Advertisement

ಐಟಿ ಪಾರ್ಕ್‌, ಎಸ್‌ಎಝಡ್‌, ಮಂಗಳೂರು ರೈಲ್ವೇ ವಲಯಕ್ಕೆ ಆದ್ಯತೆ: ನಳಿನ್

04:50 AM Mar 05, 2019 | Team Udayavani |

ಮಂಗಳೂರು: ಕೊಣಾಜೆಗೆ ಐಟಿ ಪಾರ್ಕ್‌, ವಿಶೇಷ ಕೃಷಿ ಆರ್ಥಿಕ ವಲಯ (ಎಸ್‌ಎಝಡ್‌) ಸ್ಥಾಪನೆ ಹಾಗೂ ಮಂಗಳೂರು ರೈಲ್ವೇ ವಲಯ ಘೋಷಣೆ ಬಗ್ಗೆ ಕೇಂದ್ರ ಸರಕಾರ ವಿಶೇಷ ಮುತುವರ್ಜಿ ವಹಿಸಿದ್ದು, ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ಸಂಸದ ನಳಿನ್‌ ಕುಮಾರ್‌ ಕಟೀಲು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Advertisement

ಜಿಲ್ಲೆಯ ಜನರ ಬಹುವರ್ಷಗಳ ಬೇಡಿಕೆಯಂತೆ ಮುಡಿಪಿನ ಕೊಣಾಜೆಯಲ್ಲಿ ಐಟಿ ಪಾರ್ಕ್‌ ಸ್ಥಾಪನೆಯಾಗಲಿದೆ. ಸುಳ್ಯ, ಪುತ್ತೂರು ಹಾಗೂ ಬೆಳ್ತಂಗಡಿಯನ್ನು ಕೇಂದ್ರೀಕರಿಸಿ ಇಸ್ರೇಲ್‌ ಮಾದರಿಯಲ್ಲಿ ವಿಶೇಷ ಕೃಷಿ ಆರ್ಥಿಕ ವಲಯ ಸ್ಥಾಪನೆಗೊಳ್ಳಲಿದೆ ಎಂದರು. 

ಮಂಗಳೂರು ರೈಲ್ವೇ ವಲಯ  ಘೋಷಣೆಗೆ ಪ್ರಸ್ತಾವನೆ
ರೈಲ್ವೇಯಲ್ಲಿ ಮಂಗಳೂರು ವಿಭಾಗ ಸ್ಥಾಪನೆ ಬದಲು ಮಂಗಳೂರು ವಲಯ ಘೋಷಣೆಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಕೇರಳದ ಪಾಲಾ^ಟ್‌, ಮಂಗಳೂರು ಹಾಗೂ ಮೈಸೂರು ವಿಭಾಗಗಳನ್ನು ಸೇರಿಸಿ ಪ್ರತ್ಯೇಕ ಮಂಗಳೂರು ರೈಲ್ವೇ ವಲಯ ಸ್ಥಾಪನೆಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ರೈಲ್ವೇ ವಿಭಾಗ ಸ್ಥಾಪನೆಗೆ ತಾಂತ್ರಿಕ ತೊಡಕು ಎದುರಾಗುವ ಹಿನ್ನೆಲೆಯಲ್ಲಿ ನೈಋತ್ಯ ವಲಯ ಮಾದರಿಯಲ್ಲಿ ಮಂಗಳೂರು ರೈಲ್ವೇ ವಲಯ ಸ್ಥಾಪನೆಯಾಗಲಿದೆ ಎಂದು ಹೇಳಿದರು.

ಶೀಘ್ರ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪನೆ
ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಪಾರ್ಕ್‌, ಬಂಟ್ವಾಳದಲ್ಲಿ ಕೋಕನಟ್‌ ಪಾರ್ಕ್‌ ಹಾಗೂ ಸುರತ್ಕಲ್‌ ಎನ್‌ಐಟಿಕೆಯಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಕೇಂದ್ರ ಸರಕಾರ ಈಗಾಗಲೇ ಒಪ್ಪಿಗೆ ಸೂಚಿಸಿದೆ. ಗಂಜಿಮಠದಲ್ಲಿ ಕೆಐಎಡಿಬಿಗೆ ಸೇರಿದ 180 ಎಕರೆ ಜಾಗದಲ್ಲಿ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪಿಸ ಲಾಗುತ್ತದೆ. ಈಗಾಗಲೇ ಸುಮಾರು 48 ಕಂಪೆನಿಗಳು ನೋಂದಣಿ ಮಾಡಿಕೊಂಡಿವೆ. ಕೇಂದ್ರ ಸರಕಾರದ ರಫ್ತು ವಲಯ ನೀತಿಯಡಿ ಪ್ಲಾಸ್ಟಿಕ್‌ ಪಾರ್ಕ್‌ ಸ್ಥಾಪನೆ ಶೀಘ್ರ ಆಗಲಿದೆ ಎಂದು ತಿಳಿಸಿದರು.

ಕೃಷಿ ಆರ್ಥಿಕ ವಲಯ ಸ್ಥಾಪನೆ ವಿಳಂಬವಾಗುವ ಹಿನ್ನೆಲೆಯಲ್ಲಿ ಕೋಕನಟ್‌ ಪಾರ್ಕ್‌ ಸ್ಥಾಪಿಸಲು ಆದ್ಯತೆ ನೀಡಲಾಯಿತು. ಎನ್‌ಐಟಿಕೆಯಲ್ಲಿ ಕೇಂದ್ರೀಯ ವಿದ್ಯಾಲಯ ಸ್ಥಾಪನೆಗೆ ಮೂಲಸೌಕರ್ಯ ಹೊಂದಿಸುವ ಕೆಲಸ ಆರಂಭವಾಗಿದೆ ಎಂದರು.

Advertisement

ಮರು ಡಾಮರೀಕರಣ 
ಬಿ.ಸಿ.ರೋಡ್‌ – ಪುಂಜಾಲಕಟ್ಟೆ ನಡುವೆ ದ್ವಿಪಥ ಕಾಮಗಾರಿ 98 ಕೋಟಿ ರೂ.ಗಳಲ್ಲಿ ನಡೆಯುತ್ತಿದೆ. ಕೆತ್ತಿಕಲ್‌ನಲ್ಲಿ 22 ಲಕ್ಷ ರೂ. ವೆಚ್ಚದಲ್ಲಿ ಭೂಕುಸಿತ ಪ್ರದೇಶವನ್ನು ದುರಸ್ತಿ ನಡೆಸಲಾಗಿದೆ. ಕೆಪಿಟಿಯಲ್ಲಿ ಕೆಳಸೇತುವೆ ಹಾಗೂ ನಂತೂರಿನಲ್ಲಿ ಮೇಲ್ಸೇತುವೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಬಿ.ಸಿ.ರೋಡ್‌- ಅಡ್ಡಹೊಳೆ ಕಾಂಕ್ರೀಟ್‌ ಕಾಮಗಾರಿ ಪುನರಾರಂಭಗೊಂಡಿದೆ. ಮೋರಿ ಮತ್ತು ಸೇತುವೆ ಕಾಮಗಾರಿ ನಡೆಸಲಾಗುತ್ತಿದೆ ನಳಿನ್‌ ಕುಮಾರ್‌ ಅವರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next