Advertisement

ಮರ ಕಡಿಯುವುದೇ ಉದ್ದೇಶವಲ್ಲ

11:18 AM Jul 25, 2017 | Team Udayavani |

ಬೆಂಗಳೂರು: ಸಾರ್ವಜನಿಕರ ಅನುಕೂಲಕ್ಕಾಗಿ ಉಕ್ಕಿನ ಸೇತುವೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆಯೇ ಹೊರತು, ಮರಗಳನ್ನು ಕಡಿಯುವುದು ಸರ್ಕಾರದ ಉದ್ದೇಶವಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ. ಬಿಬಿಎಂಪಿ ವತಿಯಿಂದ ಕೋರಮಂಗಲದ ಬೆಥನಿ ಶಾಲಾ ಮೈದಾನದಲ್ಲಿ ಸೋಮವಾರ 625 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

Advertisement

“ಮರಗಳನ್ನು ಕಡಿಯುವ ಉದ್ದೇಶಕ್ಕಾಗಿಯೇ ಉಕ್ಕಿನ ಸೇತುವೆ ನಿರ್ಮಿಸಲಾಗುತ್ತಿದೆ ಎಂಬ ತಪ್ಪು ಭಾವನೆ ಜನರಲ್ಲಿದೆ. ಸಾರ್ವಜನಿಕರು ವಾಹನ ದಟ್ಟಣೆಯಿಂದ ಮುಕ್ತವಾಗಿರುವ ರಸ್ತೆಗಳಲ್ಲಿ ಸಂಚರಿಸಬೇಕು ಎಂಬ ಉದ್ದೇಶದಿಂದ ಉಕ್ಕಿನ ಸೇತುವೆ ಯೋಜನೆ ಕೈಗೆತ್ತಿಕೊಳ್ಳಲಾಗಿದೆಯೇ ಹೊರತು, ಮರಗಳನ್ನು ಕಡಿಯುವ ಯಾವುದೇ ಯೋಜನೆಯನ್ನು ಪಾಲಿಕೆ ಕೈಗೊಂಡಿಲ್ಲ. ಹೀಗಾಗಿ ಜನರು ತಪ್ಪು ಕಲ್ಪನೆಗಳಿಂದ ಹೊರಬಂದು ಯೋಜನೆಗೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ತಂತ್ರಜ್ಞಾನ ಬಳಕೆ: ನಗರದಲ್ಲಿನ ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಅಂಡರ್‌ ಪಾಸ್‌ ಹಾಗೂ ಮೇಲ್ಸೇತುವೆಗಳ ಅಗತ್ಯವಿದ್ದು, ಅದಕ್ಕಾಗಿ ಮರಗಳನ್ನು ಕಡಿಯುವ ಬದಲು ಅವುಗಳನ್ನು ಬುಡ ಸಮೇತವಾಗಿ ಸ್ಥಳಾಂತರ ಮಾಡುವ ತಂತ್ರಜ್ಞಾನವಿದೆ. ಸಾಧ್ಯವಾದ ಕಡೆ ಅವುಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅನಿವಾರ್ಯವಾಗಿ ಕೆಲವೊಂದು ಕಡೆಗಳಲ್ಲಿ ಮರಗಳನ್ನು ಕಡಿಯಲೇ ಬೇಕಾದಂತಹ ಸಂದರ್ಭಗಳಲ್ಲಿ ಒಂದು ಮರಕ್ಕೆ 10 ಸಸಿಗಳನ್ನು ನಡೆವ ಕೆಲಸವನ್ನು ಪಾಲಿಕೆಯಿಂದ ಪ್ರಾಮಾಣಿಕವಾಗಿ ಮಾಡಲಾಗುವುದು. ಆದರೆ, ಅಭಿವೃದ್ಧಿಗಾಗಿ ಮರಗಳನ್ನು ಕಡಿದು ಪರಿಸರ ಹಾಳು ಮಾಡಲಾಗುತ್ತದೆ ಎಂಬ ತಪ್ಪು ಕಲ್ಪನೆಗಳನ್ನು ಬೆಳೆಸಿಕೊಂಡರೆ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದರು. 

