ಆಗಿರುವ ಕೆಲಸ ನೋಡಿದರೆ ಅಸೂಯೆ ಆಗುತ್ತದೆ. ತಮಿಳಿನ ಪ್ರಾಚೀನ ಸಾಹಿತ್ಯವನ್ನು ದೇಶಿಯ ಭಾಷೆಗಳಲ್ಲದೆ, ವಿಶ್ವದ ಹಲವು ಭಾಷೆಗಳಿಗೆ ಅನುವಾದಿಸಿ ಪ್ರಕಟಿಸಿದ್ದಾರೆ. ನಮಗೂ ಕೇಂದ್ರ ನೆರವು ನೀಡಲು ಸಿದ್ಧವಿದೆ. ಅದನ್ನು ಬಳಸುವ ಕೆಲಸ ನಮ್ಮಲ್ಲಿ ಆಗಿಲ್ಲ. 

Advertisement

ಕನ್ನಡ ಕಾವಲು ಸಮಿತಿಯ ಮೊದಲ(1983) ಅಧ್ಯಕ್ಷ, ಕನ್ನಡ ಹೋರಾಟದ ಹಿನ್ನೆಲೆಯಿಂದ ಬಂದ ಸಿದ್ದರಾಮಯ್ಯ ಸಿಎಂ ಆದಾಗ ಕನ್ನಡ ಸಮಸ್ಯೆಗಳೆಲ್ಲ ಪರಿಹಾರ ಕಾಣುತ್ತವೆ ಎಂದು ಕನ್ನಡಾಭಿಮಾನಿಗಳು ನಂಬಿದ್ದರು. ಕೇಂದ್ರದಿಂದ ಕನ್ನಡಕ್ಕೆ ಅನ್ಯಾಯವಾದಾಗ ಉಗ್ರವಾಗಿ ಪ್ರತಿಕ್ರಿಯಿಸಿದ್ದು ಬಿಟ್ಟರೆ, ಗಟ್ಟಿಯಾದ ಕನ್ನಡ ಕೆಲಸವನ್ನೇನೂ ಮಾಡಲಿಲ್ಲ. ಪರಿಷ್ಕೃತ ಮಹಿಷಿ ವರದಿಗೆ ಕಾನೂನು ಬಲ ನೀಡಲಿಲ್ಲ. ಕನ್ನಡ ಶಾಲೆಗಳ ಸಬಲೀಕರಣ ಸಮಿತಿ ವರದಿಯನ್ನು ಗಮನಿಸಲಿಲ್ಲ. ಶಾಸ್ತ್ರೀಯ ಭಾಷೆ ವಿಚಾರದಲ್ಲಿ ರಾಜಕೀಯ ಮಾಡಿದರೇ ಹೊರತು ಸಿಗುವ ಸವಲತ್ತು ಬಳಸಿಕೊಳ್ಳುವ ಕೆಲಸ ಮಾಡಲಿಲ್ಲ. ಹೀಗೆ ಆಗಲಿಲ್ಲ ಎಂದು ಹೇಳಬಹುದಾದ ಸಂಗತಿಗಳು ಸಾಕಷ್ಟಿವೆ. 

