Advertisement

ಜಿಲ್ಲೆಯ ಪರಿವರ್ತನೆ ಪ್ರತಿಯೊಬ್ಬ ಅಧಿಕಾರಿ ಕರ್ತವ್ಯ

10:00 PM Nov 04, 2019 | Lakshmi GovindaRaju |

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯನ್ನು ಅಭಿವೃದ್ಧಿ ಹೊಂದಿದ ಜಿಲ್ಲೆಯಾಗಿ ಪರಿವರ್ತಿಸುವುದು ಪ್ರತಿಯೊಬ್ಬ ಅಧಿಕಾರಿಯ ಕರ್ತವ್ಯ. ಇದನ್ನು ಸಾಧಿಸಲು ಸಂಕಲ್ಪದಿಂದ ಎಲ್ಲರೂ ಶ್ರಮಿಸಬೇಕಿದೆ ಎಂದು ಪ್ರಾಥಮಿಕ, ಪ್ರೌಢ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ‌ ಎಸ್‌. ಸುರೇಶ್‌ ಕುಮಾರ್‌ ಹೇಳಿದರು.

Advertisement

ನಗರದ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅವರು ಮಾತನಾಡಿದರು. ಸಭೆಯ ಆರಂಭದಲ್ಲಿ ಕಳೆದ ಕೆ.ಡಿ.ಪಿ ಸಭೆಯ ಅನುಪಾಲನಾ ವರದಿಯನ್ನು ಪರಿಶೀಲಿಸಿದ ಸಚಿವರು, ಪ್ರತಿಯೊಂದು ಇಲಾಖೆಯ ಕೆಲಸ ಕಾರ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು.

ಸಂತ್ರಸ್ತರಿಗೆ ಪ್ರಾಥಮಿಕ ಹಂತದ ಪರಿಹಾರ: ಜಿಲ್ಲೆಯಲ್ಲಿ ಕೈಗೊಂಡಿರುವ ಪ್ರವಾಹ ಪರಿಹಾರ ಕಾರ್ಯಗಳ ಬಗ್ಗೆ ಸಚಿವರಿಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ನೆರೆ ಸಂತ್ರಸ್ತರಿಗೆ ಪರಿಹಾರವನ್ನು ನೀಡಲಾಗಿದೆ. ಪೂರ್ಣ ಪ್ರಮಾಣದಲ್ಲಿ ಮನೆ ಕಳೆದುಕೊಂಡವರು, ಅಲ್ಪ ಪ್ರಮಾಣದ ಹಾನಿಗೊಳಗಾದವರು, ಪರಿಕರ ಮತ್ತು ಗುಡಿಸಲು ಹಾನಿ ಸಂಬಂಧ ಪ್ರಾಥಮಿಕ ಹಂತದ ಪರಿಹಾರವನ್ನು ಒದಗಿಸಲಾಗಿದೆ ಎಂದು ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು, ಬೆಳೆ ಹಾನಿ ಸಂಬಂಧ ನೀಡಬೇಕಿರುವ ಪರಿಹಾರವನ್ನು ಸರ್ಕಾರದಿಂದ ನೀಡುವ ಕುರಿತು ಕ್ರಮ ವಹಿಸುವುದಾಗಿ ತಿಳಿಸಿದರು.

ಮಾದರಿ ಆಟದ ಮೈದಾನ ನಿರ್ಮಿಸಿ: ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಳ್ಳಲಾಗಿರುವ ವಿವಿಧ ಕಾರ್ಯಕ್ರಮಗಳ ವಿವರ ಪಡೆದ ಸಚಿವರು, ಈಗ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಜತೆಗೆ ನರೇಗಾ ಯೋಜನೆಯಡಿ ಪ್ರತಿ ಶಾಲೆಯಲ್ಲೂ ಸುವ್ಯವಸ್ಥಿತ ಶೌಚಾಲಯ ನಿರ್ಮಿಸಬೇಕು. ಅಲ್ಲದೆ, ಮಾರ್ಚ್‌ 2020ರೊಳಗೆ ಪ್ರತಿ ತಾಲೂಕಿಗೆ ಒಂದು ಮಾದರಿ ಆಟದ ಮೈದಾನಗಳನ್ನು ನಿರ್ಮಿಸಬೇಕು ಎಂದು ಜಿಲ್ಲಾ ಪಂಚಾಯ್ತಿ ಸಿಇಒಗೆ ಸೂಚನೆ ನೀಡಿದರು.