ತಪ್ಪಿ ಕಲ್ಪನೆ ಬೇಡ: ಜನರ ಅನುಕೂಲಕ್ಕಾಗಿ ಈ ಹಿಂದೆ ಬಸವೇಶ್ವರ ವೃತ್ತದಿಂದ ಹೆಬ್ಟಾಳದವರೆಗೆ ನಿರ್ಮಿಸಲು ಉದ್ದೇಶಿಸಿದ್ದ ಉಕ್ಕಿನ ಸೇತುವೆಗೆ ವಿರೋಧಿಸಿ ನಿಲ್ಲುವಂತೆ ಮಾಡಿದರು. ಇದಕ್ಕೆ ಜನರಲ್ಲಿರುವ ತಪ್ಪು ಕಲ್ಪನೆಗಳೇ ಪ್ರಮುಖ ಕಾರಣ ಎಂದು ಸಿಎಂ, ಕೆಲವರಂತೂ ಯೋಜನೆಗೆ ಅನುಮೋದನೆ ದೊರೆಯುವ ಮೊದಲೇ ಭ್ರಷ್ಟಾಚಾರ ನಡೆದಿದೆ ಎಂಬ ಸುಳ್ಳು ಆರೋಪ ಮಾಡಿದರು. ಇದೀಗ ಮತ್ತೆ ಕೆಲವರು ತಪ್ಪು ಕಲ್ಪನೆ ಹಾಗೂ ಮಾಹಿತಿಯಿಲ್ಲದೆ ವಿರೋಧಿಸುವ ಕೆಲಸ ಮಾಡುತ್ತಿದ್ದಾರೆ,’ ಎಂದು ಟೀಕಿಸಿದರು. 

ರಾಜಕೀಯ ಕನ್ನಡಕ: “ಜನರಿಗೆ ಅನುಕೂಲವಾಗುವ ಯಾವುದೇ ಯೋಜನೆಯನ್ನು ಜಾರಿಗೊಳಿಸಿದದರೂ “ಚುನಾವಣೆ ದೃಷಿಟಯಿಂದ ಯೋಜನೆ ಕೈಗೆತ್ತಿಕೊಂಡಿದ್ದಾರೆ’ ಎಂದು ಆರೋಪಿಸುತ್ತಾರೆ. ಸರ್ಕಾರದ ಯೋಜನೆಗಳನ್ನು ಕೆಲವರು ರಾಜಕೀಯ ಕನ್ನಡಕ ಹಾಕಿಕೊಂಡು ನೋಡುತ್ತಿದ್ದು, ಕಾಮಾಲೆ ಕಣ್ಣಿಗೆ ಕಾಣುವುದೆಲ್ಲ ಹಳದಿ ಎಂಬಂತಾಗಿದೆ ಅವರ ಪರಿಸ್ಥಿತಿ. ಸುಳ್ಳು ಆರೋಪ ಮಾಡುವುದನ್ನೇ ಕಸುಬಾಗಿಸಿಕೊಂಡವರಿಗೆ ಜನರು ಚುನಾವಣೆಯ ಮೂಲಕ ತಕ್ಕ ಉತ್ತರ ನೀಡುವ ಮೂಲಕ, ಅವರ ಬಾಯಿ ಮುಚ್ಚಿಸಬೇಕು,’ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಎಲ್ಲ ವರ್ಗಗಳ ಬಡವರಿಗೆ ನ್ಯಾಯ ದೊರೆಯಬೇಕು ಎಂಬುದು ಸರ್ಕಾರ ನಿಲುವಾಗಿದ್ದು, ಅವರನ್ನು ಸಾಮಾಜಿಕ ಹಾಗೂ ಆರ್ಥಿಕವಾಗಿ ಸಬಲರಾಗಿಸಲು ಹಲವಾರು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಅನ್ನಭಾಗ್ಯ ಯೋಜನೆ ಮೂಲಕ ಉಚಿತ ಅಕ್ಕಿ, ಕೊಳೆಗೇರಿ ಬಡ ಜನರಿಗೆ ಉಚಿತ ನೀರು, ಬಡವರಿಗೆ ಮನೆಗಳ ನಿರ್ಮಾಣ ಮಾಡಿಕೊಡುತ್ತಿದ್ದೇವೆ. ಈಗ ಪ್ರತಿಯೊಂದಕ್ಕೂ ಆರೋಪ ಮಾಡುವರು ಅಧಿಕಾರದಲ್ಲಿರುವ ಯಾಕೆ ಇದೆಲ್ಲ ಮಾಡಲಿಲ್ಲ? ಎಂದು ಪ್ರಶ್ನಿಸಿದ ಅವರು, ಅನ್ನ-ನೀರು ಕೊಟ್ಟವರನ್ನು ರಾಜ್ಯದ ಜನರು ಯಾವತ್ತಿಗೂ ಮರೆಯುವುದಿಲ್ಲ.