ಆಶಯಾ ಬದ್ದತೇ ಲೋಕ!
ಈಗ ಕುಮಾರಸ್ವಾಮಿ ನೇತೃತ್ವದಲ್ಲಿ ಸಮ್ಮಿಶ್ರ ಪಕ್ಷದ ಸರ್ಕಾರ ರಚನೆಯಾಗಿದೆ. ಕನ್ನಡಿಗರು ಆಶಾವಾದಿಗಳು. ಪ್ರಾದೇಶಿಕ ಅಸ್ಮಿತೆಯ ಬಗ್ಗೆ ಮಾತನಾಡುವ ಕುಮಾರಸ್ವಾಮಿ ಕನ್ನಡದ ಬಗ್ಗೆ ಗಮನ ಹರಿಸಬಹುದೆಂಬ ನಂಬಿಕೆಯಿದೆ. ಸರ್ಕಾರಗಳು ಬದಲಾ ದಾಗಲೆಲ್ಲ ನಿರೀಕ್ಷೆ ಮೂಡುತ್ತದೆ. “ಹೊಸ ಸರ್ಕಾರಗಳನ್ನು ಕಾಣು ವುದು ನಮಗೆ ಹೊಸತೇನಲ್ಲ. ಆದರೆ ಕನ್ನಡಿಗರು ಹೊಸ ನಿರೀಕ್ಷೆ ಗಳನ್ನು ಇಟ್ಟುಕೊಳ್ಳುವಂತಿಲ್ಲ. ಏಕೆಂದರೆ, ಅವರು ಇದುವರೆಗೂ ಇಟ್ಟುಕೊಂಡಿದ್ದ ಯಾವ ನಿರೀಕ್ಷೆಗಳೂ ಈಡೇರಿಲ್ಲ’ ಎಂಬ ಗೊ.ರು.ಚ. ಮಾತು ಕನ್ನಡ ಸಮಸ್ಯೆಗಳನ್ನು ರಾಜಕೀಯ ಪಕ್ಷಗಳು ಹೇಗೆ ಗಮನಿಸಿವೆ ಎಂಬುದನ್ನು ಹೇಳುತ್ತವೆ. ರಾಜಕೀಯ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ರೈತರ ಸಮಸ್ಯೆ ಬಗ್ಗೆ ಹೇಳಿವೆ. ಅಲ್ಪಸಂಖ್ಯಾತರ, ಮಹಿಳೆಯರ ಹೀಗೆ ಎಲ್ಲರ ಬಗ್ಗೆ ಭರಪೂರ ಜನಪ್ರಿಯ ಯೋಜನೆಗಳನ್ನು ಪ್ರಕಟಿಸಿವೆ(ಜನಪ್ರಿಯ ಯೋಜನೆಗಳಿಂದ ನಾಡಿನ ಶಾಶ್ವತ ಅಭಿವೃದ್ಧಿ ಯೋಜನೆಗಳಿಗೆ ಹಣ ಕಮ್ಮಿಯಾಗುತ್ತದೆ. ಹಾಗಾಗಿ ಶಾಶ್ವತ ಅಭಿವೃದ್ಧಿ ಕುಂಟಿತವಾಗುತ್ತದೆ ಅನ್ನುತ್ತಾರೆ ಅರ್ಥಶಾಸ್ತ್ರಜ್ಞರು). ಆದರೆ, ಯಾವ ಪಕ್ಷವೂ ಕನ್ನಡ ಸಮಸ್ಯೆಗಳ ವಿಚಾರವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಕಾಟಾಚರಕ್ಕೆ ಪ್ರಸ್ತಾಪಿಸಿವೆ ಎಂಬುದು ಪ್ರಾಣಾಳಿಕೆಗಳನ್ನು ನೋಡಿದರೆ ಸ್ಪಷ್ಟ.

