Advertisement

Politics; ಅಡ್ವಾಣಿ ಭೇಟಿಯಾಗಿದ್ದು ನಿಜ,ಆದರೆ…: ಬಿಜೆಪಿ ಸೇರ್ಪಡೆ ಬಗ್ಗೆ ಸಿದ್ದರಾಮಯ್ಯ ಮಾತು

01:20 PM Sep 11, 2023 | Team Udayavani |

ಮೈಸೂರು: ಸಿದ್ದರಾಮಯ್ಯ ಬಿಜೆಪಿ ಸೇರ್ಪಡೆಗೆ ಮುಂದಾಗಿದ್ದರು, ಇದಕ್ಕಾಗಿ ಅಡ್ವಾಣಿಯವರನ್ನು ಭೇಟಿ ಮಾಡಿದ್ದರು ಎಂಬ ಜೆಡಿಎಸ್ ನಾಯಕರ ಹೇಳಿಕೆಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, ನನ್ನ ಹೆಣ ಕೂಡಾ ಬಿಜೆಪಿಗೆ ಸೇರಲ್ಲ ಎಂದಿದ್ದಾರೆ.

Advertisement

“ಬಿಜೆಪಿ ನಾಯಕರನ್ನು ಭೇಟಿ ಮಾಡಿದ ಮಾತ್ರಕ್ಕೆ ಬಿಜೆಪಿ ಸೇರಲು ಹೋಗಿದ್ದೆ ಅಂತಲ್ಲಾ. ನಾನು ಅಡ್ವಾಣಿಯವರನ್ನು ಯಾವುದೋ ಸಂದರ್ಭದಲ್ಲಿ ಭೇಟಿ ಮಾಡಿರುವುದು ನಿಜ. ಇತ್ತೀಚೆಗೆ ಅಮಿತ್ ಶಾ ಅವರನ್ನು ಸಹ ಭೇಟಿ ಮಾಡಿದ್ದೇನೆ. ಹಾಗಾದರೆ ಬಿಜೆಪಿ ಸೇರಲು ಹೋಗಿದ್ದೆ ಎಂದರ್ಥವೇ?  ನಾನು ಬಿಜೆಪಿ ವಿರುದ್ಧ ಹೋರಾಟ ಮಾಡಿಕೊಂಡು ಬಂದಿದ್ದೇನೆ. ಕೋಮುವಾದಿಗಳೊಂದಿಗೆ ಯಾವುದೇ ಕಾರಣಕ್ಕೂ ನಾನು ರಾಜಿ ಮಾಡಿಕೊಳ್ಳುವುದಿಲ್ಲ. ನನ್ನ ಹೆಣ ಕೂಡ ಬಿಜೆಪಿಗೆ ಹೋಗುವುದಿಲ್ಲ” ಎಂದರು.

ಒಂದು ದೇಶ ಒಂದು ಚುನಾವಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ಇದು ಅಸಾಧ್ಯವಾದ ಮಾತು. ಈ ಯೋಚನೆ ಅವೈಜ್ಞಾನಿಕವಾಗಿದೆ. ಒಂದೇ ಚುನಾವಣೆ ಹೇಗೆ ಸಾಧ್ಯ? ಕೆಲವೊಂದು ರಾಜ್ಯದಲ್ಲಿ ರಾಜ್ಯಪಾಲರ ಆಡಳಿತ ಇರುತ್ತದೆ. ಕೆಲವು ಕಡೆ ಅರ್ಧ ಸರ್ಕಾರ ನಡೆದಿರುತ್ತದೆ. ಇದು ಆಗದ ಕ್ರಮ ಎಂದರು.