ಬೇಕಾದರೆ, ಜೈಲಿಗೆ ಹೋಗಿ ಬಂದವರನ್ನು ಜನರು ಸದಾ ನೆನಪಿನಲ್ಲಿ ಇರಿಸಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು. ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಸಾಕಷ್ಟು ನೆರವು ನೀಡಿದೆ. ಈಜೀಪುರ ಮುಖ್ಯರಸ್ತೆಯಿಂದ ಸೋನಿವರ್ಲ್ಡ್ ಜಂಕ್ಷನ್‌ವರೆಗೆ ಮೇಲ್ಸೇತುವೆ ನಿರ್ಮಾಣಗೊಳ್ಳುವುದರಿಂದ ಈ ಭಾಗದ ಪ್ರಮುಖ ಸಮಸ್ಯೆಗೆ ಪರಿಹಾರ ಸಿಗಲಿದೆ. ಒಟ್ಟು 625 ಕೋಟಿ ರೂ.ಗಳ ಯೋಜನೆಗೆ ಚಾಲನೆ ಸಿಕ್ಕಿದೆ ಎಂದು ಹರ್ಷ ವ್ಯಕ್ತಪಡಿಸಿದರು. 

ಕಾರ್ಯಕ್ರಮದಲ್ಲಿ ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್‌, ಶಾಸಕ ಎನ್‌.ಎ.ಹ್ಯಾರೀಸ್‌, ವಿಧಾನ ಪರಿಷತ್‌ ಸದಸ್ಯ ಎಚ್‌.ಎಂ.ರೇವಣ್ಣ, ಮೇಯರ್‌ ಜಿ.ಪದ್ಮಾವತಿ, ಉಪಮೇಯರ್‌ ಎಂ.ಆನಂದ್‌, ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಸೇರಿದಂತೆ ಪ್ರಮುಖರು ಹಾಜರಿದ್ದರು. 

ಸುಳ್ಳುಬುರುಕರ ಬಗ್ಗೆ ಎಚ್ಚರದಿಂದಿರಿ!: “ಸರ್ಕಾರದಿಂದ ಜಾರಿಯಾಗುತ್ತಿರುವ ಜನಪರ ಕಾರ್ಯಕ್ರಮಗಳಿಂದ ನಮಗೆ ಒಳ್ಳೆಯ ಹೆಸರು ಬರುತ್ತದೆ ಎಂಬ ದುರುದ್ದೇಶದಿಂದ ವಿನಾಕಾರಣ ಕ್ಯಾತೆ ತೆಗೆಯುವುದೇ ಕೆಲವರ ಕೆಲಸವಾಗಿದೆ. ನಗರ ಭಾಗದಲ್ಲಿ ವಾಸಿಸುವ ಬಡವರಿಗೆ ರಿಯಾಯಿತಿ ದರದಲ್ಲಿ ಆಹಾರ ದಗಿಸಬೇಕೆಂಬ ಸದುದ್ದೇಶದಿಂದ “ಇಂದಿರಾ ಕ್ಯಾಂಟೀನ್‌’ ಯೋಜನೆ ಜಾರಿಗೊಳಿಸಲಾಗುತ್ತಿದೆ. ಆದರೆ, ಕೆಲವರು ಸಿವಿಲ್‌ ಕಾಮಗಾರಿಗಳಿಗೆ ಮೀಸಲಿಟ್ಟಿರುವ 100 ಕೋಟಿಯಲ್ಲಿ 65 ಕೋಟಿ ಅವ್ಯವಹಾರ ನಡೆದಿದೆ ಎಂದು ಸುಳ್ಳು ಆರೋಪ ಮಾಡುತ್ತಿದ್ದಾರೆ. ಇಂಥ ಸುಳ್ಳುಬುರುಕರ ಬಗ್ಗೆ ಜನ ಎಚ್ಚರಿಕೆಯಿಂದ ಇರಬೇಕು,’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. 

