ಬೆಂಗಳೂರು: ಹಿಂದಿಯನ್ನು ರಾಷ್ಟ್ರಭಾಷೆಯಾಗಿ ಬಿಂಬಿಸುವುದು ಅಥವಾ ಅದರ ಆಧಾರದಲ್ಲೇ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದು ಸಂಸದ ಶಶಿತರೂರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಡಾ.ಬಿ.ಆರ್.ಅಂಬೇಡ್ಕರ್ ಅಂತಾರಾಷ್ಟ್ರೀಯ ಸಮ್ಮೇಳನದ ಮೂರನೇ ದಿನವಾದ ಭಾನುವಾರದ ವಿಚಾರ ಗೋಷ್ಠಿಯಲ್ಲಿ ಐಡಿಯಲ್ ಇಂಡಿಯಾದ ಬಗ್ಗೆ ವಿಷಯ ಮಂಡಿಸಿದ ಅವರು, ದೇಶದ ಭಾಷೆ ಅಲ್ಲಿನ ಪ್ರಾದೇಶಿಕತೆಗೆ ತಕ್ಕಂತೆ ಭಿನ್ನವಾಗಿದೆ. ಹಾಗೆಯೇ ಸಂವಿಧಾನ ಮಾನ್ಯ ಮಾಡಿರುವ ಹಲವು ಭಾಷೆಗಳು ನಮ್ಮಲ್ಲಿವೆ. ಆದ್ದರಿಂದ ಹಿಂದಿಯನ್ನೇ ರಾಷ್ಟ್ರಭಾಷೆ ಎಂಬಂತೆ ಬಿಂಬಿಸುವುದು ಸರಿಯಲ್ಲ ಎಂದು ಹೇಳಿದರು.
ಭಾರತದಲ್ಲಿ ಪ್ರತಿಯೊಬ್ಬರಿಗೂ ಅವರದ್ದೇ ಆದ ಗುರುತಿಸಿಕೊಳ್ಳುವಿಕೆ ಇರುತ್ತದೆ. ಹಾಗೆಯೇ ಉತ್ತಮ ಭಾರತೀಯನೂ ಇರುತ್ತಾನೆ, ಉತ್ತಮ ಕೇರಳಿಯನ್ ಕೂಡ ಇರುತ್ತಾನೆ. ಆದ್ದರಿಂದ ಎಲ್ಲರನ್ನೂ ಗೌರವಿಸಬೇಕು ಎಂಬುದನ್ನು ಭಾರತವೇ ಅರ್ಥಮಾಡಿಕೊಳ್ಳಬೇಕಿದೆ ಎಂದು ಹೇಳಿದರು.
ರಾಷ್ಟ್ರೀಯ ವಾದದ ಹೆಸರಿನಲ್ಲಿ ಇನ್ನೊಬ್ಬರ ಧ್ವನಿಯನ್ನು ಹತ್ತಿಕ್ಕುವುದು ಅತ್ಯಂತ ಅಪಾಯಕಾರಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಭಿಪ್ರಾಯ ಬೇಧಕ್ಕೆ ಅವಕಾಶ ಇರಬೇಕು. ದೇಶದಲ್ಲಿ ಪ್ರತಿಯೊಬ್ಬರಿಗೂ ಎಲ್ಲ ವಿಚಾರದಲ್ಲೂ ಮುಕ್ತವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವಿದೆ.
ಜಾತ್ಯತೀತ ವ್ಯವಸ್ಥೆಯಲ್ಲಿ ಎಲ್ಲರೂ ಸಮಾನರಾಗಿರುತ್ತಾರೆ. ಅನೇಕ ವಿಚಾರದಲ್ಲಿ ಅಲ್ಪಸಂಖ್ಯಾತರಿಗೆ ಭಿನ್ನಾಭಿಪ್ರಾಯಗಳಿದ್ದರೂ, ಅದನ್ನು ಹೇಳಿಕೊಳ್ಳಲಾಗದೇ ಸುಮ್ಮನೆ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. ದೆಹಲಿ ವಿಶ್ವವಿದ್ಯಾಲಯದ ಪ್ರೊ. ನೀರಾ ಚಂದೋಕ್, ರಾಜ್ಯಶಾಸ್ತ್ರಜ್ಞ ರಾಜೀವ್ ಭಾರ್ಗವ್ ಅಂಬೇಡ್ಕರ್ ಕುರಿತಾದ ತಮ್ಮ ವಿಚಾರ ಮಂಡಿಸಿದರು. ಆಕಾಶ್ ಸಿಂಗ್ ರಾತೋರೆ ಗೋಷ್ಠಿ ನಡೆಸಿಕೊಟ್ಟರು.
ಸ್ವಾತಂತ್ರೊತ್ಸವದಂದು ದೇಶದ ಪ್ರಧಾನಿ ಕೆಂಪುಕೋಟೆಯ ಮೇಲೆ ನಿಂತು ದೇಶವನ್ನು ಉದ್ದೇಶಿಸಿ ಹಿಂದಿಯಲ್ಲೇ ಮಾತನಾಡುತ್ತಾರೆ. ಎಚ್.ಡಿ.ದೇವೇಗೌಡರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಹಿಂದಿ ಭಾಷಣವನ್ನು ಕನ್ನಡದಲ್ಲಿ ಬರೆದುಕೊಂಡು ಓದಿದ್ದರು. ಇದು ಎಂಥ ಸಂದೇಶ ನೀಡಬಹುದು ಎಂಬುದನ್ನು ಎಲ್ಲರೂ ಅರ್ಥೈಸಿಕೊಳ್ಳಬಹುದು.
-ಶಶಿ ತರೂರ್, ಸಂಸದ