ವಾಷಿಂಗ್ಟನ್: ಜಗತ್ತಿನಲ್ಲಿ ಈಗ ವ್ಯಾಪಕವಾಗಿ ಹಬ್ಬುತ್ತಿರುವುದು ಆರಂಭದಲ್ಲಿ ಹಬ್ಬಿದ ಕೋವಿಡ್ ಸೋಂಕಲ್ಲ; ಬದಲಾಗಿ ಈಗ ಹೆಚ್ಚು ತೀವ್ರತೆಯ, ಸಾಂಕ್ರಾಮಿಕವಾದ ಕೋವಿಡ್‌ನ ರೂಪಾಂತರಿತ ತಳಿಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.
ಸೆಲ್ ಹೆಸರಿನ ನಿಯತಕಾಲಿಕೆಯಲ್ಲಿ ಕೋವಿಡ್‌ನ ತಳಿಯ ಬಗ್ಗೆ ಬರೆಯಲಾಗಿದೆ. ಇದಕ್ಕೆ ಡಿ614ಜಿ ಎಂದು ಹೆಸರಿಡಲಾಗಿದ್ದು, ಲ್ಯಾಬೊರೇಟರಿ ಸ್ಥಿತಿಯಲ್ಲಿ ಹೆಚ್ಚು ಸಾಂಕ್ರಾಮಿಕವಾಗಿದ್ದುದು ಕಂಡು ಬಂದಿದೆ. ಕೋವಿಡ್ ತಳಿ ಡಿ614ಜಿ ಕಳೆದ ಎಪ್ರಿಲ್‌ನಲ್ಲಿಯೇ ಸಂಶೋಧಕರ ಗಮನಕ್ಕೆ ಬಂದಿದ್ದು, ಇದು ಪುನರಾವರ್ತಿತ ಮಾದರಿಯಾಗಿದೆ ಎಂದು ಹೇಳಲಾಗಿದೆ. ಅಮೆರಿಕದ ಲಾಸ್ ಆಲ್ಮೋಸ ನ್ಯಾಷನಲ್ ಲ್ಯಾಬೋರೇಟರಿಯಲ್ಲಿ ಈ ಬಗ್ಗೆ ಸಂಶೋಧನೆ ನಡೆಸಲಾಗಿದೆ. ಆರಂಭದಲ್ಲಿ ಕೋವಿಡ್‌ನ ಸಾಂಪ್ರದಾಯಿಕ ತಳಿ ಹಬ್ಬಲು ಶುರುಮಾಡಿತ್ತು, ಡಿ614ಜಿ ಹಬ್ಬಲು ಶುರುಮಾಡಿದ ಬಳಿಕ ಅದೇ ವ್ಯಾಪಕವಾಗಿ ಹಬ್ಬಿತು ಎಂದು ಸಂಶೋಧಕರು ಹೇಳಿದ್ದಾರೆ. ಇದೂ ಕೂಡ ಸಣ್ಣದಾಗಿದ್ದು, ಮಾನವ ಕೋಶಕ್ಕೆ ಸೇರಿದ ಕೂಡಲೇ ಇದರ ಪ್ರೊಟೀನ್‌ಗಳು ಚಾಚಿಕೊಂಡು ದ್ವಿಗುಣಗೊಳ್ಳಲು ಆರಂಭವಾಗುತ್ತದೆ ಎಂದು ಹೇಳಲಾಗಿದೆ. ಡಿ614ಜಿ ಆರಂಭದಲ್ಲಿ ಹಳೆ ವೈರಸ್‌ನ್ನು ಮೀರಿಸುವಂತೆ ಹಬ್ಬಿತು. ಜಗತ್ತಿನ ಎಲ್ಲ ಕಡೆಗಳಲ್ಲಿ ಜನಸಂಖ್ಯೆಯ ಮೇಲೆ ಇದು ಪರಿಣಾಮ ಬೀರಿದ್ದು ಕಂಡುಬಂದಿದೆ.
