ಬೆಂಗಳೂರು: ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯವನ್ನು ಹಿಂದು ಚಿಂತನೆಗಳೆಂಬ ಹಣೆಪಟ್ಟಿ ಕಟ್ಟಿ ಪಠ್ಯದಿಂದ ಹೊರಗಿಟ್ಟದ್ದು ತಪ್ಪು ಎಂದು ಮಣಿಪಾಲ್ ಗ್ಲೋಬಲ್ ಎಜುಕೇಷನ್ ಅಧ್ಯಕ್ಷ ಡಾ.ಮೋಹನದಾಸ್ ಪೈ ಅಭಿಪ್ರಾಯಪಟ್ಟಿದ್ದಾರೆ. ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಹಮ್ಮಿಕೊಂಡಿದ್ದ “ಆದಿಕವಿ ಪುರಸ್ಕಾರ’ ಮತ್ತು “ವಾಗ್ದೇವಿ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಸಂಸ್ಕೃತಿ ಇಲ್ಲದೆ ದೇಶವಿಲ್ಲ.
ಆದರೆ, ದಶಕಗಳ ಹಿಂದೆ ದೇಶದಲ್ಲಿ ಹಿಂದು ಸಂಸ್ಕೃತಿಗೇ ಜಾಗವಿಲ್ಲ ಎನ್ನುವ ಪರಿಸ್ಥಿತಿ ನಿರ್ಮಾಣಗೊಂಡಿತ್ತು. ಎಡಚಿಂತನೆ ಆಧರಿತ ಶಿಕ್ಷಣ ವ್ಯವಸ್ಥೆಯಲ್ಲಿ ರಾಮಾಯಣ, ಮಹಾಭಾರತಗಳು ಮರೆಯಾಗಿ ವಿದೇಶಿ ಚಿಂತನೆ, ಜೀವನ ಶೈಲಿಯೇ ವಿಜೃಂಭಿಸಿತು. ಈಗ ಧರ್ಮ, ಸಂಸ್ಕೃತಿ ರಕ್ಷಣೆಯ ಹೊಸ ಆಶಾವಾದ ಚಿಗುರಿದೆ. ಹೀಗಾಗಿ, ಭಾರತೀಯ ಸಂಸ್ಕೃತಿಯ ಚಿಂತನೆಗಳಾದ ರಾಮಾಯಣ, ಮಹಾಭಾರತವನ್ನು ಪಠ್ಯದಲ್ಲಿ ಸೇರಿಸಬೇಕು ಎಂದರು.
ಕನ್ನಡದ ಪ್ರಶ್ನೆ ಬಂದಾಗ ವಿಜ್ಞಾನವನ್ನು ಹೇಗೆ ಕಲಿಯುವುದು ಎಂಬ ಪ್ರಶ್ನೆಯನ್ನು ಎತ್ತಿ ದಾರಿ ತಪ್ಪಿಸಲಾಗುತ್ತದೆ. ಚೀನಾ, ಬ್ರಿಟನ್, ಜಪಾನ್‌ನಂತಹ ಅನೇಕ ದೇಶಗಳು ವಿಜ್ಞಾನವನ್ನೂ ತಮ್ಮ ಭಾಷೆಗೆ ಅನುವಾದ ಮಾಡಿಕೊಂಡಿವೆ. ಆ ದೇಶಗಳಲ್ಲಿ ಜ್ಞಾನ ಶಾಖೆಗಳು ಅನುವಾದಗೊಳ್ಳುತ್ತಿವೆ. ಆದರೆ, ನಾವು ಇಂದಿಗೂ ಇಂಗ್ಲಿಷ್ ಮೇಲೆ ಅವಲಂಬಿತರಾಗಿದ್ದೇವೆ. ವಿಜ್ಞಾನವೂ ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಿಗೆ ಬಂದರೆ ಅವಲಂಬನೆ ಕಡಿಮೆಯಾಗುತ್ತದೆ ಎಂದರು.