ಕರ್ನಾಟಕದ ಚುನಾವಣೆ ಫಲಿತಾಂಶದಿಂದ ಅವರು ಧೃತಿಗೆಟ್ಟಿದ್ದಾರೆ. ಮೋದಿ ಪ್ರಚಾರ ಮಾಡಿದ ಕಡೆ ಕಾಂಗ್ರೆಸ್ ಗೆದ್ದಿದೆ. ಅವರು ಬಂದು ಗಲ್ಲಿಗಲ್ಲಿಯಲ್ಲಿ ಪ್ರಚಾರ ಮಾಡಿದರೂ ನಮಗೆ 135 ಸ್ಥಾನ ಬಂದಿದೆ‌. ಇದೇ ಒತ್ತಡದಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಎಂದು ಹೇಳುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ರಾಜ್ಯದಲ್ಲಿ ಬರ ಘೋಷಣೆ ವಿಚಾರಕ್ಕೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಮುಂದಿನ ಕ್ಯಾಬಿನೆಟ್‌ ನಲ್ಲಿ ಬರದ ಘೋಷಣೆ ಮಾಡುತ್ತೇವೆ. ಸದ್ಯಕ್ಕೆ 61 ತಾಲ್ಲೂಕುಗಳು ಪಟ್ಟಿಯಾಗಿದೆ. ಇನ್ನೂ 136 ತಾಲ್ಲೂಕುಗಳ ಬರ ಅಧ್ಯಯನ ನಡೆಯುತ್ತಿದೆ. ಅದರ ವರದಿಯೂ ಸೇರಿಸಿ ತೀರ್ಮಾನ ಮಾಡುತ್ತೇವೆ ಎಂದರು.

Advertisement

ಮಹಿಷ ದಸರಾ ಆಚರಣೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ನಾನು ಪ್ರತಾಪ್ ಸಿಂಹರಂತವರ ಮಾತಿಗೆ ಉತ್ತರ ಕೊಡಲ್ಲ. ನನಗೆ ಅಂತಹ ಪ್ರಶ್ನೆಗಳನ್ನ ಕೇಳಬೇಡಿ ಎಂದರು.

ತಮಿಳುನಾಡಿಗೆ ನೀರು ಬಿಡುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ನಾವು ಖುಷಿಯಿಂದ ನೀರು ಬಿಡುತ್ತಿಲ್ಲ. ಪ್ರಾಧಿಕಾರದ ಆದೇಶವಿರುವ ಕಾರಣ ಅನಿವಾರ್ಯವಾಗಿ ನೀರು ಬಿಡುತ್ತಿದ್ದೇವೆ. ತಮಿಳುನಾಡು ವಿನಾಕಾರಣ ಕ್ಯಾತೆ ತೆಗೆದಿದೆ. 21 ನೇ ತಾರೀಖು ಕೋರ್ಟ್‌ನಲ್ಲಿ ಮತ್ತೆ ನಮ್ಮ ಸಂಕಷ್ಟ ವಿವರಿಸುತ್ತೇವೆ. ಬಿಜೆಪಿ ಇದರಲ್ಲಿ ರಾಜಕಾರಣ ಮಾಡಲ್ಲ ಅಂತ ಹೇಳಿ ಈಗ ರಾಜಕಾರಣ ಮಾಡಲು ಹೊರಟಿದ್ದಾರೆ. ಪ್ರಧಾನಿ ಬಳಿಗೆ ನಿಯೋಗ ಹೋಗಲು ಸಿದ್ದವಾಗಿದ್ದೆವೆ. ನಮಗೂ ಪ್ರಧಾನಿ ಭೇಟಿಗೆ ದಿನಾಂಕ ಸಿಗುತ್ತಿಲ್ಲ. ಬಿಜೆಪಿಯವರಾದರೂ ಹೋಗಿ ಕೇಳಲಿ ಅಂದರೆ ಅವರೂ ಕೇಳುತ್ತಿಲ್ಲ. ಇಲ್ಲಿ ಕುಳಿತು ಹೋರಾಟದ ಕತೆ ಹೇಳುತ್ತಿದ್ದಾರೆ‌ ನಾವು ರೈತರ ರಕ್ಷಣೆಗೆ ಈಗಲೂ ಬದ್ಧ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next