ಶಿಕ್ಷಣ ಮತ್ತು ಆರೋಗ್ಯ ಮನುಷ್ಯನಿಗೆ ಅವಶ್ಯವಿದೆ. ಹೀಗಾಗಿ ಜಿಲ್ಲೆಯಲ್ಲಿ ಸಾಕ್ಷರತಾ ಪ್ರಮಾಣವನ್ನು ಹೆಚ್ಚಿಸುವಲ್ಲಿ ವಿನೂತನ ಕಾರ್ಯ ಯೋಜನೆಗಳನ್ನು ಜಾರಿಗೆ ತರಬೇಕು. ಆಯುಷ್ಮಾನ್‌ ಭಾರತ್‌ ಆರೋಗ್ಯ ಕರ್ನಾಟಕ ಯೋಜನೆಯಡಿ ಆರೋಗ್ಯ ಕಾರ್ಡ್‌ಗಳ ವಿತರಣೆ ನಿಧಾನಗತಿಯಲ್ಲಿ ಸಾಗುತ್ತಿದ್ದು, 8 ತಿಂಗಳೊಳಗೆ ಪ್ರತಿಯೊಬ್ಬ ವ್ಯಕ್ತಿಯು ಜಿಲ್ಲೆಯಲ್ಲಿ ಆರೋಗ್ಯ ಕಾರ್ಡ್‌ ಹೊಂದುವಂತಾಗಬೇಕು ಎಂದು ನಿರ್ದೇಶನ ನೀಡಿದರು.

Advertisement

ಶೀಘ್ರ ಕಾಮಗಾರಿ ಪೂರ್ಣಗೊಳಿಸಿ: ಜಿಲ್ಲೆಯಲ್ಲಿ ಅಪೂರ್ಣವಾಗಿರುವ ನಿರ್ಮಾಣ ಕಾಮಗಾರಿಗಳ ವಿವರ ಮತ್ತು ಅದು ಪೂರ್ಣಗೊಳ್ಳುವ ಅವಧಿಯನ್ನು ವರದಿ ಸಲ್ಲಿಸುವಂತೆ ತಿಳಿಸಿದ ಎಸ್‌. ಸುರೇಶ್‌ ಕುಮಾರ್‌, ಬಿಳಿಗಿರಿರಂಗ ದೇವಸ್ಥಾನದ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ರಾಷ್ಟ್ರೀಯ ಹೆದ್ದಾರಿಗಳಲ್ಲಿ ಕಳೆ ಗಿಡಗಳು ವ್ಯಾಪಕವಾಗಿ ಬೆಳೆದು ಸಂಚಾರಕ್ಕೆ ತೊದರೆಯಾಗುತ್ತಿದ್ದು, ಇದನ್ನು ಶೀಘ್ರವೇ ತೆರವುಗೊಳಿಸಬೇಕು. ಜತೆಗೆ ರಸ್ತೆ ನಿರ್ಮಾಣದ ನಂತರ, ರಸ್ತೆ ಬದಿಯಲ್ಲಿ ಉಪಯುಕ್ತ ಸಸಿಗಳನ್ನು ನೆಡುವ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.

ವಸತಿ ನಿಲಯದಲ್ಲಿ ಡಿಜಿಟಲ್‌ ಲೈಬ್ರರಿ ತೆರೆಯಿರಿ: ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ ನೀಡಲಾಗುವ ವಿದ್ಯಾರ್ಥಿ ವೇತನ ಹಾಗೂ ವಸತಿ ನಿಲಯಗಳ ಬಗ್ಗೆ ಮಾಹಿತಿ ಪಡೆದ ಅವರು, ವಸತಿ ನಿಲಯಗಳಲ್ಲಿ ಪಠ್ಯದ ಜತೆಗೆ ಮಕ್ಕಳಲ್ಲಿ ಉನ್ನತ ಶಿಕ್ಷಣ ಹಾಗೂ ಉದ್ಯೋಗ ಕೈಗೊಳ್ಳಲು ಪ್ರೇರಣೆ ನೀಡುವಂತ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು. ಎಲ್ಲಾ ನಿಲಯಗಳಲ್ಲೂ ಡಿಜಿಟಲ್‌ ಲೈಬ್ರರಿ ತೆರೆಯಬೇಕು ಎಂದು ಸೂಚನೆ ನೀಡಿದರು.

ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮ: ಹಾಲು ಸಂಸ್ಕರಣಾ ಘಟಕದ ಉದ್ಘಾಟನೆಯನ್ನು ಶೀಘ್ರವೇ ನೆರವೇರಿಸಲಾಗುವುದು. ಕೊಳ್ಳೇಗಾಲ ಹಾಗೂ ಹನೂರು ತಾಲೂಕಿನ ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ತಿಳಿದುಕೊಳ್ಳಲು ಖುದ್ದು ಪರಿಶೀಲನೆ ನಡೆಸಲಾಗುವುದು. ಅಲ್ಲದೆ, ಕೆಎಸ್‌ಆರ್‌ಟಿಸಿ ಹಾಗೂ ಪಿಡಬ್ಲೂಡಿ ಸಿಬ್ಬಂದಿ ಸಮಸ್ಯೆಯನ್ನು ಪರಿಹರಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಇಲಾಖೆ ಮತ್ತು ನಿಗಮಗಳ ಜನ ಕಲ್ಯಾಣ ಯೋಜನೆಗಳ ಮಾಹಿತಿಯನ್ನು ಎಲ್ಲರಿಗೂ ತಲುಪುವಂತೆ ನೋಡಿಕೊಳ್ಳಬೇಕು. ಯೋಜನೆಗಳು ಸಾಮಾನ್ಯರಿಗೆ ಮುಟ್ಟಿಸುವತ್ತ ಗಮನ ಹರಿಸಬೇಕು ಎಂದು ತಿಳಿಸಿದರು.

ಸಭೆಯಲ್ಲಿ ವಿಸ್ತೃತವಾಗಿ ವಿವಿಧ ಇಲಾಖೆಗಳ ಪ್ರಗತಿ ಪರಾಮರ್ಶೆ ನಡೆಸಲಾಯಿತು. ಶಾಸಕರಾದ ಸಿ. ಪುಟ್ಟರಂಗಶೆಟ್ಟಿ, ಎನ್‌.ಮಹೇಶ್‌, ಆರ್‌.ನರೇಂದ್ರ, ನಿರಂಜನ್‌ ಕುಮಾರ್‌ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯ ಸಮಸ್ಯೆಗಳು ಹಾಗೂ ಇತರೆ ಅಭಿವೃದ್ಧಿ ಸಂಬಂಧ ಆಗಬೇಕಿರುವ ಕೆಲಸಗಳ ಕುರಿತು ಗಮನ ಸೆಳೆದರು. ಈ ವೇಳೆ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಶಿವಮ್ಮ, ಉಪಾಧ್ಯಕ್ಷ ಕೆ.ಎಸ್‌. ಮಹೇಶ್‌, ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದ್‌ ಕುಮಾರ್‌, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಎಚ್‌. ನಾರಾಯಣ ರಾವ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಸಭೆಯ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಪಂಚಾಯ್ತಿ ಸಭಾಂಗಣದ ಬಳಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಸಭಾಂಗಣ ಉದ್ಘಾಟಿಸಿದರು. ತದನಂತರ ಜಿಲ್ಲಾ ಪಂಚಾಯ್ತಿ ಸದಸ್ಯರೊಂದಿಗೆ ಸಮಾಲೋಚನಾ ಸಭೆ ನಡೆಸಿದರು.

ಜಿಲ್ಲೆಯ ಅಭಿವೃದ್ಧಿಗೆಂದು ಹಮ್ಮಿಕೊಳ್ಳುವ ಕಾರ್ಯಗಳನ್ನು ತಪ್ಪದೇ ಗಮನಿಸಬೇಕು. ಯೋಜನೆ ಸಂಪೂರ್ಣಗೊಳ್ಳುವವರೆಗೂ ಅದಕ್ಕಾಗಿ ಶ್ರಮಿಸಬೇಕು. ಪ್ರತಿಯೊಬ್ಬ ಅಧಿಕಾರಿಯೂ ಆತ್ಮಸಾಕ್ಷಿಯಿಂದ ಕೆಲಸ ನಿರ್ವಹಿಸಿದಲ್ಲಿ ಜಿಲ್ಲೆಯ ಎಲ್ಲಾ ರೀತಿಯಲ್ಲೂ ಬೆಳವಣಿಗೆ ಹೊಂದಲಿದೆ.
– ಶ್ರೀನಿವಾಸಪ್ರಸಾದ್‌, ಸಂಸದ

Advertisement

Udayavani is now on Telegram. Click here to join our channel and stay updated with the latest news.

Next