Advertisement

Bidar DCC Bank ಮೇಲೆ ಐಟಿ ದಾಳಿ: ರಾಜಕೀಯ ತಿರುವಿಗೆ ಕಾರಣ?

10:59 PM Apr 12, 2024 | Team Udayavani |

ಬೀದರ್ : ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಸಹೋದರ ಅಧ್ಯಕ್ಷರಾಗಿರುವ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ (ಡಿಸಿಸಿ) ಮೇಲೆ ಆದಾಯ ತೆರಿಗೆ ಅಧಿಕಾರಿಗಳ ತಂಡ ಶುಕ್ರವಾರ ದಾಳಿ ನಡೆಸಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ದಾಳಿ ನಡೆದಿರುವುದು ಕುತೂಹಲ ಮೂಡಿಸಿದ್ದು, ರಾಜಕೀಯ ತಿರುವಿಗೆ ಕಾರಣವಾಗಲಿದೆ.

Advertisement

ಕಲ್ಬುರ್ಗಿ, ಯಾದಗಿರಿ ಮತ್ತು ತೆಲಂಗಾಣಾದ ಅಧಿಕಾರಿಗಳನ್ನು ಒಳಗೊಂಡ 15 ಜನರ ತಂಡ ಬೆಳಗ್ಗೆ11.30 ರ ಸುಮಾರಿಗೆ ದಾಳಿ ಮಾಡಿದೆ. ಬಿಗಿ ಪೊಲೀಸ್ ಬಂದೋಬಸ್ತ್ ನಡುವೆ ಬ್ಯಾಂಕ್‌ನ ಮೂರು ಕಡೆಯ ಮುಖ್ಯ ದ್ವಾರಗಳಿಗೆ ಬೀಗ ಜಡಿದು, ಬ್ಯಾಂಕ್ ಅಧಿಕಾರಿ ಮತ್ತು ಸಿಬ್ಬಂದಿಗಳ ಮೊಬೈಲ್‌ಗಳನ್ನು ಬಂದ್ ಮಾಡಿಸಿ ದಾಖಲೆಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಸರ್ಕಾರದ ನಿಯಮ ಗಾಳಿಗೆ ತೂರಿ ಸಾಲ ನೀಡಿರುವ ಆರೋಪ ಹಿನ್ನಲೆ ಈ ದಾಳಿ ನಡೆದಿದೆ ಎನ್ನಲಾಗುತ್ತಿದೆ.

ಬ್ಯಾಂಕ್ ಹಲವು ವರ್ಷಗಳ ಕಾಲ ನಾಗಮಾರಪಳ್ಳಿ ಪರಿವಾರದ ಹಿಡಿತದಲ್ಲಿತ್ತು. ಆರು ತಿಂಗಳ ಹಿಂದೆಯಷ್ಟೇ ನಡೆದಿದ್ದ ಚುನಾವಣೆಯಲ್ಲಿ ಸಚಿವ ಈಶ್ವರ ಅವರ ಸಹೋದರ ಅಮರಕುಮಾರ್ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅಷ್ಟೇ ಅಲ್ಲ ಈಗ ಸಚಿವರ ಪುತ್ರ ಸಾಗರ್ ಖಂಡ್ರೆ ಬೀದರ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ಲೋಕಸಭೆ ಚುನಾವಣೆಗೆ ಕೆಲವು ದಿನ ಬಾಕಿ ಇರುವಾಗ ಐಟಿ ದಾಳಿ ಆಗಿರುವುದು ಕುತೂಹಲ ಮೂಡಿಸಿದೆ.

ಐಟಿ ದಾಳಿ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಡಿಸಿಸಿ ಬ್ಯಾಂಕ್ ಸಿಇಒ ಮಂಜುಳಾ, ಐಟಿ ಅಧಿಕಾರಿಗಳು ಅಕೌಂಟ್ ಬ್ಯಾಲೆನ್ಸ್ ಪರಿಶೀಲಿಸುತ್ತಿದ್ದಾರೆ. ಚುನಾವಣೆ ವೇಳೆ ಇದು ನಿರಂತರ ಪ್ರಕ್ರಿಯೆ. ನಾವು ಪಾರದರ್ಶಕವಾಗಿದ್ದು, ಅಧಿಕಾರಿಗಳು ಕೇಳುವ ಎಲ್ಲ ದಾಖಲೆಗಳನ್ನು ನೀಡಿದ್ದೇವೆ ಎಂದು ಹೇಳಿದ್ದಾರೆ.

ರಾಜಕೀಯ ಪ್ರೇರಿತ

Advertisement

ಸುದ್ದಿಗಾರರ ಜತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ, ಐಟಿ ದಾಳಿ ರಾಜಕೀಯ ಪ್ರೇರಿತವಾಗಿದ್ದು, ಕಾಂಗ್ರೆಸ್ ಪಕ್ಷವನ್ನು ಹೆದರಿಸುವ ಕೆಲಸವಾಗಿದೆ. ನಮಗೆ‌ ಕಾನೂನಿನ ಮೇಲೆ ನಂಬಿಕೆ ಇದ್ದು, ಜನರೂ ಸಹ‌ ಇದಕ್ಕೆ ತಕ್ಕ ಉತ್ತರ ನೀಡುತ್ತಾರೆ ಎಂದರು.

ಬಿಜೆಪಿ ಎಲ್ಲ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಳ್ಳುತ್ತಿದೆ. ಒಬ್ಬ ಬಿಜೆಪಿ ಸಮರ್ಥಕ, ಅವರ ಸಂಸ್ಥೆಯ ಮೇಲೆ ಎಲ್ಲಿಯಾದರೂ ದಾಳಿ ಆಗಿದೆಯಾ‌ ? ಸ್ವಲ್ಪ ಕೊರತೆಯಿದ್ದರೆ ಬಿಜೆಪಿ ಸೇರಿದರೆ ಸಾಕು‌ ಪ್ರಕರಣ ರದ್ದಾಗುತ್ತದೆ‌. ಬಿಜೆಪಿಯದ್ದು ಸರ್ವಾಧಿಕಾರಿ ಧೋರಣೆಯಾಗಿದ್ದು, ಪ್ರತಿಪಕ್ಷ ಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಸಚಿವ ಖಂಡ್ರೆ ಕಿಡಿಕಾರಿದರು.

Advertisement

Udayavani is now on Telegram. Click here to join our channel and stay updated with the latest news.

Next