Advertisement

ಧರ್ಮ ಒಡೆಯಲು ಮುಂದಾಗಿರುವುದು ದುರದೃಷ್ಟಕರ

02:45 PM Apr 19, 2018 | Team Udayavani |

ಬೆಂಗಳೂರು: ಜಾತಿ ಬೇಧವಿಲ್ಲದ ಸಮಾಜವನ್ನು ಕಟ್ಟಿಕೊಟ್ಟಿದ್ದ ಬಸವಣ್ಣನವರು ಎಂದೂ ಧರ್ಮದ ಸಲುವಾಗಿ ಮಾತನಾಡಲಿಲ್ಲ. ಆದರೆ ಈಗ ನಾವು ಧರ್ಮವನ್ನೇ ಒಡೆಯಲು ನಿಂತಿದ್ದೇವೆ. ಇದರಿಂದ ನಮ್ಮ ಮೊಮ್ಮಕ್ಕಳು ಸಹ ತಾತ ನಾವು ಲಿಂಗಾಯತರು, ನೀವು ವೀರಶೈವರು ಎಂದು ಹೇಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ ಹೇಳಿದರು.

Advertisement

ಬಸವ ವೇದಿಕೆಯು ನಗರದ ಭಾರತೀಯ ವಿದ್ಯಾಭವನದಲ್ಲಿ ಬುಧವಾರ ಹಮ್ಮಿಕೊಂಡಿದ್ದ “ಬಸವಶ್ರೀ’ ಮತ್ತು “ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಬಸವಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ಸಮಾಜದ ನೂರಾರು ಮಠಮಾನ್ಯಗಳು, ಶಿಕ್ಷಣ ಸಂಸ್ಥೆಗಳಿದ್ದರೂ ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೀರಶೈವ ಲಿಂಗಾಯತರು ಕ್ರೈಸ್ತ ಧರ್ಮ ಸೇರುತ್ತಿದ್ದಾರೆ. ಸಮಾಜದ ಸಾಕ್ಷರತಾ ಪ್ರಮಾಣ ಶೇ.52ರಷ್ಟಿದೆ. ಇಂತಹ ಸಂದರ್ಭದಲ್ಲಿ ಧರ್ಮಾಂತರಕ್ಕೆ ಕಾರಣವೇನು, ಸಾಕ್ಷರತಾ ಪ್ರಮಾಣ ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳೇನು ಎಂದು ಚಿಂತಿಸುವುದು ಮುಖ್ಯವೇ ಹೊರತು ಧರ್ಮ ಒಡೆಯುವುದಲ್ಲ ಎಂದು ಮಾರ್ಮಿಕವಾಗಿ ನುಡಿದರು.

“ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಸ್ವೀಕರಿಸಿದ ಸಾಹಿತಿ ಹೀ.ಚಿ.ಶಾಂತವೀರಯ್ಯ, ಶರಣರು, ವಚನಕಾರರು ಸೃಷ್ಟಿಸಿದ ವಿಶೇಷ ಸಾಹಿತ್ಯ ಪ್ರಕಾರವು ಜಗತ್ತಿನ ಬೇರಾವುದೇ ಸಾಹಿತ್ಯದಲ್ಲೂ ಸಿಗುವುದಿಲ್ಲ ಎಂದು ಹೇಳಿದರು. “ವಚನ ಸಾಹಿತ್ಯಶ್ರೀ’ ಪ್ರಶಸ್ತಿ ಪಡೆದ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿವಿ ಕುಲಪತಿ ಡಾ.ಸರ್ವಮಂಗಳಾ ಶಂಕರ್‌ ಮಾತನಾಡಿ, ಸಂಗೀತಗಾರರು ಅಪೇಕ್ಷಿಸುವ ಎಲ್ಲ ಗುಣಗಳಿದ್ದರೂ ವಚನಗಳು ಹೆಚ್ಚು ಪ್ರಚಲಿತವಾಗಿಲ್ಲ. ಸ್ವರ ವಚನಗಳ ರಚನೆ, ಮಹತ್ವದ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ಬೇಲಿಮಠದ ಶಿವರುದ್ರ ಸ್ವಾಮೀಜಿ ಮಾತನಾಡಿ, ಕಲ್ಯಾಣ ಕ್ರಾಂತಿಯ ಬಳಿಕ ಅನುಭಾವದ ಶರಣರು ಉಳವಿ ಕಡೆಗೆ ಹೋದರೆ, ಶಿವಯೋಗಿಗಳು ಶ್ರೀಶೈಲದತ್ತ ತೆರಳಿದರು. ಆದರೆ ಕಾಯಕದ ಶರಣರು ಎತ್ತ ಹೊರಟರು ಎಂಬ ಬಗ್ಗೆ ಈವರೆಗೆ ಯಾರೂ ಸಂಶೋಧನೆ ನಡೆಸಿಲ್ಲ. ಪಿಎಚ್‌ಡಿ ಮಾಡುವವರಿಗೆ ಮಣ್ಣಿನ ನೆಲದಲ್ಲಿ ಮಾಹಿತಿ ಶೋಧಿಸುವ ಶ್ರಮ ಬೇಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಶ್ರೀರಂಗಪಟ್ಟಣದ ಬೇಬಿ ಮಠದ ತ್ರಿನೇತ್ರ ಮಹಾಂತ ಸ್ವಾಮೀಜಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ, ಹೈಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರು, ಬಸವ ವೇದಿಕೆ ಅಧ್ಯಕ್ಷ ಡಾ.ಸಿ.ಸೋಮಶೇಖರ್‌ ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next