ಧಾರವಾಡ: ಮನೆ ಹುಡುಕಿಕೊಂಡು ಅಮಾಯಕರ ಮೇಲೆ ಪ್ರಕರಣ ದಾಖಲಿಸಿರುವ ಉದಾಹರಣೆಗಳು ಇರುವಾಗ ಹುಬ್ಬಳ್ಳಿಯಲ್ಲಿ ಪೊಲೀಸ್ ಠಾಣೆ ಮೇಲೆ ನಡೆದ ಗಲಭೆ ಪ್ರಕರಣ ವಾಪಸ್ ಪಡೆದಿರುವುದು ಸರ್ಕಾರದ ಸರಿಯಾದ ನಿರ್ಧಾರವೇ ಆಗಿದ್ದು, ಬಿಜೆಪಿ ಪ್ರತಿಭಟನೆ ಮಾಡಿಕೊಳ್ಳಲಿ ಅಥವಾ ಕೋರ್ಟ್‌ಗೆ ಹೋಗಲಿ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ ಗಲಭೆ ಇರಲಿ, ಮುಡಾ ಪ್ರಕರಣವೇ ಇರಲಿ. ಇದರಲ್ಲಿ ಯಾವ ಪಕ್ಷ ಎನ್ನುವುದು ಮುಖ್ಯವಲ್ಲ, ಕಾನೂನಿನಲ್ಲಿ ಎಲ್ಲರಿಗೂ ಅವಕಾಶ ಪಡೆಯುವ ಹಕ್ಕಿದೆ. ಹೀಗಾಗಿ ಅದಕ್ಕೆ ಅವಕಾಶ ಕೊಡಬೇಕು. ಕಾನೂನಿನಲ್ಲಿ ಅವಕಾಶ ಇರುವ ಕಾರಣದಿಂದಲೇ ಹುಬ್ಬಳ್ಳಿ ಗಲಭೆ ಪ್ರಕರಣ ವಾಪಸ್ ಪಡೆದುಕೊಳ್ಳಲಾಗಿದೆ. ಇದು ತಪ್ಪು ಎನ್ನಲಾಗದು ಎಂದರು.
ಬಿಜೆಪಿ ಮೇಲೆ ಶೇ.29ರಷ್ಟು ಪ್ರಕರಣ
ಮುಡಾ ವಿಚಾರದಲ್ಲಿ ಬಿಜೆಪಿ ನಾಯಕರು ಪಾದಯಾತ್ರೆ ಮಾಡಿದರು. ಇದೇ ಬಿಜೆಪಿಯವರ ಮೇಲೆ ಎಷ್ಟು ಎಫ್‌ಐಆರ್ ಇದೇ ನೋಡಿಕೊಳ್ಳಲಿ. ಕೇಂದ್ರ ಸಚಿವರಗಳ ಮೇಲೆ ಶೇ.೩೯ ರಷ್ಟು ಪ್ರಕರಣಗಳಿದ್ದು, ಅವರನ್ನು ಒಳಗಡೆ ಹಾಕಬೇಕಿತ್ತು. ಅವರಿಂದ ರಾಜೀನಾಮೆ ಕೇಳಬೇಕಿತ್ತು. ಯಾರು ಮುಡಾ ವಿಚಾರವಾಗಿ ಪಾದಯಾತ್ರೆ ಮಾಡಿದರೋ ಅವರು ತಮ್ಮ ಚುನಾವಣೆಯಲ್ಲಿ ಸಲ್ಲಿಸಿರುವ ಅಫಿಡೇವಿಟ್ ತೆರೆದು ನೋಡಿಕೊಳ್ಳಲಿ ಎಂದರು.
ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿರುವ ಮಲ್ಲಿಕಾರ್ಜುನ ಖರ್ಗೆ ಕುಟುಂಬದವರು ನಿವೇಶನ ವಾಪಸ್ಸು ಕೊಟ್ಟಿದ್ದು, ಅದು ಅವರ ದೊಡ್ಡ ಗುಣ. ಇದಕ್ಕೆ ಖುಷಿ ಆಗಬೇಕು ಹೊರತು ರಾಜೀನಾಮೆ ಕೇಳುವುದು ಎಷ್ಟು ಸರಿ. ಪ್ರೇರಣಾ ಟ್ರಸ್ಟ್ ಗೆ ದುಡ್ಡು ಬಂದ ಮೇಲೆಯೇ ಯಡಿಯೂರಪ್ಪ ಆವರನ್ನು ಸಿಎಂ ಮಾಡಿದ್ದರು. ಯಾಕೆ ಮಾಡಿದ್ದು ಅಂದರೆ ಅವರ ಬಳಿ ವಾಶಿಂಗ್ ಮಶಿನ್ ಇದೆ. ಅದರಲ್ಲಿ ಹಾಕಿದ ತಕ್ಷಣ ಎಲ್ಲರೂ ಬೆಳ್ಳಗೆ ಆಗುತ್ತಾರೆ ಎಂದು ಲೇವಡಿ ಮಾಡಿದರು.
ಅತಿಥಿ ಶಿಕ್ಷಕರು ಹಾಗೂ ಅಡುವೆ ಸಹಾಯಕರ ವೇತನ ಹೆಚ್ಚಳ ಮಾಡಬೇಕಿದ್ದು, ಈ ಬಗ್ಗೆ ಸಿಎಂ ಅವರೊಂದಿಗೆ ಮಾತನಾಡಿದ್ದೇನೆ. ಶಿಕ್ಷಕರು ಶ್ರಮಪಟ್ಟು, ಕೆಲಸ ಮಾಡುತ್ತಾರೆ. ಅವರ ವೇತನ ಹೆಚ್ಚಳ ಮಾಡಲು ಕ್ರಮ ಕೈಗೊಳ್ಳುತ್ತೇವೆ ಎಂದರು.
ಇನ್ನು ಮುಂಬರುವ ಉಪಚುನಾವಣೆಯಲ್ಲಿ ಹೈಕಮಾಂಡ್ ಒಳ್ಳೆಯ ತೀರ್ಮಾನ ತೆಗೆದುಕೊಳ್ಳುತ್ತದೆ. ನಾವು ಹೋಗಿ ಚುನಾವಣೆಯಲ್ಲಿ ನಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸುತ್ತೇವೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು.