Advertisement

ಟಿಕೆಟ್‌ ಸಿಗದಿದ್ದಕ್ಕೆ ನೋವಾಗಿದೆ: ಸುನೀಲ ವಲ್ಯಾಪುರೆ

11:21 PM Apr 27, 2019 | Lakshmi GovindaRaj |

ಕಲಬುರಗಿ: ಡಾ| ಉಮೇಶ ಜಾಧವ ಪುತ್ರನಿಗೆ ಟಿಕೆಟ್‌ ನೀಡಿರುವ ಪಕ್ಷದ ನಿರ್ಧಾರಕ್ಕೆ ತಾವು ಬದ್ಧರಾಗಿರುವುದಾಗಿ ಬಿಜೆಪಿಯಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಸುನೀಲ ವಲ್ಯಾಪುರೆ ತಿಳಿಸಿದ್ದಾರೆ.

Advertisement

ಚಿಂಚೋಳಿಯಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಹಾಗೂ ಬೆಂಬಲಿಗರೊಂದಿಗೆ ಶನಿವಾರ ಸುದೀರ್ಘ‌ ಸಮಾಲೋಚನೆ ನಡೆಸಿ, ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. “ಚಿಂಚೋಳಿ ಕ್ಷೇತ್ರದ ಟಿಕೆಟ್‌ ಸಿಗದಿದ್ದಕ್ಕೆ ನೋವಾಗಿದೆ.

ಆದರೆ, ಪಕ್ಷದ ಹಿತದೃಷ್ಟಿಯಿಂದ ಡಾ| ಅವಿನಾಶ ಜಾಧವ ಬೆಂಬಲಕ್ಕೆ ನಿಂತು ಚುನಾವಣೆಯಲ್ಲಿ ಅವರನ್ನು ಆರಿಸಿ ತರುತ್ತೇವೆ. 25 ವರ್ಷಗಳಿಂದ ಬಿಜೆಪಿಯಲ್ಲಿ ಸಾಮಾನ್ಯ ಕಾರ್ಯಕರ್ತನಾಗಿ, ಸ್ವಯಂ ಸೇವಕನಾಗಿ, ಎರಡು ಬಾರಿ ಶಾಸಕನಾಗಿ, ಒಮ್ಮೆ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ.

ಚಿಂಚೋಳಿಯಿಂದ ಶಾಸಕನಾಗಿ ಆಯ್ಕೆಯಾದ ಸಂದರ್ಭದಲ್ಲೇ ನಾನು ಬಿಜೆಪಿ ಸರ್ಕಾರದಲ್ಲಿ ಸಚಿವನಾಗಿದ್ದೆ. ಈ ಬಾರಿ ಚಿಂಚೋಳಿ ಉಪಚುನಾವಣೆಯ ಬಿಜೆಪಿ ಟಿಕೆಟ್‌ನ ಪ್ರಬಲ ಆಕಾಂಕ್ಷಿ ಆಗಿದ್ದೆ. ಆದರೆ, ರಾಜಕೀಯ ಸನ್ನಿವೇಶಗಳು ನನಗೆ ಎಲ್ಲವನ್ನೂ ಸಹಿಸುವಂತೆ ಮಾಡಿವೆ’ ಎಂದರು.

“ಕಳೆದ ವಿಧಾನಸಭೆ ಚುನಾವಣೆಯಲ್ಲಿ ಚಿಂಚೋಳಿಯಿಂದ ನನ್ನ ವಿರುದ್ಧ ಡಾ| ಉಮೇಶ ಜಾಧವ ಗೆಲುವು ಸಾಧಿಸಿದ್ದರು. ಈಗ ಅದೇ ಉಮೇಶ ಜಾಧವ ಅವರು ಕಲಬುರಗಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿದ್ದಾರೆ.

Advertisement

ಅವರು ತಮ್ಮ ಕಾಂಗ್ರೆಸ್‌ ಪಕ್ಷದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ ಜತೆ ಮಾತುಕತೆ ನಡೆಸಿ ತಮಗೆ ಲೋಕಸಭೆ ಮತ್ತು ಚಿಂಚೋಳಿ ವಿಧಾನಸಭೆ ಟಿಕೆಟ್‌ ಕೊಡಬೇಕೆಂದು ಕೇಳಿಕೊಂಡಿದ್ದರು. ಇದಕ್ಕೆ ಅಮಿತ್‌ ಶಾ ಒಪ್ಪಿದ್ದರಂತೆ. ಈ ವಿಷಯವನ್ನು ನನಗೆ ಬಿಜೆಪಿ ರಾಜಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಶುಕ್ರವಾರ ತಿಳಿಸಿದ್ದಾರೆ’ ಎಂದು ಹೇಳಿದರು.

“ಇನ್ನು ಕೆಲವು ಶಾಸಕರು ಬಿಜೆಪಿಗೆ ಬರುತ್ತಿದ್ದಾರೆ. ಒಂದು ವೇಳೆ ಜಾಧವಗೆ ಕೊಟ್ಟ ಮಾತಿನಂತೆ ನಡೆಯದಿದ್ದರೆ, ಬರಬೇಕಾದವರು ಬಿಜೆಪಿಗೆ ಬರಲು ಹಿಂದೇಟು ಹಾಕುತ್ತಾರೆ. ಅಲ್ಲದೆ ಅವರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಕೆಜೆಪಿ ಕಟ್ಟಿದಾಗ ಸಚಿವ ಸ್ಥಾನ ತ್ಯಾಗ ಮಾಡಿ ನನ್ನೊಂದಿಗೆ ಬಂದಿದ್ದೆ. ಈಗ ಪಕ್ಷಕ್ಕಾಗಿ ತ್ಯಾಗ ಮಾಡುವಂತೆ ಯಡಿಯೂರಪ್ಪ ಕೋರಿದ್ದಾರೆ. ಆದ್ದರಿಂದ ನಾನು ಬಿಜೆಪಿ ಜತೆಗೇ ಇರುತ್ತೇನೆ’ ಎಂದರು.

ಸೂಕ್ತ ಸ್ಥಾನಮಾನ ನೀಡುವ ಭರವಸೆ: ರಾಜ್ಯದ ಜನತೆಯ ಹಿತದೃಷ್ಟಿಯಿಂದ ಸಮ್ಮಿಶ್ರ ಸರ್ಕಾರವನ್ನು ಕಿತ್ತೂಗೆಯಬೇಕೆಂದು ಯಡಿಯೂರಪ್ಪ ಹೇಳಿದ್ದಾರೆ. ಚಿಂಚೋಳಿ ಟಿಕೆಟ್‌ ನನಗೆ ಸಿಗದಿದ್ದಕ್ಕೆ ತಮಗೂ ನೋವಾಗಿದೆ ಎಂದಿದ್ದಾರೆ. ಕೆಲವೇ ದಿನಗಳಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾಗಲಿದೆ. ಈ ಸಂದರ್ಭದಲ್ಲಿ ಸೂಕ್ತ ಸ್ಥಾನಮಾನ ನೀಡುತ್ತೇನೆ ಎಂದು ಅವರು ಭರವಸೆ ನೀಡಿದ್ದಾರೆ ಎಂದು ಸುನೀಲ ವಲ್ಯಾಪುರೆ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next