ಭಾರತ ಆರ್ಥಿಕವಾಗಿ ಬಲಿಷ್ಠ ದೇಶವಾಗುವುದು ದೊಡ್ಡದಲ್ಲ, ಸಾಂಸ್ಕೃತಿಕವಾಗಿ ಬಲಿಷ್ಠವಾಗಬೇಕು. ಯಾಕೆಂದರೆ, ಕೇವಲ ಹಣದಿಂದ ನಾಗರಿಕತೆ ಬೆಳೆಯುವುದಿಲ್ಲ. ಸಂಸ್ಕೃತಿ, ಸಾಹಿತ್ಯಗಳೇ ದೇಶವನ್ನು ಮುನ್ನಡೆಸುವುದು, ಹಾಗಾಗಿ, ಸರ್ಕಾರ ವಿದ್ವಾಂಸರು, ಸಾಹಿತಿಗಳು, ಚಿಂತಕರನ್ನು ಪೋ›ತ್ಸಾಹಿಸಬೇಕು. ನಮ್ಮ ಭಾಷೆ, ಸಂಸ್ಕೃತಿಗಳನ್ನು ನಾವು ಹೋರಾಟದ ಮೂಲಕ ಬೆಳೆಸದಿದ್ದರೆ, ಮುಂದೊಂದು ದಿನ ಹಿಂದುತ್ವ ಮ್ಯೂಸಿಯಂ ಪಾಲಾದೀತು ಎಂದು ಎಚ್ಚರಿಸಿದರು.
ರಾಮಾಯಣಾಚಾರ್ಯ ಎಂದೇ ಖ್ಯಾತರಾದ ವಿದ್ವಾಂಸ ಪ್ರೊ.ಕೆ.ಎಸ್.ನಾರಾಯಣಾಚಾರ್ಯ ಅವರಿಗೆ “ಆದಿಕವಿ ಪುರಸ್ಕಾರ’ ಹಾಗೂ ಯುವ ಚಿಂತಕರಿಗೆ ನೀಡುವ ವಾಗ್ದೇವಿ ಪ್ರಶಸ್ತಿಯನ್ನು ಪುತ್ತೂರು ವಿವೇಕಾನಂದ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ರೋಹಿಣಾಕ್ಷ ಶಿರ್ಲಾಲು ಅವರಿಗೆ ಪ್ರದಾನ ಮಾಡಲಾಯಿತು.
ಟಿಪ್ಪು ಜಯಂತಿ ಆಚರಣೆ ಮಹಾಪಾಪ: ಸ್ವಾತಂತ್ರ್ಯ ಬಂದು 70 ವರ್ಷಗಳ ಬಳಿಕ ದೇಶದಲ್ಲಿ ಎಡ ಚಿಂತನೆ ನಾಶವಾಗುವ ಹಾದಿಯಲ್ಲಿದ್ದು, ನೆಲದ ಮೂಲ ಸತ್ವವಾದ ಭಾರತೀಯತೆ ತಲೆ ಎತ್ತಿ ನಿಲ್ಲುವ ವಾತಾವರಣ ನಿರ್ಮಾಣವಾಗಿದೆ .ಇನ್ನು ಟಿಪ್ಪು ಸುಲ್ತಾನ್ ಒಬ್ಬ ಕಟುಕ. ಮಂಗಳೂರಿನ ಕೊಂಕಣಿಗರನ್ನು, ಕ್ರೈಸ್ತರನ್ನು, ತುಳುವರನ್ನು ಕೊಂದ. ಕೇರಳದಲ್ಲಿ ದೇಗುಲ ನಾಶ ಮಾಡಿದ. ಅವನ ಜಯಂತಿ ಆಚರಣೆ ಮಹಾಪಾಪ ಎಂದು ಮೋಹನ್ ದಾಸ್ ಪೈ ಹೇಳಿದರು.