Advertisement

ರೈತರ ಹಿತರಕ್ಷಣೆ ನೆಪದಲ್ಲಿ ಗ್ರಾಹಕರಿಗೆ ಬರೆ ಸಲ್ಲದು

12:21 AM Sep 16, 2024 | Team Udayavani |

ಕೇಂದ್ರ ಸರಕಾರದ ಹಣಕಾಸು ಖಾತೆ ಶುಕ್ರವಾರ ದಿಢೀರನೆ ಆಮದು ಮಾಡಿಕೊಳ್ಳಲಾಗುವ ಖಾದ್ಯ ತೈಲದ ಮೇಲೆ ಕಸ್ಟಮ್ಸ್‌ ಸುಂಕವನ್ನು ಹೆಚ್ಚಿಸಿದ ಪರಿಣಾಮ ಗ್ರಾಹಕರಿಗೆ ಬೆಲೆ ಹೆಚ್ಚಳದ ಬಿಸಿ ತಟ್ಟಲಾರಂಭಿಸಿದೆ. ಕೇಂದ್ರ ಸರಕಾರ ಈ ಸಂಬಂಧ ಆದೇಶ ಹೊರಡಿಸುತ್ತಿದ್ದಂತೆಯೇ ದೇಶಾದ್ಯಂತ ವಿವಿಧ ಖಾದ್ಯ ತೈಲಗಳ ಬೆಲೆ ಒಮ್ಮೆಲೇ ಏರಿಕೆಯಾಗಿದ್ದು, ಜನಸಾಮಾನ್ಯರು ಹೈರಾಣಾಗಿದ್ದಾರೆ. ಸದ್ಯ ದೇಶದಲ್ಲಿ ಹಬ್ಬಗಳ ಋತು ಆರಂಭವಾಗಿದ್ದು, ಇದರ ನಡುವೆಯೇ ಸರಕಾರದ ಈ ನಿರ್ಧಾರ ಜನಸಾಮಾನ್ಯರ ಮೇಲಣ ಹೊರೆಯನ್ನು ಇನ್ನಷ್ಟು ಹೆಚ್ಚುವಂತೆ ಮಾಡಿದೆ.

Advertisement

ವಿಶ್ವದಲ್ಲಿಯೇ ಅತೀ ದೊಡ್ಡ ಖಾದ್ಯ ತೆಲ ಆಮದುದಾರ ರಾಷ್ಟ್ರವಾಗಿರುವ ಭಾರತದಲ್ಲಿ ತೈಲ ಬೀಜ ಉತ್ಪಾದನೆಯನ್ನು ಹೆಚ್ಚಿಸುವುದರ ಜತೆಯಲ್ಲಿ ಉತ್ಪಾದನೆಗೂ ಆದ್ಯತೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ನಿರಂತರವಾಗಿ ಪ್ರಯತ್ನ ನಡೆಸುತ್ತಲೇ ಬಂದಿದೆ. ಹೀಗಾಗಿ ರೈತರು ಇತ್ತೀಚಿನ ವರ್ಷಗಳಲ್ಲಿ ಒಂದಿಷ್ಟು ಹೆಚ್ಚಿನ ಸಂಖ್ಯೆಯಲ್ಲಿ ತೈಲ ಬೀಜ ಬೆಳೆಯಲು ಆಸಕ್ತಿ ತೋರತೊಡಗಿದ್ದಾರೆ. ಆದರೆ ಇದೇ ವೇಳೆ ವಿದೇಶದಿಂದ ನಿರಂತರವಾಗಿ ಖಾದ್ಯ ತೈಲದ ಆಮದು ಮುಂದುವರಿದಿರುವ ಪರಿಣಾಮವಾಗಿ ದೇಶದಲ್ಲಿ ಖಾದ್ಯ ತೈಲ ಬೆಲೆ ಹೆಚ್ಚಿನ ಏರಿಳಿತ ಕಾಣದೆ ಯಥಾಸ್ಥಿತಿ ಕಾಯ್ದುಕೊಂಡಿತ್ತು. ಇದರ ಪರಿಣಾಮ ದೇಶೀಯವಾಗಿ ಉತ್ಪಾದನೆಯಾಗುತ್ತಿರುವ ಖಾದ್ಯ ತೈಲದ ಬೆಲೆ ಇಳಿಕೆಯ ಹಾದಿ ಹಿಡಿದಿತ್ತು. ಇದರಿಂದ ತೈಲ ಬೀಜ ಬೆಳೆಗಾರರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಬೆಲೆ ಲಭಿಸದೆ ಒಂದಿಷ್ಟು ಸಂಕಷ್ಟದ ಪರಿಸ್ಥಿತಿ ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ಹಣಕಾಸು ಖಾತೆ ಖಾದ್ಯ ತೈಲ ಬೆಲೆ ನಿರ್ವಹಣೆ ಮತ್ತು ದೇಶದ ರೈತರ ಹಿತವನ್ನು ಮುಂದಿಟ್ಟು ದಿಢೀರನೆ ವಿದೇಶದಿಂದ ಆಮದು ಮಾಡಿಕೊಳ್ಳಲಾಗುವ ಕಚ್ಚಾ ತಾಳೆ, ಸೋಯಾಬೀನ್‌ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಕಸ್ಟಮ್ಸ್‌ ಸುಂಕವನ್ನು ಶೇ. 20ರಷ್ಟು ಹೆಚ್ಚಿಸಿದ್ದರೆ, ಸಂಸ್ಕರಿಸಿದ ತಾಳೆ, ಸೋಯಾಬೀನ್‌ ಮತ್ತು ಸೂರ್ಯಕಾಂತಿ ಎಣ್ಣೆ ಮೇಲಿನ ಕಸ್ಟಮ್ಸ್‌ ಸುಂಕವನ್ನು ಶೇ. 12.5ರಿಂದ ಶೇ. 32.5ಕ್ಕೆ ಏರಿಕೆ ಮಾಡಿದೆ. ಖಾದ್ಯ ತೈಲದ ಮೇಲೆ ಆಮದು ಸುಂಕ ಹೆಚ್ಚಿಸಿರುವ ಪರಿಣಾಮ ದೇಶದಲ್ಲಿ ಬೇಡಿಕೆ ಒಂದಿಷ್ಟು ಕಡಿಮೆಯಾಗಿ, ವಿದೇಶದಿಂದ ಆಮದು ಮಾಡಿಕೊಳ್ಳಲಾಗುವ ಖಾದ್ಯ ತೈಲದ ಪ್ರಮಾಣವೂ ಕುಸಿಯಲಿದೆ. ಇದರ ಪರಿಣಾಮವಾಗಿ ದೇಶೀಯ ಖಾದ್ಯ ತೈಲಕ್ಕೆ ಬೇಡಿಕೆ ಕುದುರಿ, ಬೆಳೆಗಾರರಿಗೆ ಹೆಚ್ಚಿನ ಬೆಲೆ ಲಭಿಸಲಿದೆ ಎಂಬ ಲೆಕ್ಕಾಚಾರ ಕೇಂದ್ರ ಸರಕಾರದ್ದಾಗಿದೆ.

