Advertisement

ಚುನಾವಣೆಯ ಗಡಿಬಿಡಿ ಜತೆಗೆ ಮಳೆಗಾಲದ ಸಿದ್ಧತೆಯ ಅನಿವಾರ್ಯತೆ

12:47 PM May 14, 2018 | Team Udayavani |

ನಗರ : ವಿಧಾನಸಭಾ ಚುನಾವಣೆಯ ಭರಾಟೆ ಮುಕ್ತಾಯದ ಹಂತಕ್ಕೆ ತಲುಪುತ್ತಿದ್ದಂತೆ ಆಡಳಿತ ವ್ಯವಸ್ಥೆ ಮುಂದಿನ ಕಾರ್ಯಗಳಿಗೆ ಸಜ್ಜುಗೊಳ್ಳುತ್ತಿದೆ. ಮಳೆಗಾಲದ ಪೂರ್ವ ಸಿದ್ಧತೆಯಲ್ಲಿ ತ್ವರಿತವಾಗಿ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಮುಂಗಾರು ಪೂರ್ವದಲ್ಲಿ ಪ್ರತಿಯೊಂದು ಆಡಳಿತ ಸಂಸ್ಥೆಗಳಿಗೂ ಪ್ರಥಮ ಎದುರಾಳಿ ಮಳೆರಾಯ. ಈ ದಿಸೆಯಲ್ಲಿ ಜಿಲ್ಲಾಡಳಿತವೂ ತಮ್ಮ ಅಧೀನ ಇಲಾಖೆಗಳಿಗೆ ಮಳೆಗಾಲದ ಸಮಸ್ಯೆಗಳನ್ನು ಎದುರಿಸಲು ಸಿದ್ಧಗೊಳ್ಳುವಂತೆ ಆದೇಶಿಸಬೇಕಾಗಿದೆ. 

Advertisement

ಮಳೆಗಾಲದಲ್ಲಿ ಎದುರಾಗುವ ಸಮಸ್ಯೆ, ನಷ್ಟ – ಸಂಕಷ್ಟಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲು ಮಾನವ ವ್ಯವಸ್ಥೆಯಿಂದ ಸಾಧ್ಯವಿಲ್ಲ. ಯಾಕೆಂದರೆ ಅದು ಪ್ರಕೃತಿಯ ವೈಶಿಷ್ಟ್ಯ. ಆದರೆ ಆಡಳಿತ ವ್ಯವಸ್ಥೆ ಚುರುಕಾಗಿದ್ದರೆ ಕೆಲವೊಂದು ಸಮಸ್ಯೆಗಳ ತೀವ್ರತೆಯನ್ನು ಕಡಿಮೆ ಮಾಡಬಹುದು. ಮಳೆಗಾಲ ಪ್ರಕೃತಿಯ ನಿರಂತರ ಪ್ರಕಿೃಯೆಯಲ್ಲಿ ಒಂದಾಗಿರುವುದರಿಂದ ಪೂರ್ವ ಸಿದ್ದತೆ ಮಾಡಿಕೊಳ್ಳುವುದಕ್ಕೆ ಯಾವುದೇ ತೊಂದರೆಯಿಲ್ಲ.

ಸಮಸ್ಯೆ ದೂರ ಮಾಡಲು
ರಸ್ತೆ, ಫೂಟ್‌ಪಾತ್‌ ನಿರ್ಮಾಣದ ಸಂದರ್ಭದಲ್ಲಿ ಮಳೆನೀರು ಹೋಗಲು ಚರಂಡಿಯನ್ನೂ ನಿರ್ಮಿಸುವುದು, ಹಾಲಿ ಚರಂಡಿ, ಮೋರಿಗಳನ್ನು ಶುಚಿಗೊಳಿಸುವುದು, ವಿದ್ಯುತ್‌ ತಂತಿ ಹಾದು ಹೋಗುವ ಕಡೆಗಳಲ್ಲಿ ಮರಗಳ ರೆಂಬೆ ಕತ್ತರಿಸುವುದು ಮೊದಲಾದ ಪೂರ್ವಭಾವಿ ಕೆಲಸಗಳನ್ನು ಸಮರ್ಪಕವಾಗಿ ನಿಭಾಯಿಸಿದಲ್ಲಿ ಸ್ವಲ್ಪಮಟ್ಟಿನ ಸಮಸ್ಯೆಗಳನ್ನು ದೂರ ಮಾಡಬಹುದು.

ಹೆದ್ದಾರಿಯಲ್ಲಿ ಚರಂಡಿಯೇ ಇಲ್ಲ
ಮಾಣಿ -ಮೈಸೂರು ರಾಜ್ಯ ಹೆದ್ದಾರಿ ಕಾಮಗಾರಿಯು ಪರ್ಣಗೊಂಡು ವರ್ಷ ಮೂರುಕಳೆದಿದೆ. ಆದರೆ ಈ ರಸ್ತೆಯ ಉದ್ದಕ್ಕೂ ಎಲ್ಲಿಯೂ ಸಮರ್ಪಕ ಚರಂಡಿಯ ವ್ಯವಸ್ಥೆ ಮಾಡಲಾಗಿಲ್ಲ. ಮಳೆನೀರು ರಸ್ತೆಯ ಮೇಲೆ ಹರಿಯುವುದು ಮಾಮೂಲು ಎಂಬಂತಾಗಿದೆ. ಇದರಿಂದ ರಸ್ತೆಯೂ ನೀರಿನೊಂದಿಗೆ ಸವೆತಕ್ಕೊಳಗಾಗಿ ಮಳೆಗಾಲ ಮುಗಿದಾಗ ಮತ್ತೆ ಮರುಡಾಮರೀಕರಣ ಮಾಡಬೇಕಾದ ಅವಶ್ಯಕತೆ ಕಂಡುಬರುತ್ತಿದೆ.

