Advertisement
ಗುರುವಾರ ಮುಂಜಾನೆಯೇ ಏಕಕಾಲದಲ್ಲಿ ಜಿಲ್ಲಾ ಉಸ್ತುವಾರಿ ಹಾಗೂ ಸಣ್ಣ ನೀರಾವರಿ ಸಚಿವ ಸಿ.ಎಸ್.ಪುಟ್ಟರಾಜು ಸೋದರ ಚಿಕ್ಕರಾಮೇಗೌಡರ ಪುತ್ರ ಜಿಪಂ ಸದಸ್ಯ ಸಿ.ಅಶೋಕ್, ಚಿನಕುರಳಿ ಗ್ರಾಪಂ ಸದಸ್ಯ ಸಿ.ಶಿವಕುಮಾರ್ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಿಢೀರನೆ ದಾಳಿ ನಡೆಸಿದ್ದಾರೆ. ಪಾಂಡವಪುರ ತಾಲೂಕು ಚಿನಕುರಳಿ ಗ್ರಾಮದಲ್ಲಿನ ಸಿ.ಅಶೋಕ್ ನಿವಾಸ ಹಾಗೂ ಮೈಸೂರಿನ ವಿಜಯನಗರದಲ್ಲಿನ ಸಿ.ಶಿವಕುಮಾರ್ ಮನೆ ಮೇಲೆ ಸಿಆರ್‌ಪಿಎಫ್ ಸಿಬ್ಬಂದಿಯೊಂದಿಗೆ ಆದಾಯ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ.
Related Articles
Advertisement
ವಿಚಾರಣೆಗೆ ಸಹಕಾರ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸುವ ವೇಳೆ ಬೆಳಗಿನ ಉಪಹಾರ ಮತ್ತು ಮಧ್ಯಾಹ್ನ ಊಟವನ್ನು ಹೊರಗಿನಿಂದಲೇ ತರಿಸಿಕೊಂಡು ಸೇವಿಸಿದ ಬಳಿಕ ವಿಚಾರಣೆ ಮುಂದುವರಿಸಿದರು. ವಿಚಾರಣೆ ಸಮಯದಲ್ಲಿ ಸಿ.ಅಶೋಕ್ ಅಧಿಕಾರಿಗಳು ಕೇಳಿದ ಮಾಹಿತಿಯನ್ನು ನೀಡುವ ಮೂಲಕ ವಿಚಾರಣೆಗೆ ಸಹಕರಿಸಿದರು. ಇದೇ ವೇಳೆ ಮೈಸೂರಿನ ಮನೆಯಲ್ಲಿದ್ದ ಅಶೋಕ್ ಅವರ ಪತ್ನಿ ವಿಜಯ ಅವರನ್ನು ಚಿನಕುರಳಿ ಮನೆಗೆ ಕರೆಸಿಕೊಂಡು ಐಟಿ ಅಧಿಕಾರಿಗಳು ಪ್ರತ್ಯೇಕವಾಗಿ ವಿಚಾರಣೆ ನಡೆಸಿದರು.
ಮಧ್ಯಾಹ್ನ 3ರ ಸಮಯದಲ್ಲಿ ಇಬ್ಬರು ಅಧಿಕಾರಿಗಳು ಮನೆಯಿಂದ ಹೊರಗೆ ಬಂದು ಬ್ಯಾಂಕ್ ಖಾತೆಗಳ ಪರಿಶೀಲನೆಗೆ ತೆರಳಿದರು. ಈ ವೇಳೆ ಅಧಿಕಾರಿಗಳು ನೀಲಿ ಬಣ್ಣದ ಕವರ್‌ನಲ್ಲಿ ಹಲವು ದಾಖಲೆಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಿದ್ದರು. ಉಳಿದ ಅಧಿಕಾರಿಗಳು ಸಂಜೆಯಾದರೂ ಅಶೋಕ್ ನಿವಾಸದಲ್ಲಿ ದಾಖಲೆಗಳ ಪರಿಶೀಲನೆಯನ್ನು ಮುಂದುವರೆದಿತ್ತು.
