ಹೊಸದಿಲ್ಲಿ: ಸಾರ್ವತ್ರಿಕ ಚುನಾವಣೆ ಸಂದರ್ಭ ಬೇರೆ ಊರುಗಳಲ್ಲಿ ಉಳಿಯುವ ಮತದಾರರು ಮತ ಚಲಾಯಿಸಲಾಗದೆ ಬೇಸರಿಸುವ ಪ್ರಮೇಯ ಸದ್ಯದಲ್ಲೇ ದೂರವಾಗಲಿದೆ. ಇಂಥ ಮತದಾರರಿಗೆ ಅನುಕೂಲಕರವಾದ ಹೊಸ ತಂತ್ರಜ್ಞಾನವನ್ನು ಜಾರಿಗೊಳಿಸಲು ಕೇಂದ್ರ ಚುನಾವಣ ಆಯೋಗ ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ, ಮದ್ರಾಸ್ ಐಐಟಿ ತಜ್ಞರೊಂದಿಗೆ ಸಮಾಲೋಚಿಸಲಾಗಿದೆ ಎಂದು ಆಯೋಗದ ಹಿರಿಯ ಉಪ ಆಯುಕ್ತ ಸಂದೀಪ್ ಸಕ್ಸೇನಾ ತಿಳಿಸಿದ್ದಾರೆ.
ಏನಿದು ತಂತ್ರಜ್ಞಾನ?
“ಬ್ಲಾಕ್ ಚೈನ್’ ಎಂಬ ತಂತ್ರಜ್ಞಾನದ ಸಹಾಯದಿಂದ ಇ-ಮತದಾನದ ಹೊಸ ವ್ಯವಸ್ಥೆ ರೂಪಿಸಲಾಗುತ್ತದೆ. ಇದು “ದ್ವಿಮುಖ ವಿದ್ಯುನ್ಮಾನ ದೂರ ನಿಯಂತ್ರಣ ಮತದಾನ’ ವ್ಯವಸ್ಥೆ ಆಗಿರುತ್ತದೆ.
ಇದರಡಿ ದೃಢೀಕೃತ ಐಪಿ ವಿಳಾಸವಿರುವ ಕಂಪ್ಯೂಟರ್‌ಗಳ ಮೂಲಕ ಮತ ಚಲಾಯಿಸಬಹುದು. ಮತದಾನಕ್ಕೆ ಮುನ್ನ ಪ್ರತಿ ಮತದಾರನ ಬಯೋಮೆಟ್ರಿಕ್ ಮತ್ತು ವೆಬ್ ಕೆಮರಾ ಮೂಲಕ ಮುಖ ಗುರುತನ್ನು ತಾಳೆ ಹಾಕಲಾಗುವುದು. ಗುರುತು ದೃಢೀಕರಣವಾದ ಅನಂತರ ಮತದಾರರಿಗೆ ಕಂಪ್ಯೂಟರ್ ಪರದೆಯ ಮೇಲೆ ಇ-ಬ್ಯಾಲೆಟ್ ತೆರೆಯುತ್ತದೆ. ಅದರ ಮೂಲಕ ಮತದಾರರು ಮತ ಚಲಾಯಿಸಬಹುದು.
ಮತದಾನದ ಬಳಿಕ ಬ್ಲಾಕ್ ಚೈನ್ ಹ್ಯಾಶ್‌ಟ್ಯಾಗ್ ಪರದೆಯಲ್ಲಿ ಗೋಚರಿಸುತ್ತದೆ. ಇದರ ಪ್ರತಿಗಳು ಸ್ವಯಂಚಾಲಿತವಾಗಿ ಆತನ ಮತಕ್ಷೇತ್ರದಲ್ಲಿ ಚುನಾವಣ ಕರ್ತವ್ಯದಲ್ಲಿರುವ ಅಧಿಕಾರಿಗಳಿಗೆ, ಪಕ್ಷಗಳ ಪ್ರತಿನಿಧಿಗಳಿಗೆ, ಅಭ್ಯರ್ಥಿಗಳಿಗೆ ಅಂತರ್ಜಾಲದ ಮೂಲಕ ರವಾನೆಯಾಗುತ್ತವೆ. ಆ ಮೂಲಕ ಮತದಾರ ಬೇರೊಂದು ಸ್ಥಳದಿಂದ ಮತ ಚಲಾಯಿಸಿರುವುದನ್ನು ದೃಢಪಡಿಸಲಾಗುತ್ತದೆ ಎಂದಿದ್ದಾರೆ.
ಇ-ಮತ ಎಣಿಕೆ ಹೇಗೆ?
ಬೇರೆ ಊರುಗಳಿಂದ ಚಲಾವಣೆಯಾದ ಮತಗಳನ್ನು ಯಾರೂ ಪರಿಷ್ಕರಣೆಗೊಳಿಸದಂಥ ಡಿಜಿಟಲ್ ಕೋಡಿಂಗ್ ಮಾದರಿ(ಎನ್‌ಕ್ರಿಪ್ಶನ್ ಮಾದರಿ)ಯಲ್ಲಿ ಸರ್ವರ್‌ಗಳಲ್ಲಿ ಸಂಗ್ರಹಿಸಲಾಗುತ್ತದೆ. ಮತ ಎಣಿಕೆಗೆ ಕೆಲವು ತಾಸುಗಳ ಮುನ್ನ ಈ ಮತಗಳನ್ನು ಮತ್ತೂಮ್ಮೆ ಪರೀಕ್ಷಿಸಿ ಅವುಗಳು ಹ್ಯಾಕರ್‌ಗಳಿಂದ ಬದಲಾಯಿಸಲ್ಪಟ್ಟಿಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಎಣಿಕೆಗೆ ಪರಿಗಣಿಸಲಾಗುತ್ತದೆ.
ತಂತ್ರಜ್ಞಾನ ಯಾವಾಗ ಜಾರಿ?
ಯಾವುದೇ ಘಳಿಗೆಯಲ್ಲಿ, ಯಾವುದೇ ಸ್ಥಳದಲ್ಲಿ, ಯಾವುದೇ ದೃಢೀಕೃತ ಪರಿಕರಗಳ ಮೂಲಕ ಮತ ಚಲಾಯಿಸುವ ವ್ಯವಸ್ಥೆ ಇದು ಆಗಿರಲಿದೆ. ಇದನ್ನು ಲೋಪ ದೋಷಗಳಿಲ್ಲದಂತೆ ರೂಪುಗೊಳಿಸಬೇಕಿರುವುದರಿಂದ ಸಾಕಷ್ಟು ಸಮಯ ಬೇಕಿದೆ ಎಂದು ಸಕ್ಸೇನಾ ತಿಳಿಸಿದ್ದಾರೆ.