ಬೆಂಗಳೂರು: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ದಾಖಲೆ ಇಲ್ಲದೆ ಆರೋಪಿಸುವುದು ಬೇಡ. ಪೆನ್‌ಡ್ರೈವ್ ತೋರಿಸಿ, ಗಾಳಿಯಲ್ಲಿ ಗುಂಡು ಹೊಡೆದರೆ ಆಗುವುದಿಲ್ಲ. ಅವರ ಆರೋಪಗಳಿಗೆ ನಿರ್ದಿಷ್ಟ ದಾಖಲೆ ಇದ್ದರೆ ಕೊಡಲಿ. ತನಿಖೆ ಮಾಡಿಸುವುದಾಗಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ನಾನು ಯಾರಿಗೂ ಸವಾಲು ಹಾಕಲು ಬಯಸುವುದಿಲ್ಲ. ಆದರೆ, ನನ್ನ ಇಲಾಖೆ ಪಾರದರ್ಶಕವಾಗಿರಬೇಕು ಎಂದು ಬಯಸುತ್ತೇನೆ. ಅವರು ಸ್ಪಷ್ಟ ದಾಖಲೆ ಒದಗಿಸಿದರೆ ಖಂಡಿತಾ ತನಿಖೆಗೆ ಆದೇಶ ನೀಡಲಾಗುವುದು ಎಂದರು.
ಆರು ಮರ ಕಡಿಯಲು ಅನುಮತಿ ಕೇಳಿದವರಿಗೆ 66 ಮರ ಕಡಿಯಲು ಅವಕಾಶ ಕೊಟ್ಟ ಡಿಸಿಎಫ್ ಚಕ್ರಪಾಣಿ, ಪರಿಭಾವಿತ ಅರಣ್ಯ ಭೂಮಿಯಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿಸಿದ ಹಾಸನ ಡಿಸಿಎಫ್ ಹರೀಶ್ ಅವರನ್ನು ಅಮಾನತು ಮಾಡಲಾಗಿದೆ. ಬೆಂಗಳೂರಿನ ಕೊತ್ತನೂರು ಬಳಿ 500 ಕೋಟಿ ರೂ. ಬೆಲೆಬಾಳುವ ಅರಣ್ಯ ಜಮೀನನ್ನು ಕಂದಾಯ ಭೂಮಿ ಎಂದು ಪರಿವರ್ತಿಸಿದ್ದ ಉಪವಿಭಾಗಾಧಿಕಾರಿ ಶಿವಣ್ಣ, ತಹಶೀಲ್ದಾರ್ ಅಜಿತ್ ರೈ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದೆ. ಹಾಸನದಲ್ಲಿ 66 ಎಕ್ರೆ ಅರಣ್ಯವನ್ನು ಕಂದಾಯ ಭೂಮಿ ಎಂದು ಮಂಜೂರು ಮಾಡಿರುವ ಎ.ಸಿ. ಜಗದೀಶ್ ವಿರುದ್ಧವೂ ಕ್ರಿಮಿನಲ್ ಮೊಕದ್ದಮೆ ಹೂಡಲು ಸೂಚಿಸಿದ್ದೇನೆ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಭೂಮಿ ಮಂಜೂರು ಮಾಡಿದ್ದ ಕಡೂರು ತಹಶೀಲ್ದಾರ್ ಉಮೇಶ್‌ರನ್ನು ಬಂಧಿಸಲಾಗಿದೆ. ಹಾಸನದ ಯಸಳೂರು ವಲಯದಲ್ಲಿ ಅಕ್ರಮ ಮರ ಕಡಿತಲೆಗೆ ಅವಕಾಶ ಕೊಟ್ಟ ಆರ್‌ಎಫ್ಒ ಜಗದೀಶ್‌ರನ್ನು ಅಮಾನತುಪಡಿಸಿದೆ. ನಂದಗೊಂಡನಹಳ್ಳಿಯ 126 ಮರ ಕಡಿತಲೆ ಪ್ರಕರಣದಲ್ಲೂ 5 ಜನರನ್ನು ಅಮಾನತು ಮಾಡಲಾಗಿದೆ ಎಂದು ಹೇಳಿದರು.
ವನ್ಯಜೀವಿ ಅಂಗಾಂಗ ಮರಳಿಸಲು 3 ತಿಂಗಳ ಕಾಲಾವಕಾಶ
ಹುಲಿ, ಚಿರತೆ ಉಗುರು, ಜಿಂಕೆ ಕೊಂಬು, ಆನೆ ದಂತ, ಕೂದಲು ಇತ್ಯಾದಿ ವನ್ಯಜೀವಿ ಅಂಗಾಂಗಗಳನ್ನು ಅರಣ್ಯ ಇಲಾಖೆಗೆ ಮರಳಿಸಲು ಜ. 16ರಿಂದ 3 ತಿಂಗಳವರೆಗೆ ರಾಜ್ಯ ಸರಕಾರ ಮತ್ತೊಂದು ಅವಕಾಶ ಕಲ್ಪಿಸಿದೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.