ಹೆಮ್ಮೆಯ ಕನ್ನಡನಾಡಿನ ಸಾಧನೆ ಋಣಾತ್ಮಕವಾಗಿದೆ 
ಮಳೆ ಇಲ್ಲ, ಬೆಳೆ ಇಲ್ಲ…ಬಂದ ಬೆಳೆಗೆ ಬೆಲೆ ಇಲ್ಲ, ಬದುಕೋದು ಹೇಗೆ ಎನ್ನುವ ಸ್ಥಿತಿ ರೈತನದ್ದು. ರಾಜ್ಯದಲ್ಲಿ ಆತ್ಮಹತ್ಯೆಗೆ ಶರಣಾ ಗುತ್ತಿರುವವರ ಸಂಖ್ಯೆ ದಶಕಗಳಿಂದ ರಾಷ್ಟ್ರದ ಸರಾಸರಿಗಿಂತ ಹೆಚ್ಚಿದೆ. ನಗರದಲ್ಲಿ ನೆಲೆಸಿರುವ ಹೆಚ್ಚು ಕಲಿಯದವರ ಉದ್ಯೋಗ ಎಷ್ಟು ಭದ್ರ, ಅದು ಉದ್ಯೋಗವೇ? ಅನ್ನುವ ಮಾತೂ ಇದೆ. ಇಂತಹ ವಿಚಾರಗಳಿಗೆ ಆಳುವವರು ಆದ್ಯ ಗಮನ ನೀಡಬೇಕು ಎಂಬುದನ್ನು ಯಾರೂ ಅಲ್ಲಗಳೆಯಲಾಗದು.

ಒಂದಾನೊಂದು ಕಾಲದಲ್ಲಿ ರಾಷ್ಟ್ರದ ಶ್ರೀಮಂತ ರಾಜ್ಯಗಳಲ್ಲಿ ಒಂದೆನಿಸಿದ್ದ ಕರ್ನಾಟಕ ಈಗ ರಾಷ್ಟ್ರದ ಬಡತನದ 10 ರಾಜ್ಯಗಳಲ್ಲಿ ಒಂದೆನಿಸಿದೆ. ಕೈಗಾರಿಕಾ ರಂಗದ ಮುಂಚೂಣಿ ರಾಜ್ಯವಾಗಿದ್ದ ಕರ್ನಾಟಕ ಇಂದು 9ನೆಯ ಸ್ಥಾನಕ್ಕಿಳಿದಿದೆ (National Council Off Applied Economics Research-2017 Report) 11ನೆಯ ಪಂಚವಾರ್ಷಿಕ ಯೋಜನೆಯಲ್ಲಿ ಉತ್ತರಾಖಂಡ ನಿಗದಿತ ಗುರಿ 9.9%ನ್ನು ಮೀರಿ 13.65%ರಷ್ಟು, ಬಿಹಾರ ನಿಗದಿತ ದರ 7.60%ಕ್ಕೆ ಪ್ರತಿಯಾಗಿ 10.15% ಬೆಳವಣಿಗೆಯನ್ನು ದಾಖಲಿಸಿದೆ. ನಂತರದ ಸ್ಥಾನದಲ್ಲಿ ಗುಜರಾತ್‌ ಇದ್ದರೆ, ಕರ್ನಾಟಕ ನಿಗದಿತ 11.20%ಕ್ಕೆ ಪ್ರತಿಯಾಗಿ 6.97% ರಷ್ಟನ್ನು ಮಾತ್ರ ಸಾಧಿಸಿ 14ನೆಯ ಸ್ಥಾನದಲ್ಲಿದೆ. ಆಹಾರ ಧಾನ್ಯಗಳ ಉತ್ಪಾದ
ನೆಯು 2010-11ರಲ್ಲಿ 140 ಲಕ್ಷ ಟನ್‌ಗಳಷ್ಟು ಇದ್ದುದು 2015-16ರಲ್ಲಿ 110 ಟನ್‌ಗಳಿಗೆ ಕುಸಿದಿದೆ. ರಾಜ್ಯದ ಒಟ್ಟು ಆಂತರಿಕ ಉತ್ಪನ್ನಕ್ಕೆ ಕೃಷಿಯ ಕೊಡುಗೆ 1993-94ರಲ್ಲಿ 38.1% ರಷ್ಟಿದ್ದುದು 12.3%ಕ್ಕಿಳಿದಿದೆ. ಒಂದೆರಡು ಕ್ಷೇತ್ರಗಳನ್ನು ಬಿಟ್ಟರೆ ಉಳದೆಲ್ಲ ರಂಗದಲ್ಲಿ ನಮ್ಮ ಹೆಮ್ಮೆಯ ಕನ್ನಡನಾಡಿನ ಸಾಧನೆ ಋಣಾತ್ಮಕವಾಗಿದೆ (ಹಿನ್ನೆಡೆ). 