ಒಂದು ಮರವನ್ನೂ ಕಡಿಯೋಲ್ಲ!: “ಸ್ಟೀಲ್‌ ಬ್ರಿಡ್ಜ್ ನಿರ್ಮಾಣದ ವಿಚಾರದಲ್ಲಿ ಅನಗತ್ಯವಾಗಿ ತಪ್ಪು ಮಾಹಿತಿ ಹರಡುವುದು ಸರಿಯಲ್ಲ. 40 ಮರಗಳನ್ನು ಕಡಿಯಲಾಗುತ್ತದೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ. ಆದರೆ, ಕಾಮಗಾರಿಗೆ ಒಂದೇ ಒಂದು ಮರ ಕಡಿಯುವುದಿಲ್ಲ. ರೈಲ್ವೆ ಕೆಳಸೇತುವೆ ವಿಸ್ತರಣೆ ಮಾಡಬೇಕು ಎಂದು ಪ್ರತಿಭಟನಾಕಾರರು ಸಲಹೆ ನೀಡಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಈ ವಿಚಾರದಲ್ಲಿ ಎಲ್ಲರೂ ಸಲಹೆಗಳನ್ನು ನೀಡಲಿ. ಸಲಹೆಗಳನ್ನು ಸ್ವೀಕರಿಸಲು ಸರ್ಕಾರ ಮುಕ್ತವಾಗಿದೆ. ಅದು ಬಿಟ್ಟು ಅನಗತ್ಯವಾಗಿ ಗೊಂದಲ ಸೃಷ್ಟಿಸುವುದು ಸರಿಯಲ್ಲ,’ ಎಂದು ಸಚಿವ ಕೆ.ಜೆ.ಜಾರ್ಜ್‌ ಹೇಳಿದ್ದಾರೆ.

ಬಸವೇಶ್ವರ ವೃತ್ತದಿಂದ ಹೆಬ್ಟಾಳದವರೆಗೆ ನಿರ್ಮಿಸಲು ಉದ್ದೇಶಿಸಿದ್ದ ಉಕ್ಕಿನ ಸೇತುವೆ ಯೋಜನೆ ನಿಲ್ಲಲು ಜನರ ತಪ್ಪಿಕಲ್ಪನೆಯೇ ಕಾರಣ. ಯೋಜನೆಗೆ ಅನುಮೋದನೆ ದೊರೆಯುವ ಮೊದಲೇ ಕೆಲವರು ಭ್ರಷ್ಟಾಚಾರ ನಡೆದಿದೆ ಎಂಬ ಸುಳ್ಳು ಆರೋಪ ಮಾಡಿದರು. ಇದೀಗ ಅದೇ ತಪ್ಪು ಕಲ್ಪನೆ ಹಾಗೂ ಮಾಹಿತಿಯಿಲ್ಲದೆ ಯೋಜನೆ ವಿರೋಧಿಸಲಾಗುತ್ತಿದೆ.
-ಸಿದ್ದರಾಮಯ್ಯ, ಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next