ಬೆಂಗಳೂರು: ಸಂಸದ ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿದ ಅಶ್ಲೀಲ ಪೆನ್‌ಡ್ರೈವ್‌ವನ್ನು ಆತನ ಮಾಜಿ ಕಾರು ಚಾಲಕ ಕಾರ್ತಿಕ್ ನನಗೆ ಕೊಟ್ಟಿದ್ದು ನಿಜ. ಆದರೆ ಅದನ್ನು ನಾನು ಬಹಿರಂಗಗೊಳಿಸಿಲ್ಲ. ಚುನಾವಣೆ ಸಂದರ್ಭದಲ್ಲಿ ಯಾರಿಗೆ ಲಾಭ ಇದೆಯೋ ಅವರು ಮಾಡಿದ್ದಾರೆ. ರಾಜ್ಯ ಸರ್ಕಾರ ತೋಡಿರುವ ಗುಂಡಿಯಲ್ಲೇ ತಾನೇ ಬೀಳಲಿದೆ ಎಂದು ವಕೀಲರೂ ಆಗಿರುವ ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದರು.
ಕಾರ್ತಿಕ್ ಮಾಡಿರುವ ಆರೋಪಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿ, ಪ್ರಜ್ವಲ್ ಅವರ ಖಾಸಗಿ ವಿಡಿಯೋ ಚಿತ್ರೀಕರಿಸಿದವರು ಯಾರು? ಅದನ್ನು ಪೆನ್‌ಡ್ರೈವ್ ಯಾರು ಮಾಡಿದವರು? ಕಾರ್ತಿಕ್ ಬಳಿ ಈ ಪೆನ್‌ಡ್ರೈವ್ ಹೇಗೆ ಬಂತು ಎಂಬುದೆಲ್ಲವೂ ತನಿಖೆಯಿಂದ ಬಹಿರಂಗವಾಗಬೇಕು. ಹೀಗಾಗಿ ಈ ಪ್ರಕರಣವನ್ನು ಸಿಬಿಐಗೆ ವಹಿಸದಿದ್ದರೆ ನಾನೇ ಹೈಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.
ತನ್ನ ಪರ ವಕಾಲತ್ತು ವಹಿಸಲು ನನ್ನ ಬಳಿ ಕಾರ್ತಿಕ್ ಪೆನ್‌ಡ್ರೈವ್ ಹಿಡಿದು ಬಂದಿದ್ದ. ಇದನ್ನು ಬೇರೆ ಯಾರಿಗಾದರೂ ಕೊಟ್ಟಿದ್ದೀಯಾ ಎಂದು ಕೇಳಿದಾಗ, ಹಾಸನ ಕಾಂಗ್ರೆಸ್ ಅಭ್ಯರ್ಥಿ ಶ್ರೇಯಸ್ ಪಟೇಲ್ ಮತ್ತು ಅನುಪಮಾ ಅವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರನ್ನು ಭೇಟಿ ಮಾಡಿ, ಪೆನ್‌ಡ್ರೈವ್ ಕೊಟ್ಟಿದ್ದು ಸಮಯ ಬಂದಾಗ ಬಳಸುವುದಾಗಿ ಹೇಳಿದ್ದರು. ಆದರೆ 2 ತಿಂಗಳಾದರೂ ಕಾಂಗ್ರೆಸಿಗರಿಂದ ನ್ಯಾಯ ಸಿಗಲಿಲ್ಲವೆಂಬ ಬೇಸರದಲ್ಲಿ ನನ್ನ ಬಳಿ ಬಂದಿದ್ದ. ವಕೀಲನಾಗಿ ನಾನದನ್ನು ಪಡೆದು, ಸಾಕ್ಷಿಗಾಗಿ ಕಾಪಿ ಮಾಡಿಕೊಂಡು ಆತನಿಗೇ ಪೆನ್‌ಡ್ರೈವ್ ಹಿಂದಿರುಗಿಸಿದ್ದೆ. ಇದಿಷ್ಟೂ ನನ್ನ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಎಲ್ಲವನ್ನೂ ಎಸ್‌ಐಟಿಗೂ ಸಲ್ಲಿಸುತ್ತೇನೆ ಎಂದರು.
ನಾನು ಹೊಳೆನರಸೀಪುರ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ವಿಕಸಿತ ಭಾರತ ಕಾರ್ಯಕ್ರಮದಲ್ಲಿ ಎಚ್.ಡಿ.ರೇವಣ್ಣ ನನ್ನನ್ನು “ಡರ್ಟಿ ಫೆಲೋ’ ಎಂದಿದ್ದ ಸಿಟ್ಟು ನನಗಿದ್ದದ್ದು ನಿಜ. ಅದೇ ಸಿಟ್ಟಿನಲ್ಲಿ ನಾನು ಕೊಳಕನೋ? ನಿನ್ನ ಕುಟುಂಬವೋ ಎಂದು ಪ್ರಶ್ನಿಸಿದ್ದು ನಿಜ. ವಿಧಾನಸಭೆ ಚುನಾವಣೆಯಲ್ಲೇ ನಾನು ಪೆನ್‌ಡ್ರೈವ್ ಬಿಡುಗಡೆ ಮಾಡಿಸಿ ರೇವಣ್ಣರನ್ನು ಸೋಲಿಸಿ, ನಾನು ಗೆಲ್ಲಬಹುದಿತ್ತು. ಇಂಜೆಕ್ಷನ್ ಆದೇಶ ಇದ್ದರಿಂದ ಬಿಡುಗಡೆ ಮಾಡಬಾರದೆಂಬ ಸಾಮಾನ್ಯ ಜ್ಞಾನ ನನಗಿತ್ತು ಎಂದು ಹೇಳಿದರು.