Advertisement
ಸದಾಶಿವನಗರದಲ್ಲಿರುವ ಡಿಕೆಶಿ ಅವರ ಮನೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಎಲ್ಲ ವ್ಯವಹಾರ ಪಾರದರ್ಶಕವಾಗಿದೆ. ಐಟಿ ಅಧಿಕಾರಿಗಳು ಶೋಧನೆ ವೇಳೆ ಕೇಳಿರುವ ಎಲ್ಲಾ ದಾಖಲೆಗಳನ್ನು ಒದಗಿಸಿದ್ದೇವೆ ಹಾಗೂ ಮುಂದೆಯೂ ತನಿಖೆಗೆ ಸಂಪೂರ್ಣವಾದ ಸಹಕಾರ ನೀಡಲಿದ್ದೇವೆ. ಆದರೆ, ಐಟಿ ಅಧಿಕಾರಿಗಳು ಅನಗತ್ಯವಾಗಿ ಪರಿಶೀಲನೆ ವಿಳಂಬ ಮಾಡುತ್ತಿದ್ದಾರೆ ಎಂದರು.
Related Articles
ಶಿವಕುಮಾರ್ ಮನೆಗೆ ಆಗಮಿಸಿದ ಸಹೋದರ ಡಿ.ಕೆ. ಸುರೇಶ್ ಅವರನ್ನು ಬೆಳಗ್ಗೆ ಒಳ ಬಿಡದ ಸಿಆರ್‌ಪಿಎಫ್ ಯೋಧರು, ಮಧ್ಯಾಹ್ನ ಶಿವಕುಮಾರ್ ಆರೋಗ್ಯದಲ್ಲಿ ಏರುಪೇರು ಆದ ಹಿನ್ನೆಲೆಯಲ್ಲಿ ಸ್ಥಳೀಯ ಹಿರಿಯ ಪೊಲೀಸರು ಸಿಆರ್‌ಪಿಎಫ್ ಯೋಧರಿಗೆ ಮನವೊಲಿಸಿ ಐಟಿ ಅಧಿಕಾರಿಗಳ ಅನುಮತಿ ಪಡೆದು ಕೆಲ ಹೊತ್ತ ಮಾತ್ರ ಮನೆ ಒಳ ಹೋಗಲು ಅನುಮತಿ ನೀಡಿದರು. ಈ ವೇಳೆ ಸಹೋದರರಿಬ್ಬರೂ ಸುಮಾರು 15 ನಿಮಿಷಕ್ಕೂ ಹೆಚ್ಚು ಹೊತ್ತು ಚರ್ಚಿಸಿದರು. ನಂತರ ಹೊರಬಂದು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ. ಸುರೇಶ್, ಎರಡು ದಿನಗಳಿಂದ ಸತತವಾಗಿ ವಿಚಾರಣೆ ನಡೆಸಿದ್ದರಿಂದ ರಕ್ತದೊತ್ತಡ ಹೆಚ್ಚಾಗಿತ್ತು. ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ಇಡೀ ಕಾಂಗ್ರೆಸ್ ನಮ್ಮ ಬೆಂಬಲಕ್ಕೆ ಇದೆ. 10-15 ನಿಮಿಷಗಳ ಕಾಲ ಅಣ್ಣನ ಜತೆ ಚರ್ಚಿಸಿದ್ದೇನೆ. ನಮ್ಮ ಊರಿನ ಮನೆಯ ಎಲ್ಲ ಭಾಗಗಳಿಗೂ ಸಿಆರ್‌ಪಿಫ್ ಯೋಧರು ಗಸ್ತು ತಿರುಗುತ್ತಿದ್ದಾರೆ. ಶನಿವಾರದೊಳಗೆ ವಿಚಾರಣೆ ಅಂತ್ಯವಾಗುವ ಸಾಧ್ಯತೆಯಿದೆ ಎಂದು ಐಟಿ ಅಧಿಕಾರಿಗಳು ತಿಳಿಸಿದ್ದಾರೆ ಎಂದರು.
Advertisement