ರಬಕವಿ-ಬನಹಟ್ಟಿ: ಸ್ವಾತಂತ್ರ‍್ಯ ಪೂರ್ವ ಕಾಲದಿಂದ ಇಲ್ಲಿಯವರೆಗೆ ನಮ್ಮ ಭಾರತೀಯರನ್ನು ಒಂದಗೂಡಿಸಿದ್ದೆ ನಮ್ಮ ದೇಶದ ದೇವರುಗಳು ಮತ್ತು ದೇವಾಲಯಗಳು. ಇಂಥ ಮಹಾನ್ ಸಂಸ್ಕೃತಿಯನ್ನು ಹೊಂದಿದೆ ಧರ್ಮದ ಕುರಿತು ಕೆಲವು ಸ್ವಾಮೀಜಿಯವರು ಮತ್ತು ಇನ್ನೂಳಿದವರು ಟೀಕೆ ಮಾಡುತ್ತಿರುವುದು ಸರಿಯಲ್ಲ. ನಮ್ಮ ಸಂಸ್ಕೃತಿಯ ಪ್ರತೀಕವಾದ ದೇವಾಲಯಗಳನ್ನು, ಧರ್ಮವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಮ್ಮ ಜನರ ಭಕ್ತಿಯನ್ನು ಹಾಳು ಮಾಡುವ ಕಾರ್ಯಕ್ಕೆ ಸ್ವಾಮೀಜಿಗಳು ಮುಂದಾಗಬಾರದು ಎಂದು ಕೊಲ್ಲಾಪುರದ ಕನ್ಹೇರಿ ಮಠದ ಜಗದ್ಗುರು ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ನುಡಿದರು.
ಮಂಗಳವಾರ ಇಲ್ಲಿನ ಕಾಡಸಿದ್ಧೇಶ್ವರ ದೇವಸ್ಥಾನದ ಕಳಸಾರೋಹಣ ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ಧಾರ್ಮಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ನಮ್ಮ ಸಂಸ್ಕಾರ ಮಾಧ್ಯಮದಿಂದಾಗಿ ಭಾರತ ಶ್ರೀಮಂತವಾಗಿದೆ. ನಮ್ಮನ್ನು ಒಗ್ಗೂಡಿಸುವುದರ ಸಲುವಾಗಿ ನಮ್ಮ ಹಿರಿಯರು ದೇವಸ್ಥಾನಗಳನ್ನು ನಿರ್ಮಾಣ ಮಾಡಿದ್ದರು. ಧರ್ಮ ಮತ್ತು ಆಧ್ಯಾತ್ಮಿಕತೆಯಲ್ಲಿ ಭಾರತ ದೇಶ ಬಹಳಷ್ಟು ಸ್ವಾತಂತ್ರ‍್ಯವನ್ನು ನೀಡಿದೆ. ಧರ್ಮ ನಿರಪೇಕ್ಷತೆ ಹಿಂದೂಗಳ ಹೃದಯದಲ್ಲಿದೆ.
ಭಾರತ ದೇಶವು ಪ್ರಾಣಿ, ಪಕ್ಷಿ, ಬೆಳೆ, ಜನ, ಜಾತಿ, ಪಂಗಡ, ಧರ್ಮ, ನೃತ್ಯ, ಸಂಗೀತ, ಭಜನೆ, ಅನ್ನ ಸಂಗತಿ ಸೇರಿದಂತೆ ಪ್ರತಿಯೊಂದರಲ್ಲಿಯೂ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರವಾಗಿದೆ. ಇಲ್ಲಿಯ ಋಷಿ ಮುನಿಗಳು. ಸಾಧು ಸತ್ಪುರಷ ಸಂಪ್ರದಾಯಗಳು ಶ್ರೇಷ್ಠವಾಗಿವೆ. ಇವೆಲ್ಲವುಗಳಿಂದ ಭಾರತ ಇಂದು ವೈಭವಶಾಲಿಯಾದ ರಾಷ್ಟ್ರವಾಗಿದೆ ಎಂದು ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ತಿಳಿಸಿದರು.
ವೇದಿಕೆಯ ಮೇಲೆ ಬನಹಟ್ಟಿಯ ಹಿರೇಮಠದ ಶರಣಬಸವ ಶಿವಾಚಾರ್ಯರು, ಹುಬ್ಬಳ್ಳಿಯ ವೀರಭಿಕ್ಷಾವರ್ತಿ ಮಠದ ಜಗದ್ಗುರು ಶಿವಶಂಕರ ಶಿವಾಚಾರ್ಯರು, ರಬಕವಿಯ ಗುರುಸಿದ್ಧೇಶ್ವರ ಸ್ವಾಮೀಜಿ, ಮರೆಗುದ್ದಿಯ ನಿರೂಪಾಧೀಶ್ವರ ಸ್ವಾಮೀಜಿ, ಮಹಾಲಿಂಗಪುರದ ಸಹಜಾನಂದ ಸ್ವಾಮೀಜಿ, ಜಮಖಂಡಿಯ ಗೌರಿ ಶಂಕರ ಸ್ವಾಮೀಜಿ, ಚಿಮ್ಮಡದ ವಿರಕ್ತ ಮಠದ ಪ್ರಭು ದೇವರು, ಜಮಖಂಡಿಯ ಶಿವಲಿಂಗ ಪಂಡಿತಾರಾಧ್ಯ ಶಿವಾಚಾರ್ಯರು, ನಾವಲಗಿ ಶ್ರೀಶೈಲಯ್ಯ ಹಿರೇಮಠ, ಆಳಂದದ ಚನ್ನಬಸವ ಪಟ್ಟದ್ದೇವರು, ನೀರಲಕೇರಿಯ ಘನಲಿಂಗ ಸ್ವಾಮೀಜಿ, ಶಿರೋಳ ರಾಮರೂಢ ಮಠದ ಶಂಕರಾರೂಢ ಸ್ವಾಮೀಜಿ, ಹೊಸೂರಿನ ಶ್ರೀಗಳು ಇದ್ದರು.