Advertisement

ಇವೆಲ್ಲದರ ಜತೆಗೆ ಕಾನೂನು, ಶಾಂತಿಪಾಲನೆಯಲ್ಲಿ ಕರ್ನಾಟ ಕದ ಪೊಲೀಸ್‌ ಉತ್ತಮ ಎನ್ನುವ ಕಾಲವೊಂದಿತ್ತು. ಈಗ ಅದು ಇತಿಹಾಸ. ಕೋಮು ಗಲಭೆಯಲ್ಲಿ ಉತ್ತರ ಪ್ರದೇಶ ಬಿಟ್ಟರೆ ಕರ್ನಾಟಕ 2ನೆಯ ಸ್ಥಾನದಲ್ಲಿದೆ. ರಾಜಕೀಯ ಸೇಡಿನ ಕೊಲೆ ಬಿಹಾರ, ಬಂಗಾಳ, ಆಂಧ್ರ, ಕೇರಳ ಮುಂತಾದ ರಾಜ್ಯಗಳಲ್ಲಿ ನಡೆಯುತ್ತದೆ ಎಂದು ಅಚ್ಚರಿಪಡುತ್ತಿದ್ದ ಕಾಲವೊಂದಿತ್ತು. ಪ್ರಸ್ತುತ ಕರ್ನಾಟಕದಲ್ಲೇ ನಡೆಯುತ್ತಿವೆ. ಇದರ ಜೊತೆಗೆ ಬೆಂಗಳೂರಿ 
ನಲ್ಲಿ ಮಾದಕವಸ್ತುಗಳ ವ್ಯಾಪಾರ ಕಳೆದ 3 ವರ್ಷದಲ್ಲಿ 5 ಪಟ್ಟು ಹೆಚ್ಚಿದೆ ಎಂಬ ಆತಂಕಕಾರಿ ವರದಿ ಪ್ರಕಟವಾಗಿದೆ. ಇವುಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ಸಾಕಷ್ಟು ಸಂಸ್ಥೆ, ಜನ ಇದ್ದಾರೆ. ಇವೆ ಲ್ಲಕ್ಕೂ ಸರ್ಕಾರ ಗಮನ ನೀಡಲೇಬೇಕು ಎಂಬುದು ಪ್ರಶ್ನಾತೀತ. ಜತೆಗೆ ಕನ್ನಡನಾಡು-ನುಡಿ, ಸಂಸ್ಕೃತಿಗಳು ಪ್ರಜ್ವಲಿಸಬೇಕಲ್ಲವೇ? 

ರಾಷ್ಟ್ರೀಯ ಪಕ್ಷಗಳಿಗೆ ಕನ್ನಡಿಗರ ಮತ ಬೇಕು; ಹಿತ ಬೇಕಿಲ್ಲ ಕನ್ನಡನಾಡು-ನುಡಿ, ಸಂಸ್ಕೃತಿಗಳ ಹಿತರಕ್ಷಣೆಯ ವಿಚಾರದಲ್ಲಿ ಎಲ್ಲ ರಾಷ್ಟ್ರೀಯ ಪಕ್ಷಗಳೂ ಸಮಾನ ಮನಸ್ಕರು. ಕನ್ನಡಿಗರ ಮತ ಮಾತ್ರ ಬೇಕು, ಹಿತ ಬೇಕಿಲ್ಲ. ಹಾಗಾಗಿ ನಾಡಿನ ಜನರ ಸಮಸ್ಯೆ, ನಾಡು-ನುಡಿ-ಸಂಸ್ಕೃತಿಗಳ ರಕ್ಷಣೆಗೆ ಸರ್ಕಾರ ಏನು ಮಾಡಬೇಕು ಎಂಬುದನ್ನು ಕನ್ನಡಾಸಕ್ತರು ಹೇಳಲೇಬೇಕು. ಕರ್ನಾಟಕ ವನ್ನು ಸ್ವರ್ಗ ಮಾಡಿಬಿಡುತ್ತಾರೆಂಬ ಭ್ರಮೆಯಿಂದಲ್ಲ. ನರಕ ಮಾಡದಿದ್ದರೆ ಸಾಕು ಎಂಬುದಕ್ಕಾದರೂ ಹೇಳಲೇಬೇಕು. ನಾಡು-ನುಡಿ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸಲೇಬೇಕು. ನಿರಂತರ ವಾಗಿ ಹೇಳುತ್ತಲೇ ಇರಬೇಕು. ಆಗ ಒಳ್ಳೆಯದಾಗದೆ ಇದ್ದರೂ ಕೆಟ್ಟದಾಗು ವುದು ತಪ್ಪಬಹುದು.