ಆದರೆ ರೈತರ ಹಿತರಕ್ಷಣೆಯ ನೆಪದಲ್ಲಿ ಗ್ರಾಹಕರ ಮೇಲೆ ಬೆಲೆ ಹೆಚ್ಚದ ಹೊರೆಯನ್ನು ಹೇರುವ ಸರಕಾರದ ನಿರ್ಧಾರಕ್ಕೆ ಜನಸಾಮಾನ್ಯರಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ದೇಶೀಯ ತೈಲ ಬೀಜ ಬೆಳೆಗಾರರು ಮತ್ತು ಖಾದ್ಯ ತೈಲ ಉತ್ಪಾದಕರ ಹಿತ ಕಾಯ್ದುಕೊಳ್ಳುವುದರ ಜತೆಯಲ್ಲಿ ಗ್ರಾಹಕರ ಹಿತರಕ್ಷಣೆಯೂ ಸರಕಾರದ ಜವಾಬ್ದಾರಿಯಾಗಿದೆ. ಈರುಳ್ಳಿ, ಅಕ್ಕಿ, ಗೋಧಿ ಬೆಲೆ ಹೆಚ್ಚಳವಾದ ಸಂದರ್ಭದಲ್ಲಿ ಸರಕಾರ ರಿಯಾಯಿತಿ ಬೆಲೆಯಲ್ಲಿ ಇವುಗಳನ್ನು ಗ್ರಾಹಕರಿಗೆ ಪೂರೈಸುವ ವ್ಯವಸ್ಥೆ ಮಾಡಿತ್ತು. ಇದೇ ಮಾದರಿಯಲ್ಲಿ ಈಗ ಖಾದ್ಯ ತೈಲವನ್ನು ರಿಯಾಯಿತಿ ಬೆಲೆಯಲ್ಲಿ ಪೂರೈಸಲು ಸೂಕ್ತ ವ್ಯವಸ್ಥೆಯನ್ನು ಮಾಡಬೇಕು.

ತೈಲ ಬೀಜಗಳು ಮತ್ತು ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ನಿಟ್ಟಿನಲ್ಲಿ ಸರಕಾರದ ಪ್ರಯತ್ನ ಸ್ವಾಗತಾರ್ಹವಾದರೂ ಗ್ರಾಹಕರ ಮೇಲೆ ಹೆಚ್ಚಿನ ಹೊರೆ ಬೀಳುವಂತೆ ಮಾಡುವುದು ಸರ್ವಥಾ ಸರಿಯಲ್ಲ. ಈ ವಿಷಯದಲ್ಲಿ ಕೇಂದ್ರ ಸರಕಾರ ಒಂದಿಷ್ಟು ವಿವೇಚಿಸಿ, ಸೂಕ್ತ ನಿರ್ಧಾರಕ್ಕೆ ಬರುವ ಅಗತ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next