Advertisement

ದೇಶದ ವಿವಿಧೆಡೆ ಐಟಿ ದಾಳಿ: 14.48 ಕೋಟಿ ರೂ.ವಶ

06:20 AM Apr 27, 2018 | Team Udayavani |

ನವದೆಹಲಿ: ಕರ್ನಾಟಕದಲ್ಲಿ ಚುನಾವಣೆ ಕಾವು ಹೆಚ್ಚುತ್ತಿರುವ ಬೆನ್ನಲ್ಲೇ ದೇಶದ ವಿವಿಧೆಡೆ ಆದಾಯ ತೆರಿಗೆ ಇಲಾಖೆ(ಐಟಿ)ನಡೆಸಿದ ದಾಳಿ ಯಲ್ಲಿ ಬರೋಬ್ಬರಿ 14.48 ಕೋಟಿರೂ. ವಶ ಪಡಿಸಿ ಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವೆಲ್ಲವೂ ಯಾವುದೇ ದಾಖಲೆ ಇಲ್ಲದ ಹಣ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Advertisement

ಎಟಿಎಂಗಳಲ್ಲಿ ಹಣ ಅಲಭ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಐಟಿ ಅಧಿಕಾರಿಗಳು ದೇಶದ ವಿವಿಧ ಕಡೆಗಳಲ್ಲಿ ದಾಳಿ ನಡೆಸುತ್ತಲೇ ಬಂದಿದ್ದರು. ಈ ವೇಳೆ ಹಣದ ಕಂತೆ ಕಂತೆಯೇ ಸಿಕ್ಕಿರುವುದಾಗಿ ಇಲಾಖೆ ಹೇಳಿಕೊಂಡಿದ್ದು, ವಶಕ್ಕೆ ಪಡೆಯಲಾದ ನಗದು
ಮೊತ್ತದಲ್ಲಿ 2000 ಮತ್ತು 500 ರೂ.ಗಳ ನೋಟುಗಳೇ ಜಾಸ್ತಿ ಇವೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ದಾಳಿಯ ವೇಳೆ ಸಿಕ್ಕಿರುವ ಮೊತ್ತ ಪಿಡಬ್ಲ್ಯುಡಿ ಗುತ್ತಿಗೆದಾರರಿಗೆ ಸೇರಿದ್ದಾಗಿದೆ. ಕರ್ನಾಟಕದ ಚುನಾವಣೆ ಹಿನ್ನೆಲೆಯಲ್ಲಿ ಅವರ ಮೂಲಕ ಹಣ ಒಂದೆಡೆಯಿಂದ ಇನ್ನೊಂದೆಡೆ ಸಾಗಿಸಲಾಗು ತ್ತಿತ್ತು. ಜನವರಿ-ಮಾರ್ಚ್‌ ನಲ್ಲಿ ಇವರಿಗೆ ಗುತ್ತಿಗೆ ನೀಡಿರುವುದು ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.

ಹಲವೆಡೆ ಹದ್ದಿನ ಕಣ್ಣು : ಈ ಬೆಳವಣಿಗೆ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿ ಇನ್ನೂ ಕೆಲವು ರಾಜ್ಯಗಳ ಗಡಿ ಪ್ರದೇಶದಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಹದ್ದಿನ ಕಣ್ಣು ಇಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಅಕ್ರಮ ಹಣ ಸಾಗಾಟಕ್ಕೆ ಅವಕಾಶ ನೀಡದಂತೆ ಕೆಲ ಮುಖಂಡರು, ಉದ್ಯಮಿಗಳು, ಗುತ್ತಿಗೆದಾರರ ಚಲನವಲನಗಳ ಮೇಲೂ ನಿಗಾ ಇಟ್ಟಿದ್ದಾಗಿ ಮಾಹಿತಿ ಲಭಿಸಿದೆ.

ರಾಜ್ಯದಲ್ಲಿ 6.76 ಕೋಟಿ ರೂ. ವಶಕ್ಕೆ
ಬೆಂಗಳೂರು:
ರಾಜ್ಯದ 11 ಮಂದಿ ಗುತ್ತಿಗೆದಾರರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 6.76 ಕೋಟಿ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ. 

Advertisement

ಏ.24ರಂದು ಮೈಸೂರಿನ 10 ಮಂದಿ ಮತ್ತು ಬೆಂಗಳೂರಿನ ಒಬ್ಬ ಗುತ್ತಿಗೆದಾರನ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದರು.

ಈ ವೇಳೆ ಕೆಲ ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿತ್ತು. ಈ ಸಂದರ್ಭದಲ್ಲಿ ಮೈಸೂರಿನ ನಾಲ್ವರು ಗುತ್ತಿಗೆದಾರರ ನಿವಾಸದಲ್ಲಿ ದಾಖಲೆ ಇಲ್ಲದೇ ಸಂಗ್ರಹಿಸಿಟ್ಟಿದ್ದ 6.7 ಕೋಟಿ ರೂ. ನಗದು ಪತ್ತೆ ಹಚ್ಚಿದೆ. ಆ ಪೈಕಿ 500 ಹಾಗೂ 2000 ಮುಖಬೆಲೆಯ ನೋಟುಗಳು ಹೆಚ್ಚಾಗಿವೆ. ಈ ಹಣಕ್ಕೆ ಗುತ್ತಿಗೆದಾರರ ಬಳಿ ಯಾವುದೇ ದಾಖಲೆಗಳಿಲ್ಲ.