ಗ್ರಾಮಾಂತರದಲ್ಲಿ ವ್ಯಾಪಕ
ಗ್ರಾಮೀಣ ಪ್ರದೇಶಗಳಲ್ಲಂತೂ ಮಳೆಗಾಲದಲ್ಲಿ ಸಮಸ್ಯೆಗಳ ಸರಮಾಲೆಯೇ ಇರುತ್ತದೆ. ಒಂದು ದೊಡ್ಡ ಪ್ರಮಾಣದ ಮಳೆ ಬಂದರೂ ರಸ್ತೆಯ ಮೇಲೆ ಮರಗಳು ಬಿದ್ದಿರುತ್ತವೆ. ವಿದ್ಯುತ್‌ ಅಂತೂ ಒಮ್ಮೆ ಕೈ ಕೊಟ್ಟರೆ ಕೆಲವು ದಿನಗಳವರೆಗೂ ಸಂಬಂಧ ಪಟ್ಟ ಇಲಾಖೆ ಸರಿಪಡಿಸುವುದಿಲ್ಲ ಎಂಬ ಆರೋಪಗಳಿವೆ. ಇನ್ನು ಗ್ರಾಮೀಣ ಭಾಗದಲ್ಲಿ ಮೋರಿಗಳ ಸಂಖ್ಯೆಯೂ ಅಧಿಕವಾಗಿದ್ದು, ಸಾಮಾಜಿಕ ಕಳಕಳಿಯಿಂದ ಸಾರ್ವಜನಿಕರೇ ಸ್ವಚ್ಛಪಡಿಸಿದರೆ ಮಾತ್ರ ಸಮಸ್ಯೆ ಕಡಿಮೆಯಾಗಬಹುದು.

Advertisement

ಅಭಿವೃದ್ಧಿ ಕೆಲಸಗಳಿಗೆ ಟೆಂಡರ್‌ ಕೊಡುವವರೆಗೆ ಮಾತ್ರ ಜನಪ್ರತಿನಿಧಿಗಳು, ಅಧಿಕಾರಿಗಳಿರುತ್ತಾರೆ. ಟೆಂಡರ್‌ ಪಡೆದವರು ಮುಂದಾಲೋಚನೆಯಿಂದ ಕೆಲಸಗಳನ್ನು ಮಾಡುತ್ತಿಲ್ಲ. ಅನೇಕ ಕಡೆಗಳಲ್ಲಿ ಕೇವಲ ರಸ್ತೆ, ಫೂಟ್‌ಪಾತ್‌ಗಳನ್ನು ಮಾತ್ರ ನಿರ್ಮಿಸಲಾಗುತ್ತದೆ. ಸಮರ್ಪಕ ಚರಂಡಿ ವ್ಯವಸ್ಥೆಯ ಕುರಿತು ಯೋಜನೆಯನ್ನೇ ಮಾಡಿರುವುದಿಲ್ಲ. ಮಳೆಗಾಲ ಆರಂಭವಾದ ಮೇಲೆಯೇ ಇದರ ಪರಿಣಾಮ ತಿಳಿಯು ತ್ತದೆ. ಸದೂರದೃಷ್ಟಿಯನ್ನು ಹೊಂದಿರುವ ಅಧಿಕಾರವರ್ಗ, ಸಾರ್ವಜನಿಕ ಕೆಲಸದಲ್ಲಿ ಇಚ್ಚಾಶಕ್ತಿಯುಳ್ಳ ಜನಪ್ರತಿನಿಧಿಗಳಿದ್ದಲ್ಲಿ ಇಂತಹ ಕೆಲಸಗಳು ಸಾಧ್ಯ.

ಸಂಹಿತೆ ಅಡ್ಡಿ ಬರುವುದಿಲ್ಲ
ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಮೂಲ ಕೆಲಸಗಳನ್ನು ಮಾಡಲು ಯಾವುದೇ ಸಂಹಿತೆ ಅಡ್ಡಿ ಬರುವುದಿಲ್ಲ. ಚುನಾವಣೆ ಇಲ್ಲದ ಸಂದರ್ಭದಲ್ಲಿ ಜನಪ್ರತಿನಿಧಿಗಳ ಸಿದ್ಧತಾ ಸಭೆ ನಡೆಯುತ್ತದೆ. ಈ ಬಾರಿ ಇಂತಹ ಸಭೆ ನಡೆಸಲು ಸಾಧ್ಯವಾಗಿಲ್ಲ. ಇಲಾಖೆಗಳ ಅಧಿಕಾರಿಗಳಿಗೆ, ಸ್ಥಳೀಯಾಡಳಿತಗಳಿಗೆ ಮಳೆಗಾಲದ ಪೂರ್ವ ಸಿದ್ಧತೆಗಳನ್ನು ಕೈಕೊಳ್ಳಲು ಸೂಚಿಸಲಾಗುವುದು.
– ಎಚ್‌.ಕೆ. ಕೃಷ್ಣಮೂರ್ತಿ
ಸಹಾಯಕ ಕಮಿಷನರ್‌, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next