ಹೊಸದಿಲ್ಲಿ: ಮುಖ್ಯಮಂತ್ರಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ನವದೆಹಲಿಯಲ್ಲಿ ಬುಧವಾರ ಕರೆದಿರುವ ಸಭೆಗೆ ಆಗಮಿಸುವ ರಾಜ್ಯದ ಸಂಸದರಿಗೆ “ಐ ಫೋನ್’ ನೀಡುವ ಕುರಿತು ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಅವರು ವಿರೋಧ ವ್ಯಕ್ತ ಪಡಿಸಿದ್ದು ಜನಪ್ರತಿನಿಧಿಗಳಿಗೆ ಸರಕಾರ ಉಡುಗೊರೆ ನೀಡುವುದು ಒಳ್ಳೆಯ ಸಂಪ್ರದಾಯ ಅಲ್ಲ ಎಂದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಡಿವಿಎಸ್ ಸ್ಪಷ್ಟವಾಗಿ ನಾನು ಹೇಳುತ್ತೇನೆ ಉಡುಗೊರೆ ನೀಡುವುದು ಸರಿಯಲ್ಲ. ಕಳೆದ ಬಾರಿಯೇ ನಾನು ಉಡುಗೊರೆಯನ್ನು ತಿರಸ್ಕರಿಸಿದ್ದೆ. ಈ ಬಾರಿಯೂ ಹಿಂತಿರುಗಿಸುತ್ತೇನೆ ಎಂದರು.
ಐ ಫೋನ್‌ಗೆ ಖರ್ಚು ಮಾಡುವ ಹಣವನ್ನು ಬಡವರಿಗಾಗಿ ಬೇರೆ ಬೇರೆ ಕೆಲಸ ಕಾರ್ಯಗಳಿಗೆ ಬಳಸಲು ಸಲಹೆ ನೀಡಿದರು.
ಬಿಜೆಪಿ ಸಂಸದರೆಲ್ಲರೂ ಐ ಫೋನ್ ಬಗ್ಗೆ ವಿರೋಧ ವ್ಯಕ್ತ ಪಡಿಸಿದ್ದು ವಿವಾದ ಸ್ವರೂಪ ಪಡೆದ ಬೆನ್ನಲ್ಲೇ ಮುಖ್ಯಮಂತ್ರಿ ಎಚ್. ಡಿ.ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದು, ಐ ಫೋನ್ ಬಗ್ಗೆ ಮಾಹಿತಿ ಇಲ್ಲ. ನಮ್ಮ ಕಚೇರಿಯಿಂದ ಕೊಡಲು ನಾನಂತೂ ಸೂಚನೆ ಕೊಟ್ಟಿಲ್ಲ. ನನ್ನ ಗಮನಕ್ಕೂ ಬಂದಿಲ್ಲ. ಅಧಿಕೃತವಾಗಿ ಕೊಡಲಾಗಿ ದೆಯೋ ಅಥವಾ ಅನಧಿಕೃತವಾಗಿ ಕೊಟ್ಟಿರುವುದೋ ಗೊತ್ತಿಲ್ಲ ಎಂದಿದ್ದಾರೆ.
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯಿಸಿ, “ಐ ಫೋನ್ ನಾನೇ ಕೊಟ್ಟಿದ್ದೇನೆ. ವೈಯಕ್ತಿಕವಾಗಿ ಹೃದಯ ಶ್ರೀಮಂತಿಕೆಯಿಂದ ಸಂಸದರಿಗೆ, ರಾಜ್ಯ ಸಭೆ ಸದಸ್ಯರಿಗೆ ಕೊಟ್ಟಿದ್ದೇನೆ. ಇದು ತಪ್ಪೇ? ಕಳೆದ ವರ್ಷವೂ ಕೊಟ್ಟಿದ್ದೆ ಎಂದು ಸಮರ್ಥಿಸಿಕೊಂಡಿದ್ದಾರೆ. ಸಂಸದರಿಗೆ ತ್ವರಿತವಾಗಿ ಮಾಹಿತಿ ತಲುಪಲಿ ಎಂದು ತಲಾ 50 ಸಾವಿರ ರೂ. ವೆಚ್ಚದಲ್ಲಿ ಐ ಫೋನ್ ಮತ್ತು ಬ್ಯಾಗ್ ಉಡುಗೊರೆಯಾಗಿ ನೀಡಿದ್ದೇನೆ. ಒಳ್ಳೆಯ ಉದ್ದೇಶದಿಂದ ಈ ಕೆಲಸ ಮಾಡಿದ್ದೇನೆ. ಕೆಲವರು ಐ ಫೋನ್ ಹಿಂತಿರುಗಿಸಿದ್ದಾರೆ ಎಂದು ತಿಳಿಸಿದ್ದಾರೆ.
ಬಿಜೆಪಿ ರಾಜ್ಯಸಭೆ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ನೇರವಾಗಿಯೇ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಗೆ ಪತ್ರ ಬರೆದು ಐಫೋನ್ ಔಚಿತ್ಯವೇನು ಎಂದು ಪ್ರಶ್ನಿಸಿದ್ದರು.