Advertisement

ಎಲ್ಲವನ್ನೂ ಸರ್ಕಾರ ಮಾಡಲಿ ಎಂಬ ಧೋರಣೆ ಸಲ್ಲ

02:21 PM Dec 11, 2017 | |

ದಾವಣಗೆರೆ: ಸರ್ಕಾರ, ರಾಜಕಾರಣಿಗಳೇ ಎಲ್ಲಾ ಮಾಡಬೇಕು ಎಂಬ ನಮ್ಮ ಅಭಿಪ್ರಾಯ ಬದಲಾದಾಗ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದು ನಿವೃತ್ತ ನ್ಯಾಯಮೂರ್ತಿ ಶಿವರಾಜ್‌ ವಿ. ಪಾಟೀಲ್‌ ಅಭಿಪ್ರಾಯಪಟ್ಟಿದ್ದಾರೆ.

Advertisement

ತಾಲೂಕಿನ ದೊಡ್ಡಬಾತಿ ಗ್ರಾಮದಲ್ಲಿ ಭಾನುವಾರ ಮೈತ್ರಿ ಮತ್ತು ಸುರಭಿ ಸಂಯುಕ್ತ ಸಂಸ್ಥೆಯ ಬೆಳ್ಳಿ ಹಬ್ಬ ಸಂಭ್ರಮಾಚರಣೆಗೆ ಚಾಲನೆನೀಡಿ, ಮಾತನಾಡಿದ ಅವರು, ನಮ್ಮ ಕೆಲಸಗಳು ಭಾಷಣಕ್ಕಿಂತ ಮಿಗಿಲಾಗಿರಬೇಕು. ಎಲ್ಲದಕ್ಕೂ ಸರ್ಕಾರವನ್ನೇ ನೆಚ್ಚಿ ಕೂರುವುದು ಸರಿಯಲ್ಲ. ರಾಜಕಾರಣಿಗಳೇ ಎಲ್ಲವನ್ನೂ ಮಾಡಬೇಕೆಂದು ಬಯಸುವುದು ತಪ್ಪು. ಸಹಾಯಹಸ್ತ, ಒಳ್ಳೆಯ ಕೆಲಸ, ಅಭಿವೃದ್ಧಿ ಕಾರ್ಯ ನಮ್ಮಿಂದಲೇ ಆಗಬೇಕು ಎಂದರು.

ವೃದ್ಧಾಶ್ರಮಗಳ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಆದರೆ, ನಾವು ಮುಂದೊಂದು ದಿನ ವೃದ್ಧರಾಗುತ್ತೇವೆ. ನಮಗೂ ಇದೇ ಸ್ಥಿತಿ
ಬರುತ್ತದೆ ಎಂಬುದನ್ನು ಎಲ್ಲರೂ ಅರಿಯುವ ಜೊತೆಗೆ ತಂದೆ, ತಾಯಿ, ವೃದ್ದರನ್ನು ಪ್ರೀತಿಸುವುದು, ಆರೈಕೆಮಾಡುವುದು ನಮ್ಮ ಜೀವನದಲ್ಲಿ ನಮಗೆ ಸಿಕ್ಕ ಅತ್ಯಮೂಲ್ಯ ಅವಕಾಶವೆಂದು ಭಾವಿಸಬೇಕು ಎಂದು ಅವರು ಹೇಳಿದರು.

ಮೈತ್ರಿ ಹಾಗೂ ಸುರಭಿ ಸಂಯುಕ್ತ ಸಂಸ್ಥೆ ರಾಜ್ಯದಲ್ಲಿ 7 ಅಂಗಸಂಸ್ಥೆಗಳನ್ನು ಹೊಂದಿದ್ದು, 11 ಯೋಜನೆಗಳ ಮೂಲಕ ನೊಂದವರ, ಅಸಹಾಯಕರ, ಬಡವರ, ದಲಿತರ, ವಯೋವೃದ್ಧರ ಸೇವೆ ಮಾಡುತ್ತಿದೆ. ಅನೇಕ ವರ್ಷಗಳಿಂದ ಸರ್ಕಾರದಿಂದ ಯಾವುದೇ ಅನುದಾನ ಬಾರದಿದ್ದರೂ ಅದು ತನ್ನ ಸೇವಾ ಕಾರ್ಯ ಮಾತ್ರ ನಿಲ್ಲಿಸಿಲ್ಲ. ಅನ್ನ, ಅಶ್ರಯ, ಅಕ್ಷರ ನೀಡುವ ಮೂಲಕ ಸಾವಿರಾರು ಜನರಿಗೆ ಉತ್ತಮ ಬದುಕು ರೂಪಿಸಿಕೊಟ್ಟಿದೆ ಎಂದು ಅವರು ಹೇಳಿದರು.

ಕಲ್ಲಿನಲ್ಲಿ ದೇವರನ್ನು ಕಾಣುವ ಬದಲು ಮನುಷ್ಯರ ಸೇವೆ ಮಾಡುತ್ತಾ ಆ ಸೇವೆಯಲ್ಲಿ  ಭಗವಂತನನ್ನು ಕಾಣುವಂತಾಗಬೇಕು. ನಾನು ಅನೇಕ ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದ್ದರೂ ಇಂದು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನನಗೆ ನೆಮ್ಮದಿ ತಂದಿದೆ ಎಂದರು.