ತಕ್ಷಣಕ್ಕೆ ಸರ್ಕಾರ ಗಮನಿಸಬೆಕಾದ ಸಂಗತಿಗಳು:
1. ಕನ್ನಡಿಗರಿಗೆ ಉದ್ಯೋಗ ಅನ್ನುವುದು ಕನಸಾಗಿಯೇ ಇದೆ. ಭರವಸೆ ನೀಡಿದ್ದು ಬಿಟ್ಟರೆ; ರಚನಾತ್ಮಕವಾಗಿ ದಶಕಗಳಿಂದ ಬಂದ ಯಾವ ಸರ್ಕಾರವೂ ಏನೂ ಮಾಡಿಲ್ಲ. ಕನ್ನಡ ಅಭಿ ವೃದ್ಧಿ ಪ್ರಾಧಿಕಾರವೇ 2008ರಿಂದ “ಸ್ಥಳೀಯರಿಗೆ ಉದ್ಯೋಗ ರಾಷ್ಟ್ರೀಯ ನೀತಿಯಾಗಲಿ’ ಎಂದು ಪ್ರತಿಪಾದಿಸುತ್ತಿದೆ. 
ಆದರೆ ಆ ನಿಟ್ಟಿನಲ್ಲಿ ಪ್ರಯತ್ನವಾಗಿಯೇ ಇಲ್ಲ. ಇದನ್ನು ಆದ್ಯತೆ ಮೇಲೆ ಕೇಂದ್ರ ಸರ್ಕಾರದೊಡನೆ ವ್ಯವಹರಿಸಬೇಕು. 

2. ಪರಿಷ್ಕೃತ ಮಹಿಷಿ ವರದಿಯನ್ನು ಜಾರಿಗೆ ತರುವ ಮತ್ತು ಅದಕ್ಕೆ ಕಾನೂನು ಬಲ ತಂದುಕೊಡುವ ಪ್ರಯತ್ನವೇ ಆಗಿಲ್ಲ. ಅದನ್ನು ಮೊದಲ ಅಧಿವೇಶನದಲ್ಲೇ ಸದನದಲ್ಲಿ ಮಂಡಿಸಿ ಕಾನೂನಿನ ಬಲ ತಂದುಕೊಡಬೇಕು.

3. ಕೇಂದ್ರ ಸರ್ಕಾರ ನಡೆಸುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡಿಗರು ಬಿಹಾರ, ಆಂಧ್ರ, ಕೇರಳ ಮುಂತಾದ ರಾಜ್ಯಗಳ ಅಭ್ಯರ್ಥಿಗಳಂತೆ ಹೆಚ್ಚು ಮಂದಿ ಅಯ್ಕೆಯಾಗ ದಿರಲು ಕಾರಣ, ಆ ರಾಜ್ಯಗಳಂತೆ ಪರೀಕ್ಷೆ ಎದುರಿಸಲು ಇರುವ ತರಬೇತಿ ಸಂಸ್ಥೆಗಳು ನಮ್ಮಲ್ಲಿಲ್ಲದಿರುವುದೇ ಆಗಿದೆ. ಸರ್ಕಾರ ತುರ್ತು ಗಮನ ನೀಡಿ ನಮ್ಮಲ್ಲೂ ತರಬೇತಿ ವ್ಯವಸ್ಥೆ ಮಾಡಬೇಕು.

4. ಕನ್ನಡದಲ್ಲಿ ಟಿಪ್ಪಣಿಗಳಿಲ್ಲದ ಕಡತಗಳನ್ನು ತಿರಸ್ಕರಿಸಲಾಗುತ್ತದೆ ಎಂಬ ನಿರ್ಣಯವನ್ನು ಕೈಗೊಂಡು ಆಡಳಿತ ಭಾಷೆ ಯಾಗಿ ಕನ್ನಡವು ಅನುಷ್ಠಾನಕ್ಕೆ ಬರುವಂತೆ ನೋಡಿಕೊಳ್ಳ ಬೇಕು. ಗಣಕೀಕರಣದಿಂದ ರಾಜ್ಯ ಸರ್ಕಾರದ ಹಲವು ಇಲಾಖೆಗಳ ಜಾಲತಾಣದಲ್ಲಿ ಕನ್ನಡಕ್ಕೆ ಸ್ಥಾನವಿಲ್ಲದಾಗಿದೆ. ಅದನ್ನು ಗಮನಿಸಿ ಸರಿಪಡಿಸಬೇಕು.

5. ಶಿಕ್ಷಣದಲ್ಲಿ ಭಾಷೆ ಬಳಕೆಯಾಗದಿದ್ದರೆ, ಆ ಭಾಷೆಗೆ ಭವಿಷ್ಯ ವಿಲ್ಲ ಎನ್ನುತ್ತಾರೆ ಭಾಷಾ ವಿಜ್ಞಾನಿಗಳು. ಕನ್ನಡದ ಬಳಕೆ ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಸರ್ಕಾರಿ ಶಾಲೆಗಳ ಸಬಲೀಕರಣ ಸಮಿತಿಯನ್ನು ರಾಜ್ಯ ಸರ್ಕಾರವೇ ರಚಿಸಿತ್ತು. ಸಮಿತಿ ವರದಿಯನ್ನು ನೀಡಿದೆ. ಅದನ್ನು ಆದ್ಯತೆ ಮೇಲೆ ಜಾರಿಗೆ ತರಬೇಕು. ಶೆಡ್ನೂಲ್‌-8ರಲ್ಲಿರುವ ಭಾಷೆಗಳನ್ನು ಪ್ರಾಥಮಿಕ ಶಾಲಾ ಶಿಕ್ಷಣದಲ್ಲಿ ಕಡ್ಡಾಯವಾಗಿ ಕಲಿಕೆ ಮಾಧ್ಯಮವಾಗಿಸುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ತರಬೇಕು ಮತ್ತು ನಿಜ ಅರ್ಥದಲ್ಲಿ ಎಲ್ಲರಿಗೂ ಶಿಕ್ಷಣ ಸಿಗುವಂತಾಗಬೇಕು. 

ಶಿಕ್ಷಣ ಹಕ್ಕು ಕಾಯಿದೆಗೆ ಸೂಕ್ತ ತಿದ್ದುಪಡಿ ತರಬೇಕು.