ಅಲ್ಲದೇ ಅವರ ವ್ಯವಹಾರದ ಪುಸ್ತಕದಲ್ಲೂ ಉಲ್ಲೇಖವಿಲ್ಲ. ಅಷ್ಟೇ ಅಲ್ಲದೇ, ದಾಳಿ ವೇಳೆ ವಶಪಡಿಸಿಕೊಂಡ ದಾಖಲೆಗಳ ಪರಿಶೀಲಿಸಿದಾಗ, 11 ಮಂದಿ ಗುತ್ತಿಗೆದಾರರು ಬೇನಾಮಿ ಹೆಸರುಗಳಲ್ಲಿ ಆಸ್ತಿ ಸಂಪಾದನೆ, ಲಾಕರ್‌ಗಳಲ್ಲಿ ಕೋಟ್ಯಂತರ ರೂ. ಹಣ ಮತ್ತು ಅಘೋಷಿತ ಆಸ್ತಿ ಹಾಗೂ ಹಣ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರ್‌ವಿಡಿ ಆಪ್ತನ ಮನೆ ಮೇಲೆ ದಾಳಿ
ಹಳಿಯಾಳ:
ಉತ್ತರ ಕನ್ನಡ ಜಿಲ್ಲೆ ಹಳಿಯಾಳ ಬ್ಲಾಕ್‌ ಕಾಂಗ್ರೆಸ್‌, ಅಕ್ರಮ-ಸಕ್ರಮ ಸಮಿತಿ ಅಧ್ಯಕ್ಷ, ಪ್ರಥಮ ದರ್ಜೆ ಗುತ್ತಿಗೆದಾರ ಹಾಗೂ ಸಚಿವ ದೇಶಪಾಂಡೆ ಆಪ್ತ ಸುಭಾಷ ಕೊರ್ವೆಕರ ಹಾಗೂ ಸಂಬಂಧಿ ಕರ ಮನೆ ಮೇಲೆ ಐಟಿ ಅಧಿ ಕಾರಿಗಳು ಬುಧವಾರ ಸಂಜೆ ದಾಳಿ ನಡೆಸಿದ್ದಾರೆ. ಯಲ್ಲಾಪುರ ನಾಕಾ ಬಳಿ ಸಕ್ಕರೆ ಕಾರ್ಖಾನೆಗೆ ತೆರಳುವ ರಸ್ತೆಯಲ್ಲಿರುವ ಸುಭಾಷ ಕೊರ್ವೆಕರ ನಿವಾಸ, ಅವರ ಮಾವ ಗುತ್ತಿಗೆದಾರ ನಾರಾಯಣ ದೇಸೂರಕರ ಅವರ ಶೇಖನಕಟ್ಟಾ ಗ್ರಾಮದ ಮನೆ ಹಾಗೂ ಸುಭಾಷ ಅವರ ಸಹೋದರ ತಾಲೂಕಿನ ಸಂಕನಕೊಪ್ಪ ಗ್ರಾಮದಲ್ಲಿರುವ ದೇವೇಂದ್ರ ಮಹಾಬಳೇಶ್ವರ ಕೊರ್ವೆಕರ ಮನೆ ಸೇರಿ 3 ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಲಾಗಿದೆ.

5 ರಿಂದ 6 ಜನರಿದ್ದ ಐಟಿ ಅಧಿಕಾರಿಗಳ ಮೂವರ ತಂಡ ಕೊರ್ವೆಕರ ಮನೆಗಳ ಮೇಲೆ ಹಠಾತ್‌ ದಾಳಿ ನಡೆಸಿದೆ. ಸಂಜೆ 4
ಗಂಟೆಗೆ ಮನೆ ಪ್ರವೇಶಿಸಿದ ತಂಡವು ತಡರಾತ್ರಿಯವರೆಗೆ ಸಂಪೂರ್ಣ ದಾಖಲಾತಿಗಳನ್ನು ಪರಿಶೀಲಿಸಿದೆ.

14.48 ಕೋಟಿ ರೂ.: ಐಟಿ ಅಧಿಕಾರಿಗಳು ಇತ್ತೀಚೆಗೆ ವಶಪಡಿಸಿ ಕೊಂಡ ನಗದು

6.76 ಕೋಟಿ ರೂ.:ಕಳೆದ ವಾರ ಗುತ್ತಿಗೆ ದಾರರಿಂದ ವಶಪಡಿಸಿ ಕೊಳ್ಳಲಾದ ನಗದು

10.62 ಕೋಟಿ ರೂ.:ಚುನಾವಣೆ ಪ್ರಕಟಿಸಿದ ಬಳಿಕ ವಶಪಡಿಸಿಕೊಂಡ ಮೊತ್ತ

1.33 ಕೋಟಿ ರೂ.:ಚುನಾವಣೆ ಪ್ರಕಟಿಸಿದ ಬಳಿಕ ವಶಕ್ಕೆ ಪಡೆದ ಚಿನ್ನಾಭರಣಗಳ ಮೌಲ್ಯ

5.10 ಕೋಟಿ ರೂ.:ಹೈದರಾಬಾದ್‌ ವಲಯದಲ್ಲಿ ವಶಕ್ಕೆ ಪಡೆದ ಒಟ್ಟು ನಗದು

2.62 ಕೋಟಿ ರೂ.:ಪಂಜಾಬ್‌ನ ಖನ್ನಾ ಜಿಲ್ಲೆಯಲ್ಲಿ ವಶಕ್ಕೆ ಪಡೆದ ಒಟ್ಟು ನಗದು

66.49 ಲಕ್ಷ ರೂ.:ಪಂಜಾಬ್‌ನ ಖನ್ನಾದಲ್ಲಿ ವಶಕ್ಕೆ ಪಡೆದ ಚಿನ್ನಾಭರಣಗಳ ಮೌಲ್ಯ

Advertisement

Udayavani is now on Telegram. Click here to join our channel and stay updated with the latest news.

Next