ದಾವಣಗೆರೆ: ಶೋಷಣೆ ರಹಿತ ಸಮಾಜ ನಿರ್ಮಾಣ ಮಾಡಬೇಕಾದರೆ ಶಿಕ್ಷಿತರಾಗಬೇಕು. ಆಗ ಮಾತ್ರ ಅನ್ಯಾಯ ತಡೆಗಟ್ಟಲು ಸಾಧ್ಯ. ಶೋಷಣೆ ವಿರುದ್ಧ ಹೋರಾಡಲು ಶಿಕ್ಷಣವೇ ಮೂಲ ಮಂತ್ರ ಎಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಪ್ರತಿಪಾದಿಸಿದರು.
ಹರಿಹರ ತಾಲೂಕಿನ ಸಾಲಕಟ್ಟೆ ಗ್ರಾಮದ ಚಂದ್ರಮ್ಮ, ನಾಗೇಂದ್ರಪ್ಪನವರ ತೋಟದ ಮನೆಯಲ್ಲಿನ ಶ್ರೀ ಹೂವಿನ ಕೊನೆ ಚೌಡೇಶ್ವರಿ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದಿಂದ ಶುಕ್ರವಾರ ಆಯೋಜಿಸಿರುವ ಮೂರು ದಿನಗಳ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕಾನೂನು ಮತ್ತು ಸಮುದಾಯದ ಅರಿವು ಮೂಡಿಸಲು ಶಿಕ್ಷಣ ಒಂದೇ ಮಾರ್ಗ ಎಂದರು. ಶೋಷಣೆ ಯಾವುದೇ ಒಂದು ವರ್ಗಕ್ಕೆ ಮಾತ್ರವೇ ಸೀಮಿತವಾಗಿಲ್ಲ. ಎಲ್ಲಾ ಕ್ಷೇತ್ರದಲ್ಲೂ ಇದೆ. ಆದರೆ, ಅದರ ವ್ಯಾಪಕತೆ ಮೌಡ್ಯತೆ, ಅಶಿಕ್ಷಿತರು ಇರುವ ಕಡೆ ಹೆಚ್ಚಾಗಿದೆ. ಕೇವಲ ಅಶಿಕ್ಷಿತರಲ್ಲಿ ಮಾತ್ರವಲ್ಲದೇ ಬುದ್ಧಿಜೀವಿಗಳಲ್ಲಿ ಮೌಡ್ಯತೆ ತಾಂಡವಾಡುತ್ತಿದೆ ಎಂದು ತಿಳಿಸಿದರು.
ಅಶಿಕ್ಷಿತರಷ್ಟೆ ಶೋಷಣೆಗೆ ಒಳಗಾಗುತ್ತಿಲ್ಲ. ಸಮಾಜದಲ್ಲಿ ಬಹಳ ಬುದ್ಧಿವಂತ ಶಿಕ್ಷಿತರು ಎಂದು ಗುರುತಿಸಿಕೊಂಡವರ ಮೇಲೂ ಶೋಷಣೆ ನಡೆಯುತ್ತಿದೆ. ಈ ಕುರಿತು ಅರಿವು ಮೂಡಿಸಲು ಇಂತಹ ಕಾರ್ಯಾಗಾರ ಅಗತ್ಯ ಎಂದು ತಿಳಿಸಿದರು. ಅಂಬೇಡ್ಕರ್ ಸಂವಿಧಾನದ ಆಶಯದಂತೆ ಸ್ವಾತಂತ್ರ ಮತ್ತು ಸಮಾನತೆ ಎಲ್ಲಾ ವರ್ಗದವರಿಗೆ ದೊರೆಯಬೇಕಿತ್ತು.
ಆದರೆ, ಸಂವಿಧಾನದ ಆಶಯ ಈವರೆಗೂ ಈಡೇರಿಲ್ಲ. ಯಾವತ್ತು ದೇಶದ ಜನತೆಗೆ ಸ್ವಾತಂತ್ರ ಮತ್ತು ಸಮಾನತೆ ದೊರೆಯುತ್ತದೆಯೋ ಸಂವಿಧಾನದ ಆಶಯಗಳು ಈಡೇರಿದಂತೆ ಆಗುತ್ತದೆ ಎಂದು ತಿಳಿಸಿದರು. ಸಿಪಿಐ ರಾಜ್ಯ ಕಾರ್ಯದರ್ಶಿ ಪಿ.ವಿ. ಲೋಕೇಶ್ ಮಾತನಾಡಿ, ಈ ದೇಶದ ಸಂಪತ್ತು ಸೃಷ್ಟಿ ಮಾಡುವ ದುಡಿಯುವ ವರ್ಗದ ಮೇಲೆ ನಿರಂತರ ಶೋಷಣೆ ನಡೆಯುತ್ತಾ ಬಂದಿದೆ.
ಶಿಸ್ತು ಕಾರ್ಮಿಕ ವರ್ಗದ ಗುರಿಯಾಗಬೇಕು. ಇಂದಿನ ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ, ಇಂದಿನ ರಾಜಕೀಯ ವ್ಯವಸ್ಥೆ ಬದಲಾವಣೆಗೆ ಕಾರ್ಮಿಕ ಶಕ್ತಿಯನ್ನು ತೋರಿಸಬೇಕಿದೆ ಎಂದು ಕರೆ ನೀಡಿದರು. ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ರಾಜ್ಯ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ ಅಧ್ಯಕ್ಷತೆ ವಹಿಸಿದ್ದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಬಾಸ್ಕರ್, ಕಟ್ಟಡ ಕಾರ್ಮಿಕ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ಶಿವಣ್ಣ, ಜಿಲ್ಲಾ ಅಧ್ಯಕ್ಷ ವಿ. ಲಕ್ಷಣ್, ಕಾರ್ಯಾಧ್ಯಕ್ಷ ಪಿ.ಕೆ. ಲಿಂಗರಾಜ್, ಪ್ರಧಾನ ಕಾರ್ಯದರ್ಶಿ ಆವರಗೆರೆ ಎಚ್.ಜಿ. ಉಮೇಶ್, ಪುಷ್ಪಾವತಿ, ಪಿ. ಷಣ್ಮುಖಸ್ವಾಮಿ, ಶಿವಕುಮಾರ್ ಡಿ. ಶೆಟ್ಟರ್, ಸುರೇಶ್ ಯರಗುಂಟೆ ಇತರರು ಇದ್ದರು.