6. ಕನ್ನಡವನ್ನು ಶಾಸ್ತ್ರೀಯ ಭಾಷೆ ಎಂದು ಕೇಂದ್ರ ಸರ್ಕಾರವು ಘೋಷಿಸಿ ಒಂದು ದಶಕ ಕಳೆಯಿತು(2008). ತಮಿಳಿನಲ್ಲಿ ಆಗಿರುವ ಕೆಲಸ ನೋಡಿದರೆ ಅಸೂಯೆಯಾಗುತ್ತದೆ. ತಮಿಳಿನ ಪ್ರಾಚೀನ ಸಾಹಿತ್ಯವನ್ನು ದೇಶಿಯ ಭಾಷೆಗಳಲ್ಲದೆ, ವಿಶ್ವದ ಹಲವು ಭಾಷೆಗಳಿಗೆ ಅನುವಾದಿಸಿ ಪ್ರಕಟಿಸಿದ್ದಾರೆ. ನಮಗೂ ಕೇಂದ್ರ ಸರ್ಕಾರ ನೆರವು ನೀಡಲು ಸಿದ್ಧವಿದೆ. ಅದನ್ನು ಬಳಸಿಕೊಳ್ಳುವ ಕೆಲಸ ನಮ್ಮಲ್ಲಿ ಆಗಿಲ್ಲ. “ಕರ್ನಾಟಕ ಸರ್ಕಾರ ತಾತ್ಕಾಲಿಕ ಕಟ್ಟಡ ಒದಗಿಸಿದ 15 ದಿನದಲ್ಲಿ ಕನ್ನಡ ಶಾಸ್ತ್ರೀಯ ಭಾಷೆ ಉನ್ನತ ಅಧ್ಯಯನ ಕೇಂದ್ರವನ್ನು ಮೈಸೂರಿನ ಸಿಐಐಎಲ್‌ನಿಂದ ಬೆಂಗಳೂರಿಗೆ ವರ್ಗಾಯಿಸಲು ಕ್ರಮ ಕೈಗೊಳ್ಳಲಾಗುವುದು, ಸ್ವಾಯತ್ತತೆ ನೀಡಲು ತಮ್ಮ ಸರ್ಕಾರ ಸಿದ್ಧವಿದೆ’ ಎಂದು ಅಂದಿನ ಕೇಂದ್ರ ಮಾನವ ಸಂಪನ್ಮೂಲ ಸಚಿವರಾದ ಸ್ಮತಿ ಇರಾನಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಿಯೋಗಕ್ಕೆ 27-04-2016ರಂದು ಸ್ಪಷ್ಟ ಭರವಸೆ ನೀಡಿದ್ದರು. ಎಲ್ಲಿ ಸ್ಥಾಪನೆ ಆಗಬೇಕೆಂಬುದನ್ನೇ ನೆಪವಾಗಿಟ್ಟುಕೊಂಡು ಸರ್ಕಾರ ನಿರ್ಲಿಪ್ತ ಧೊರಣೆ ತಳೆಯಿತು. ಈ ಧೋರಣೆಯಿಂದ ಕನ್ನಡಕ್ಕೆ ಸಿಗಬೇಕಾದ ಸವಲತ್ತು, ಮಾನ್ಯತೆ ಸಿಗಲಿಲ್ಲ. ಈಗ ಸರ್ಕಾರ ಆದ್ಯ ಗಮನ ನೀಡಿ ಕನ್ನಡಕ್ಕೆ ನೀಡುವ ಸವಲತ್ತನ್ನು ಬಳಸಿಕೊಳ್ಳಬೇಕು.

7. ಬೆಂಗಳೂರು ಸಮೀಪ ಅಕ್ಷರಧಾಮ ಮಾದರಿಯಲ್ಲಿ ಕರ್ನಾಟಕದ ಪರಂಪರೆಯನ್ನು(ಕನ್ನಡ ಸಾಹಿತ್ಯ, ಇತಿಹಾಸ, ಸಂಸ್ಕೃತಿ) ಪ್ರತಿಬಿಂಬಿಸುವ ಪಾರಂಪರಿಕ ಶಿಲೊ³àದ್ಯಾನ ಮತ್ತು ವಸ್ತು ಸಂಗ್ರಹಾಲಯವನ್ನು ನಿರ್ಮಿಸಬೇಕು.

