ಮಂಡ್ಯ: ಸಿಎಂ ಪುತ್ರ ನಿಖೀಲ್ ಕುಮಾರಸ್ವಾಮಿ ಮತ್ತು ದಿ.ಅಂಬರೀಷ್ ಪತ್ನಿ ಸುಮಲತಾ ಅವರ ಸ್ಪರ್ಧೆಯಿಂದಾಗಿ ವಿಐಪಿ ಸ್ಟೇಟಸ್ ಪಡೆದುಕೊಂಡಿರುವ ಮಂಡ್ಯ ಕ್ಷೇತ್ರದಲ್ಲೇ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಠಿಕಾಣಿ ಹೂಡಿದ್ದಾರೆ. ಜತೆಗೆ ನಿಖೀಲ್ ಕುಮಾರಸ್ವಾಮಿ ವಾಸ್ತವ್ಯ ಹೂಡಿರುವ, ಕೆಆರ್‌ಎಸ್‌ನಲ್ಲಿ ಇರುವ ರಾಯಲ್ ಆರ್ಕಿಡ್
ಹೋಟೆಲ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕಳೆದ ವಾರವಷ್ಟೇ ಸಚಿವ ಸಿ.ಎಸ್.ಪುಟ್ಟರಾಜು ಸಂಬಂಧಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು, ಬುಧವಾರ ಕಾಂಗ್ರೆಸ್ ಮುಖಂಡ
ಎಂ.ಎಸ್. ಆತ್ಮಾನಂದ ಮನೆ ಮೇಲೆ ದಾಳಿ ನಡೆಸಿದ್ದರು. ಜತೆಗೆ ಕೆ.ಆರ್.ಪೇಟೆ ತಾಲೂಕಿನ ಕಾಂಗ್ರೆಸ್ ಮುಖಂಡ ಹಾಗೂ ಪುರಸಭಾ ಮಾಜಿ ಅಧ್ಯಕ್ಷ ಕೆ.ಟಿ.ಚಕ್ರಪಾಣಿ ಮನೆ ಹಾಗೂ ತೋಟದ ಮನೆ ಮೇಲೆ ಐಟಿ ಅಧಿಕಾರಿಗಳ ತಂಡ ಗುರುವಾರ ದಾಳಿ ನಡೆಸಿದೆ.
ಗುರುವಾರ ಕೆಆರ್‌ಎಸ್‌ನಲ್ಲಿರುವ ರಾಯಲ್ ಆರ್ಕಿಡ್ ಹೋಟೆಲ್‌ಗೆ ಮಧ್ಯಾಹ್ನ 1.30ಕ್ಕೆ 30 ಅಧಿಕಾರಿಗಳ ತಂಡ ತೆರಳಿ ತಪಾಸಣೆ ನಡೆಸಿದೆ. ಅದೂ ನಿಖೀಲ್ ವಾಸ್ತವ್ಯ ಹೂಡಿದ್ದ ರೂ. ನಂ. 33ರಲ್ಲೂ ತೀವ್ರ ತಪಾಸಣೆ ನಡೆಸಲಾಗಿದೆ ಎಂದು ಹೇಳಲಾಗಿದೆ. ನಿಖೀಲ್ ಅಷ್ಟೇ ಅಲ್ಲ, ಕುಮಾರಸ್ವಾಮಿ ಕೂಡ ಇಲ್ಲಿ ವಾಸ್ತವ್ಯ ಹೂಡಿ ಸಭೆ-ಸಮಾರಂಭ ನಡೆಸುತ್ತಿದ್ದರು ಎಂದು ಹೇಳಲಾಗಿದೆ. ಜಿಲ್ಲೆಯ ವಿವಿಧ ಹೋಟೆಲ್‌ಗಳಲ್ಲಿ ಬೀಡುಬಿಟ್ಟಿರುವ ಐಟಿ ಅಧಿಕಾರಿಗಳು ಮಫ್ತಿಯಲ್ಲಿ ಸಂಚರಿಸುತ್ತಾ ಜನಸಾಮಾನ್ಯರಿಂದಲೇ ಮಾಹಿತಿ ಕಲೆಹಾಕುತ್ತಿದ್ದಾರೆ. ಕಳೆದ ಚುನಾವಣಾ ಸಮಯದಲ್ಲಿ ಚುನಾವಣಾ ನೇತೃತ್ವ ವಹಿಸಿದ್ದ ಮುಖಂಡರು ಯಾರು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಮುಖಂಡರು ಎಲ್ಲೆಲ್ಲಿ ಸಭೆ ನಡೆಸುತ್ತಿದ್ದಾರೆ. ಎಲ್ಲೆಲ್ಲಿ ಹಣ ಸಂಗ್ರಹಿಸುವ ಸಾಧ್ಯತೆಗಳಿವೆ. ಅಂತಹ ಸ್ಥಳಗಳು, ಮುಖಂಡರ ಮನೆಗಳನ್ನು ಗುರುತಿಸಿ ಅಲ್ಲಿಗೆ
ದಾಳಿ ಮಾಡುತ್ತಿದ್ದಾರೆ. ಐಟಿ ಅಧಿಕಾರಿಗಳ ದಾಳಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮುಖಂಡರು, ಗುತ್ತಿಗೆದಾರರ ನಿದ್ದೆಗೆಡಿಸಿದೆ. ಎಲ್ಲಿ, ಯಾವಾಗ ಐಟಿ ಅಧಿಕಾರಿಗಳು ದಾಳಿ ನಡೆಸುವರೋ ಎಂಬ ಭಯದಿಂದ ಕಾದು
ಕೂರುವಂತಾಗಿದೆ.