ನೆರೆದಿದ್ದ ಜನಸಾಗರ: ಜಿಲ್ಲಾ ಸಚಿವ ಪುಟ್ಟರಾಜು ನಿವಾಸದ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿರುವ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದ್ದರಿಂದ ಅಪಾರ ಸಂಖ್ಯೆಯ ಜನಸ್ತೋಮ ಪುಟ್ಟರಾಜು ನಿವಾಸದ ಬಳಿ ಜಮಾಯಿಸಿತ್ತು. ನಂತರ ಅಶೋಕ್ ಮನೆಯ ಮೇಲೆ ದಾಳಿ ನಡೆಸಿರುವ ವಿಷಯ ತಿಳಿದು ಅಲ್ಲಿಗೆ ದೌಡಾಯಿಸಿದರು. ಜೆಡಿಎಸ್ ಕಾರ್ಯಕರ್ತರು, ಪುಟ್ಟರಾಜು ಅವರ ಬೆಂಬಲಿಗರು, ಅಭಿಮಾನಿಗಳು ಚಿನಕುರಳಿಗೆ ಆಗಮಿಸಿ ಪುಟ್ಟರಾಜು ಅವರ ಬೆಂಬಲಕ್ಕೆ ನಿಂತರು. ನಿಮ್ಮೊಡನೆ ನಾವಿದ್ದೇವೆ. ಅಧಿಕಾರಿಗಳ ದಾಳಿಯಿಂದ ಆತ್ಮಸ್ಥೈರ್ಯ ಕಳೆದುಕೊಳ್ಳದಿರುವಂತೆ ಧೈರ್ಯ ಹೇಳಿದರು.
ದಾಳಿಯ ಹಿಂದಿನ ಉದ್ದೇಶವೇನು?: ಸಚಿವ ಸಿ.ಎಸ್.ಪುಟ್ಟರಾಜು ಅವರು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಪ್ತರು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಿಎಂ ಕುಮಾರಸ್ವಾಮಿ ಪುತ್ರ ನಿಖೀಲ್ ಸ್ಪರ್ಧಿಸಿರುವ ಕಾರಣ ಚುನಾವಣಾ ಜವಾಬ್ದಾರಿಯನ್ನು ಅವರೇ ವಹಿಸಿಕೊಂಡಿದ್ದಾರೆ. ಪ್ರಚಾರ ಸಭೆ ಸೇರಿದಂತೆ ಚುನಾವಣಾ ಕಾರ್ಯತಂತ್ರಗಳನ್ನು ಸ್ವತಃ ಪುಟ್ಟರಾಜು ಅವರ ನೇತೃತ್ವದಲ್ಲೇ ನಡೆಸಲಾಗುತ್ತಿದೆ.
ಅಲ್ಲದೆ, ಪುಟ್ಟರಾಜು ಅವರಿಗೆ ಬೆಂಬಲವಾಗಿ ಸೋದರನ ಪುತ್ರರಾದ ಅಶೋಕ್ ಮತ್ತು ಶಿವಕುಮಾರ್ ನಿಂತು ಸಾಕಷ್ಟು ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ಚುನಾವಣಾ ವೆಚ್ಚಕ್ಕಾಗಿ ಸಚಿವ ಪುಟ್ಟರಾಜು ಮತ್ತು ಅವರ ಸಂಬಂಧಿಕರ ಮನೆಯಲ್ಲಿ ದೊಡ್ಡ ಮೊತ್ತದ ಹಣ ಸಂಗ್ರಹಿಸಿಟ್ಟಿರಬಹುದು ಎಂಬ ಅನುಮಾನದೊಂದಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿರುವ ಸಾಧ್ಯತೆಗಳಿವೆ ಎಂದು ಗೊತ್ತಾಗಿದೆ.