ಕಲಬುರಗಿ: ಬಿಜೆಪಿಯಲ್ಲಿ ಶಾಸಕರ ಅಸಮಾಧಾನ ಇರುವುದು ನಿಜ. ಆದರೆ, ಅದೇ ದೊಡ್ಡ ವಿಷಯವಲ್ಲ. ಬಿಜೆಪಿ ಒಂದೇ ಕುಟುಂಬ ಇದ್ದಂತೆ. ಎಲ್ಲವನ್ನೂ ಸರಿಪಡಿಸಿಕೊಳ್ಳುತ್ತೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲ ಶಾಸಕರು ಸ್ನೇಹಿತರು. ಸಾಮಾನ್ಯವಾಗಿ ಒಟ್ಟಾಗಿ ಕೂಡಿರಬಹುದು. ಅವರು ಯಾರು ಸನ್ಯಾಸಿಗಳಲ್ಲ. ಸೂಕ್ತ ವೇದಿಕೆಯಲ್ಲಿ ಬಗೆಹರಿಸಿಕೊಳ್ಳುತ್ತೇವೆ. ಶಾಸಕರ ಪ್ರತ್ಯೇಕ ಸಭೆ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಮುಂದಿನ ಮೂರು ವರ್ಷದ ಅವಧಿಯನ್ನು ಸರ್ಕಾರ ಪೂರೈಸಲಿದೆ ಎಂದರು.
ವಿಧಾನ ಪರಿಷತ್ ಮತ್ತು ರಾಜ್ಯಸಭೆ ಚುನಾವಣೆ ಸಂಬಂಧ ಶನಿವಾರ ಸಂಜೆ 5 ಗಂಟೆಗೆ ಪಕ್ಷದ ಕೋರ್ ಕಮಿಟಿ ಸಭೆ ಕರೆಯಲಾಗಿದೆ. ಸಭೆಯಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವ ಕುರಿತು ಚರ್ಚೆ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕೆಂಬುದು ಸರ್ಕಾರದ ಅಪೇಕ್ಷೆ ಕೂಡ ಹೌದು. ಹೀಗಾಗಿ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಸಲಹೆ ಪಡೆಯಲಾಗಿದೆ. ಸದ್ಯಕ್ಕೆ ಕೋವಿಡ್-19 ಇರುವುದರಿಂದ ಚುನಾವಣೆ ನಡೆಸುವುದು ಬೇಡ ಎಂದು ಜಿಲ್ಲಾಧಿಕಾರಿಗಳು ಅಭಿಪ್ರಾಯ ಪಟ್ಟರು. ಆದ್ದರಿಂದ ಚುನಾವಣೆ ಮುಂದೂಡಲಾಗಿದೆ ಎಂದು ಈಶ್ವರಪ್ಪ ತಿಳಿಸಿದರು.
ಗ್ರಾ.ಪಂ. ಸಂಬಂಧ ಈಗಾಗಲೂ ಮೂರು ಆಯ್ಕೆಗಳು ಸರ್ಕಾರದ ಮುಂದೆ ಇದೆ. ಈ ಕುರಿತು ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈ ಗೊಳ್ಳಲಾಗುವುದು. ಆದರೆ, ಗ್ರಾ.ಪಂ.ಗಳಿಗೆ ಬಿಜೆಪಿ ಕಾರ್ಯಕರ್ತರನ್ನು ನೇಮಿಸಿ ಪಕ್ಷವನ್ನು ಗಟ್ಟಿಗೊಳಿಸಲು ಸರ್ಕಾರ ಹೊರಟಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪ ಸುಳ್ಳು. ನಮ್ಮ ಪಕ್ಷದ ‘ಬೇಸ್’ ಗಟ್ಟಿಯಾಗಿದೆ. ನಿಮ್ಮ ‘ಬೇಸ್’ ನೋಡಿಕೊಳ್ಳಿ ಎಂದು ಈಶ್ವರಪ್ಪ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಗೆ ತಿರುಗೇಟು ನೀಡಿದರು.
ಸಂಸದ ಡಾ.ಉಮೇಶ ಜಾಧವ, ಶಾಸಕರಾದ ಬಸವರಾಜ ಮತ್ತಿಮಡು, ಎಂ.ವೈ.ಪಾಟೀಲ, ವಿಧಾನಪರಿಷತ್ ಸದಸ್ಯ ಬಿ.ಜಿ.ಪಾಟೀಲ, ಜಿ.ಪಂ. ಅಧ್ಯಕ್ಷೆ ಸುವರ್ಣಾ ಮಲಾಜಿ, ಉಪಾಧ್ಯಕ್ಷೆ ಶೋಭಾ ಸಿರಸಗಿ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಇದ್ದರು.