8. ಬೆಂಗಳೂರಿನ ಕಾನೂನು ಪಾಲನೆ, ರಸ್ತೆ, ಸ್ವತ್ಛತೆ, ಇತರ ನಾಗರಿಕ ಸೌಲಭ್ಯ ಸುಧಾರಣೆ ಎಲ್ಲ ರಂಗಗಳಲ್ಲಿ ಆಗಬೇಕಿದೆ. ಅತ್ಯಂತ ಕೆಟ್ಟ ಆಡಳಿತದ ನಗರ ಎಂಬ ಕುಖ್ಯಾತಿ ಗಳಿಸಿದೆ. ಅದನ್ನು ಸರಿಪಡಿಸಬೇಕಿದೆ ನಿಜ. ಜೊತೆಗೆ ಕನ್ನಡತನ, ಕನ್ನಡ ಭಾಷೆ, ಸಂಸ್ಕೃತಿ ಉಳಿಸುವ, ಬೆಳೆಸುವ ಕೆಲಸಗಳು ಆಗಬೇಕಿದೆ. 

9. ದೆಹಲಿಯಲ್ಲಿ ನಾಮಕಾವಾಸ್ಥೆ ವಿಶೇಷ ಪ್ರತಿನಿಧಿ ಬದಲು ಪರಿಣಾಮಕಾರಿ ಅನುಸರಣೆ ನಡೆಸುವ ಮತ್ತು ಲಾಬಿ ನಡೆಸುವ ವ್ಯವಸ್ಥೆ ಆಗಬೇಕು ಮತ್ತು ಸಂಸದರಿಗೆ ಮಾಹಿತಿ ಕೇಂದ್ರ ಸ್ಥಾಪನೆ ಆಗಬೇಕು.

10. ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಡಿ.ಎಂ. ನಂಜುಂಡಪ್ಪ ವರದಿಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸಿ ಕರ್ನಾಟಕ ಏಕೀಕರಣದ ಆಶಯ ಸಾರ್ಥಕಗೊಳಿಸಬೇಕಿದೆ. 

ರಾಜ್ಯದಲ್ಲಿ ರೈತರ ಆತ್ಮಹತ್ಯೆ ನಿಂತಿಲ್ಲ. ಕೃಷಿ ವಲಯ ಹಿನ್ನಡೆ ಅನುಭವಿಸುತ್ತಿದೆ. ಮಾಹಿತಿ ತಂತ್ರಜಾnನ ಉದ್ಯಮ ಬಿಟ್ಟರೆ ಉತ್ಪಾದನ ವಲಯದ ಬೆಳವಣಿಗೆ ಸ್ಥಗಿತವಾಗಿದೆ, ಪ್ರವಾಸೋದ್ಯಮ ಹಣವಷ್ಟೇ ಖರ್ಚಾಗುತ್ತಿದೆ, ಬೆಳವಣಿಗೆ ಶೂನ್ಯ. ಆರೋಗ್ಯ, ಮೂಲಭೂತ ಸೌಕರ್ಯ ಎಲ್ಲದರಲ್ಲೂ ಹೇಳಿಕೊಳ್ಳುವ ಪ್ರಗತಿ ಆಗಿಲ್ಲ. ಹೇಳುತ್ತಾ ಹೋದರೆ ಬೆಳೆಯುತ್ತಲೇ ಇರುತ್ತದೆ. ಇಲ್ಲಿ ಪ್ರಸ್ತಾಪವಾಗದ ಎಷ್ಟೋ ಮಹತ್ವದ ಅಂಶಗಳಿವೆ. ಎಲ್ಲವನ್ನೂ ಹೇಳಲೂ ಸಾಧ್ಯವೇ ಇಲ್ಲ.

– ರಾ.ನಂ. ಚಂದ್ರಶೇಖರ

Advertisement

Udayavani is now on Telegram. Click here to join our channel and stay updated with the latest news.

Next