ಬಾಗಲಕೋಟೆ/ವಿಜಯಪುರ: ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಹಾಗೂ ವಿಜಯಪುರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸುನೀತಾ ಚವ್ಹಾಣ ಆಪ್ತರ ಮನೆ ಮೇಲೆ ಶನಿವಾರ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ.
ಶಿವಾನಂದ ಪಾಟೀಲರ ಆಪ್ತರೂ ಆಗಿರುವ ಡಿಸಿಸಿ ಬ್ಯಾಂಕ್‌ನ ಇಬ್ಬರು ನೌಕರರಾದ ಆರೀಫ್ ಕಾರಲೇಕರ, ಯಾಸೀನ್ ತುಂಬರಮಟ್ಟಿ ಅವರ ಮನೆಯ ಮೇಲೆ ಬೆಳಗಾವಿಯ ಐಟಿ ಅಧಿಕಾರಿ ವಿಕ್ರಮ ನೇತೃತ್ವದ ಸುಮಾರು 8ರಿಂದ 10 ಜನ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ತಪಾಸಣೆ ಬಳಿಕ ಅವರನ್ನು ವಶಕ್ಕೆ ಪಡೆದು ವಿಚಾರಣೆ ಕೂಡ ಮಾಡಿದ್ದಾರೆ ಎನ್ನಲಾಗಿದೆ.
ಇನ್ನೊಂದೆಡೆ ವಿಜಯಪುರ ಜೆಡಿಎಸ್ ಅಭ್ಯರ್ಥಿ ಸುನೀತಾ ಚವ್ಹಾಣ ಅವರ ಸಂಬಂಧಿಗಳಾದ ತಾಂಬಾ ಗ್ರಾಮದಲ್ಲಿರುವ ಇಬ್ಬರ ಮನೆಗಳ ಮೇಲೆ ದಾಳಿ ನಡೆಸಿರುವ ಐಟಿ ಅಧಿಕಾರಿಗಳು 12 ಲಕ್ಷ ರೂ. ವಶಕ್ಕೆ ಪಡೆದಿದ್ದಾರೆ.
ಜೆಡಿಎಸ್ ಅಭ್ಯರ್ಥಿ ಡಾ| ಸುನೀತಾ ಚವ್ಹಾಣ ಅವರ ಪತಿ ಡಾ| ದೇವಾನಂದ ಚವ್ಹಾಣ ಜಿಲ್ಲೆಯ ನಾಗಠಾಣ ಕ್ಷೇತ್ರದ ಶಾಸಕರಾಗಿದ್ದು, ಆದಾಯ ಇಲಾಖೆಯ 6 ಅಧಿಕಾರಿಗಳ ತಂಡ ದೇವಾನಂದ ಅವರ ಅಳಿಯ ವಿಜಯಕುಮಾರ ದೊಡಮನಿ ಹಾಗೂ ರಡ್ಡೇವಾಡಿ ದೇವೇಂದ್ರ ಅವರ ಮನೆ ಮೇಲೆ ದಾಳಿ ನಡೆಸಿದೆ.
ನಮ್ಮ ಸಂಬಂಧಿಗಳ ಮೇಲೆ ಅದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿದ್ದು ನಿಜ. ಚಹಾ ಪುಡಿ-ಸಕ್ಕರಿ ಡಬ್ಬಿ, ಜೀರಿಗೆ, ಸಾಸಿವೆ, ಅರಿಶಿಣ ಪುಡಿ ಡಬ್ಬಿಯಲ್ಲೆಲ್ಲ ಹುಡುಕಾಡಿ ಏನೂ ಸಿಗದೇ ಬರಿಗೈಲಿ ಹೋಗಿದ್ದಾರೆ. ನಮ್ಮ ಅಭ್ಯರ್ಥಿಯ ಎದುರಾಳಿ ಸೋಲಿನ ಭೀತಿಯಿಂದ ನಡೆಸಿರುವ ಪಿತೂರಿ ಇದು.
-ದೇವಾನಂದ ಚವ್ಹಾಣ, ಜೆಡಿಎಸ್ ಶಾಸಕ