ವಿಜ್ಞಾನಿಗಳ ಪ್ರಕಾರ, ಕೋವಿಡ್‌ನ ಹೊಸ ತಳಿ ಮಾನವ ದೇಹ ಹೊಕ್ಕಿದ ಬಳಿಕ ವ್ಯಾಪಕವಾಗಿ ವೃದ್ಧಿಯಾಗುತ್ತದೆ. ಅಲ್ಲದೇ ಇದು ಶ್ವಾಸಕೋಶವನ್ನು ಬಹುವಾಗಿ ಆಕ್ರಮಿಸುತ್ತದೆ. ದೇಹದ ಮೇಲ್ಭಾಗದಲ್ಲೇ ಹೆಚ್ಚು ವ್ಯಾಪಿಸುವುದರಿಂದ ಜನರಿಗೂ ಬಹುಬೇಗನೆ ಹರಡುತ್ತದೆ ಎಂದು ಅಂದಾಜಿಸಲಾಗಿದೆ. ಆದರೆ ಈ ಹಂತದಲ್ಲಿ ಡಿ614ಜಿ ಹೆಚ್ಚು ತೀವ್ರವಾದ ಕಾಯಿಲೆಗೆ ಕಾರಣವಾಗುತ್ತದೆ ಎಂದೆನಿಸುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಇದರೊಂದಿಗೆ ಕೋವಿಡ್ ಬೆಳವಣಿಗೆಯ ಹಂತಗಳ ಬಗ್ಗೆ ಹಲವು ದತ್ತಾಂಶಗಳನ್ನು ವಿಜ್ಞಾನಿಗಳು ಸಂಗ್ರಹಿಸಿದ್ದಾರೆ. ಜಗತ್ತಿನ ವಿವಿಧ ಪ್ರದೇಶಗಳಲ್ಲಿ, ಜನಸಮುದಾಯದಲ್ಲಿ ಹಬ್ಬಿದ ಸೋಂಕಿನ ಮಾದರಿ ಮತ್ತು ರೀತಿಯನ್ನು ಗಮನಿಸಿಕೊಂಡು ಬೆಳವಣಿಗೆಯಾದ್ದನ್ನು ತಿಳಿಯುವ ಪ್ರಯತ್ನ ಸಾಗಿದೆ. ಡಿ614ಜಿ ಕಂಡ ಬಳಿಕ ಅತಿ ತ್ವರಿತ ರೀತಿಯಲ್ಲಿ ಅದು ಸಮುದಾಯವನ್ನು ಆಕ್ರಮಿಸಿದ್ದು, ಜಗತ್ತಿನ ಪ್ರತಿ ಪ್ರದೇಶದಲ್ಲೂ ಹೀಗೇ ನಡೆದಿರುವುದು ಪತ್ತೆಯಾಗಿದೆ. ರಾಷ್ಟ್ರ, ಉಪರಾಷ್ಟ್ರ, ನಗರಗಳಲ್ಲೂ ಇದರ ಹಬ್ಬುವಿಕೆ ಪ್ರಮಾಣ ಮತ್ತು ರೀತಿ ಸಾಮಾನ್ಯವಾಗಿದೆ.
ಜಗತ್ತಿನಲ್ಲಿ ಕೋವಿಡ್ ಹೇಗೆ ಹರಡಿತು ಎಂಬುದನ್ನು ತಿಳಿಯಲು ಈಗ ಹಲವು ಅನುಕ್ರಮಣಿಕೆಗಳು ಸಿದ್ಧವಿವೆ. ಅಲ್ಲದೇ ಯಾವ ಮಾದರಿಯ ವೈರಸ್ ತೀವ್ರವಾಗಿ ಹಬ್ಬಿತು ಎಂಬುದನ್ನೂ ತಿಳಿಯಬಹುದು.