Advertisement
ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟವಾದ ಬಳಿಕ ಮೈತ್ರಿ ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದರು. ಅದಕ್ಕೆ ಪೂರಕವೆಂಬಂತೆ ಕಾಂಗ್ರೆಸ್- ಜೆಡಿಎಸ್ ನಾಯಕರು ಭಿನ್ನ ರಾಗ ಹಾಡುತ್ತಿದ್ದಾರೆ. ಇದನ್ನೇ ಪ್ರಧಾನವಾಗಿಟ್ಟುಕೊಂಡು ಉಭಯ ಪಕ್ಷಗಳ ನಾಯಕರಲ್ಲೇ ಮೈತ್ರಿ ಬಗ್ಗೆ ವಿಶ್ವಾಸವಿಲ್ಲ ಎಂದು ಜನರಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ನಡೆಸುವ ಮೂಲಕ ಪರಿಸ್ಥಿತಿಯ ಲಾಭ ಪಡೆಯಲು ಬಿಜೆಪಿ ಲೆಕ್ಕಾಚಾರ ನಡೆಸಿದೆ.
Related Articles
Advertisement
ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಖಚಿತ ಎಂದು ಹೇಳಿರುವುದು ಪಕ್ಷಗಳಿಗೆ ಮತ್ತಷ್ಟು ಇರುಸು ಮುರುಸು ಉಂಟು ಮಾಡಿದೆ. ಈ ಎಲ್ಲ ಬೆಳವಣಿಗೆಗಳಿಂದ ಅನಿವಾರ್ಯವಾಗಿ ಹಿರಿಯ ನಾಯಕರು ಸಹ ಕೆಲವೆಡೆ ಲೋಪಗಳಾಗಿವೆ, ನಿರೀಕ್ಷಿತ ಪ್ರಮಾಣದಲ್ಲಿ ಕಾಂಗ್ರೆಸ್, ಜೆಡಿಎಸ್ ಮತಗಳು ಮೈತ್ರಿ ಅಭ್ಯರ್ಥಿಗಳಿಗೆ ವರ್ಗಾವಣೆಯಾಗಿಲ್ಲ, ಉಭಯ ಪಕ್ಷಗಳ ಮುಖಂಡರು, ಕಾರ್ಯಕರ್ತರ ನಡುವೆ ಒಮ್ಮತ ಮೂಡಿಲ್ಲ ಎಂಬುದನ್ನು ಪರೋಕ್ಷವಾಗಿ ಹೇಳಲಾರಂಭಿಸಿದರು. ಇದು ಸಹಜವಾಗಿ ಮೈತ್ರಿ ಧರ್ಮ ಪಾಲನೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನೆ ಮಾಡುವಂತಿತ್ತು.
ಬಿಜೆಪಿಗೆ ವರದಾನ: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಅಭ್ಯರ್ಥಿಗಳು ಸೇರಿದಂತೆ ರಾಜ್ಯ ಬಿಜೆಪಿ ನಾಯಕರು ಮತ ಯಾಚಿಸಿದ್ದರು. ಇದೀಗ ವಿಧಾನಸಭೆಗೆ ಉಪಚುನಾವಣೆ ಎದುರಾಗಿರುವುದರಿಂದ ಇತ್ತೀಚಿನ ಬೆಳವಣಿಗೆಗಳನ್ನೇ ಚುನಾವಣಾ ವಿಚಾರವಾಗಿಟ್ಟುಕೊಂಡು ಪ್ರಚಾರ ನಡೆಸಲು ಮುಂದಾಗಿದ್ದಾರೆ. ಮೈತ್ರಿ ಸರ್ಕಾರದ ಬಗ್ಗೆ ಉಭಯ ಪಕ್ಷಗಳ ನಾಯಕರಿಗೇ ವಿಶ್ವಾಸವಿದ್ದಂತಿಲ್ಲ ಎಂಬ ಅಂಶವನ್ನೇ ಪ್ರಧಾನವಾಗಿ ಪ್ರಸ್ತಾಪಿಸಿ ಮತದಾರರನ್ನು ಸೆಳೆಯಲು ಬಿಜೆಪಿ ಸಜ್ಜಾಗಿದೆ.