Advertisement

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ಮಾತನಾಡಿ, ಇಂದು ವೃದ್ಧಾಶ್ರಮಗಳು ಹೆಚ್ಚಾಗುತ್ತಿರುವುದು ನಿಜಕ್ಕೂ ಕಳವಳಕಾರಿ. ಯಾರಾದರೂ ವೃದ್ಧಾಶ್ರಮ ಆರಂಭಿಸುತ್ತೇವೆ ಅಥವಾ ವೃದ್ಧಾಶ್ರಮಕ್ಕೆ ಕಳುಹಿಸುತ್ತೇವೆ ಸಹಾಯ ಮಾಡಿ ಎಂದಾಗ ನಾನು ಸುತಾರಾಂ ಒಪ್ಪುವುದಿಲ್ಲ. ಆದ್ದರಿಂದ ಯಾವುದೇ ಕೆಲಸ, ಕಾರ್ಯ, ದೂರ ಹೋಗುವುದಿದ್ದರೂ ತಂದೆ ತಾಯಿಗಳನ್ನು ಜೊತೆಯಲ್ಲಿಯೇ ಇರಿಸಿಕೊಳ್ಳಿ. ಮುಂದಾದರೂ ಯುವಜನತೆ ಇಂತಹ ಸ್ಥಿತಿಯನ್ನು ಹೋಗಲಾಡಿಸಬೇಕು ಎಂದರು.

ಜಿಲ್ಲೆಯಲ್ಲಿ ಎಲ್ಲಾ ಸಮಾಜದವರಿಗೆ ಅತೀ ಕಡಿಮೆ ದರದಲ್ಲಿ ನಿವೇಶನಗಳನ್ನು ನೀಡಿದ್ದೇನೆ. ಯಾವ ಸಮುದಾಯಕ್ಕೂ ಇಲ್ಲವೆಂದಿಲ್ಲ.  ವಸತಿನಿಲಯಗಳ ಆರಂಭಕ್ಕೆ ಚದರಡಿಗೆ 1 ರು. ನಂತೆ ಸಹ ಕೆಲ ಸಮುದಾಯದವರಿಗೆ ಜಾಗ ಕಲ್ಪಿಸಿಕೊಟ್ಟಿದ್ದೇನೆ. ಹೇಮರೆಡ್ಡಿ ಸಮುದಾಯದ ವಸತಿ ನಿಲಯಕ್ಕೆ ಈಗಾಗಲೇ 50 ಲಕ್ಷ ನೀಡಿದ್ದು, ಇನ್ನೂ 50 ಲಕ್ಷ ನೀಡಲು ಬೇಡಿಕೆ ಇದ್ದು, ಈ ಕುರಿತು ಪರಿಶೀಲಿಸಲಾಗುವುದು ಎಂದರು.

ಶ್ರೀಶೈಲ ಪೀಠದ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಬಾಳೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ, ಯಡಗಿಮುದ್ರದ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಸ್ವಾಮೀಜಿ, ಕರಿಬಂಟನಾಳದ ಶಿವಕುಮಾರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.  ಮೈತ್ರಿ ಸಂಸ್ಥೆಯ ಅಧ್ಯಕ್ಷೆ ಮೀನಾಕ್ಷಮ್ಮ ಅಧ್ಯಕ್ಷತೆ ವಹಿಸಿದ್ದರು.

ಶರಣ ಸಾಹಿತ್ಯ ಪರಿಷತ್‌ ಅಧ್ಯಕ್ಷ ಗೊ.ರು. ಪರಮೇಶ್ವರಪ್ಪ, ರಾಜ್ಯ ಹೇಮರಡ್ಡಿಮಲ್ಲಮ್ಮ ಸಲಹಾ ಸಮಿತಿ ಸದಸ್ಯ ಡಾ| ಜಿ.ಪಿ.ಪ್ರಭುಕುಮಾರ್‌, ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಸಮಾಜದ ಅಧ್ಯಕ್ಷ ಡಾ| ಕೊಟ್ರೇಶಪ್ಪ ಬಿದರಿ, ಶ್ರೀಶಕ್ತಿ ಅಸೋಸಿಯೇಷನ್‌
ಕಾರ್ಯದರ್ಶಿ ಡಾ| ಶಶಿಕುಮಾರ್‌, ಶಿವಲಿಂಗಮೂರ್ತಿ ವೇದಿಕೆಯಲ್ಲಿದ್ದರು. ರಾಜ್ಯ ಸಹಕಾರ ಮಹಾಮಂಡಳಿ ನಿಗಮ ಅಧ್ಯಕ್ಷ ಡಾ| ಶೇಖರ್‌ಗೌಡ ಮಾಲೀಪಾಟೀಲ್‌ ಸ್ಮರಣ ಸಂಚಿಕೆ ಹಾಗೂ ಅತ್ಯುತ್ತಮ ಸಿಬ್ಬಂದಿಗೆ ಪ್ರವಾಸದ ಟಿಕೇಟ್‌ ಮತ್ತು ಕಿಟ್‌ ವಿತರಣೆ
ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next