ಬೆಂಗಳೂರು: ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿಯ ಮನಗೋಳಿ ಗ್ರಾಮದ ತಾತ್ಕಾಲಿಕ ಶೆಡ್‌ವೊಂದರಲ್ಲಿ ಪತ್ತೆಯಾಗಿರುವುದು ವಿವಿಪ್ಯಾಟ್‌ಗಳಲ್ಲ, ಅವು ವಿವಿಪ್ಯಾಟ್‌ನ ಖಾಲಿ ಬಾಕ್ಸ್‌ಗಳು. ಅದಕ್ಕೂ 2018ರ ವಿಧಾನಸಭಾ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದು ರಾಜ್ಯ ಮುಖ್ಯಚುನಾವಣಾಧಿಕಾರಿ ಸಂಜೀವ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯಪುರ ಜಿಲ್ಲೆಯಲ್ಲಿ ಬಳಸಲಾದ ಒಟ್ಟು 2,744 ವಿವಿಪ್ಯಾಟ್‌ಗಳು ಸುರಕ್ಷಿತವಾಗಿ ಸ್ಟ್ರಾಂಗ್ ರೂಂನಲ್ಲಿವೆ ಎಂದು ಈಗಾಗಲೇ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಈ ಬಗ್ಗೆ ಅಪಪ್ರಚಾರ ಮಾಡುವ ಅಥವಾ ಗೊಂದಲ ಸೃಷ್ಟಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ಸಹ ನೀಡಿದರು.
ಮನಗೋಳಿ ಗ್ರಾಮದ ಸಮೀಪ ರಾಷ್ಟ್ರೀಯ ಹೆದ್ದಾರಿ 13ರ ಕಾಮಗಾರಿಯ ಕಾರ್ಮಿಕರು ವಾಸಿಸುತ್ತಿದ್ದ ತಾತ್ಕಾಲಿಕ ಶೆಡ್‌ನಲ್ಲಿ ಪತ್ತೆಯಾಗಿರುವ ಏಳು ವಿವಿಪ್ಯಾಟ್‌ನ ಖಾಲಿ ಬಾಕ್ಸ್ (ಶೆಲ್)ಗಳಲ್ಲಿ ಯಾವುದೇ ಮಷೀನ್ ಇರಲಿಲ್ಲ. ಜೊತೆಗೆ ಅಲ್ಲಿ ಯಾವುದೇ ಪೇಪರ್ ಅಥವಾ ಇನ್ನಿತರ ಪೂರಕ ಸಾಮಾಗ್ರಿಗಳು ಕಂಡು ಬಂದಿಲ್ಲ. ಬಹಳ ಮುಖ್ಯವಾಗಿ ಪ್ರತಿಯೊಂದು ಇವಿಎಂ ಮತ್ತು ವಿವಿಪ್ಯಾಟ್‌ಗೆ ಪ್ರತ್ಯೇಕವಾಗಿ ಇರುವ “ಎಲೆಕ್ಟ್ರಾನಿಕಲ್ ಟ್ರ್ಯಾಕಿಂಗ್ ಸಿಸ್ಟಂ’ನ 6 ಅಂಕಿಗಳ ಬಾರ್‌ಕೋಡ್ ಯಾವುದಕ್ಕೂ ಇದ್ದಿಲ್ಲ. ಹಾಗಾಗಿ ಸಿಕ್ಕಿರುವ ವಿವಿಪ್ಯಾಟ್ ಬಾಕ್ಸ್‌ಗಳಿಗೂ ಈಗಷ್ಟೇ ಮುಗಿದ ಚುನಾವಣೆಗೂ ಯಾವುದೇ ಸಂಬಂಧವಿಲ್ಲ ಎಂದರು.
ಆದರೆ, ಇದೊಂದು ಗಂಭೀರ ವಿಷಯ. ಇಡೀ ದೇಶದಲ್ಲಿ ಗುಜರಾತಿನ ಜ್ಯೋತಿ ಪ್ಲಾಸ್ಟಿಕ್ ಮ್ಯಾನುಫ್ಯಾಕ್ಚರರ್ ವಿವಿಪ್ಯಾಟ್ ಬಾಕ್ಸ್‌ಗಳನ್ನು ತಯಾರಿಸುವ ಏಕೈಕ ಸಂಸ್ಥೆ. ಮನಗೋಳಿಯಲ್ಲಿ ಸಿಕ್ಕಿರುವ ವಿವಿಪ್ಯಾಟ್ ಖಾಲಿ ಬಾಕ್ಸ್‌ಗಳು ಅಲ್ಲಿಂದಲೇ ಬಂದಿದ್ದಾವಾ? ಬಂದಿದ್ದರೆ ಹೇಗೇ? ಅಥವಾ ಎಲ್ಲಿಂದ ಬಂದವು, ಯಾರು ತಂದರು, ಯಾವುದಕ್ಕೆ ತಂದಿದ್ದರು ಎಂಬ ವಿಷಯಗಳು ತನಿಖೆಯಿಂದ ಗೊತ್ತಾಗಬೇಕಿದೆ. ವಿಜಯಪುರ ಜಿಲ್ಲೆಯಲ್ಲಿ ವಿವಿಪ್ಯಾಟ್‌ನ ಖಾಲಿ ಬಾಕ್ಸ್‌ಗಳು ಪತ್ತೆಯಾಗಿವೆ. ಬಾಗಲಕೋಟೆಯಲ್ಲಿ ಒಂದು ಕಡೆ ಇವಿಎಂ ತುಂಡುಗಳು ಸಿಕ್ಕಿವೆ. ಬಾದಾಮಿಯ ಹೊಟೇಲೊಂದರಲ್ಲಿ ಪೇಪರ್ ಬ್ಯಾಲೆಟ್ ಸಿಕ್ಕಿವೆ ಎಂದು ಹೇಳಲಾಯಿತು. ಆದರೆ, ಈ ಯಾವುದೇ ಸುದ್ದಿಗಳು ನಿಜ ಅಲ್ಲ. ಚುನಾವಣಾ ಪ್ರಕ್ರಿಯೆಯನ್ನು ಅಸ್ತವ್ಯಸ್ತಗೊಳಿಸುವ ಪ್ರಯತ್ನ ಆಗಿರಲೂಬಹುದು ಪೊಲೀಸರು ಪ್ರಕರಣದ ತನಿಖೆ ನಡೆಯುತ್ತಿದ್ದು, ಬಳಿಕವಷ್ಟೇ ಸತ್ಯಾಂಶ ಹೊರಬರಲಿದೆ ಎಂದು ಸಂಜೀವ ಕುಮಾರ್ ಹೇಳಿದರು.