ಇಂದಿನಿಂದ ಭರ್ಜರಿ ಪ್ರಚಾರ: ಲೋಕಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರಚಾರ ನಡೆಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಭಾನುವಾರ ಕುಂದಗೋಳದಲ್ಲಿ ಬೂತ್ ಕಾರ್ಯಕರ್ತರ ಬೃಹತ್ ಸಮಾವೇಶ ನಡೆಸುವ ಮೂಲಕ ಉಪಚುನಾವಣೆಗೆ ರಣಕಹಳೆ ಮೊಳಗಿಸಲಿದ್ದಾರೆ. ಸೋಮವಾರ ಚಿಂಚೋಳಿಯಲ್ಲೂ ಬೂತ್ ಮಟ್ಟದ ಕಾರ್ಯಕರ್ತರ ಸಮಾವೇಶ ನಡೆಸಿ ಕಾರ್ಯಕರ್ತರನ್ನು ಹುರಿದುಂಬಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಪ್ರಧಾನಿ ಮೋದಿ ಅಲೆ ಹಿನ್ನೆಲೆಯಲ್ಲಿ ಈ ಬಾರಿ ರಾಜ್ಯದಲ್ಲಿ 20ಕ್ಕೂ ಹೆಚ್ಚು ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆಲ್ಲುವ ವಿಶ್ವಾಸವಿದೆ. ರಾಜ್ಯದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿಗೆ ಜನ ಬೆಂಬಲವಿರಲಿ, ಆಯಾ ಪಕ್ಷಗಳ ಬಹುಪಾಲು ನಾಯಕರು, ಮುಖಂಡರಲ್ಲೇ ಒಮ್ಮತವಿಲ್ಲ. ಇನ್ನು ಬಹಳಷ್ಟು ಕಡೆ ಕಾರ್ಯಕರ್ತರು ಸಹ ಮೈತ್ರಿಗೆ ಸಹಮತ ವ್ಯಕ್ತಪಡಿಸಿಲ್ಲ. ಕಾಂಗ್ರೆಸ್, ಜೆಡಿಎಸ್ ನಾಯಕರು ವೈರುಧ್ಯದ ಹೇಳಿಕೆ ನೀಡುತ್ತಿದ್ದು, ಮೈತ್ರಿ ಬಗ್ಗೆ ವಿಶ್ವಾಸಾರ್ಹತೆ ಇಲ್ಲದಿರುವುದು ಸಾಬೀತಾಗಿದೆ. ಇದು ಸಹಜವಾಗಿಯೇ ಉಪಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗಲಿದ್ದು, ಎರಡೂ ಕ್ಷೇತ್ರ ಗೆಲ್ಲುವ ವಿಶ್ವಾಸವಿದೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ತಿಳಿಸಿದರು.
ಭಿನ್ನ ರಾಜಕೀಯ ವಿಚಾರ ಹೊಂದಿರುವ ಕಾಂಗ್ರೆಸ್, ಜೆಡಿಎಸ್‌ನವರು ರಾಷ್ಟ್ರೀಯತೆ ವಿಚಾರ ಬಂದಾಗ ಬಿಜೆಪಿ ಬೆಂಬಲಿಸುತ್ತಾರೆ. ಅದಕ್ಕೆ ಪೂರಕ ಎಂಬಂತೆ ಮೈತ್ರಿ ಪಕ್ಷಗಳ ನಾಯಕರು ಹೇಳಿಕೆ ನೀಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ನಾಯಕರ ಹೇಳಿಕೆಯನ್ನು ಜನ ಗಮನಿಸುತ್ತಿದ್ದು, ಉಪಚುನಾವಣೆಯಲ್ಲಿ ಮತದಾರರು ಮೈತ್ರಿ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ.-ಸಿ.ಟಿ.ರವಿ, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ. * ಎಂ. ಕೀರ್ತಿಪ್ರಸಾದ್