Advertisement
ಆ ದಿನ ಊಟಕ್ಕೂ ಮೊದಲು ಅವರು ನಮಗೆಲ್ಲ ಜೊತೆಯಾಗಿ ಒಂದು ಸೆಷನ್ ತೆಗೆದುಕೊಂಡಿದ್ದರು. ಅದರಲ್ಲಿ ನಾವು ಹೇಗೆ ಹೊಸಹೊಸ ಆವಿಷ್ಕಾರಗಳ ಬಗ್ಗೆ ಚಿಂತಿಸಬೇಕೆಂದು ಒತ್ತಿ ಹೇಳಿದ್ದರು. ಆವಿಷ್ಕಾರಕ್ಕೆ ಅವರು ಕೊಟ್ಟ ಉದಾಹರಣೆ ಚೆನ್ನಾಗಿತ್ತು! ಶ್ರೀಮಂತ ಅರಬ್ ರಾಷ್ಟ್ರಗಳಲ್ಲಿ ಅತಿ-ಐಷಾರಾಮಿ ಕಾರುಗಳು ಪ್ರತಿಯೊಬ್ಬರಲ್ಲೂ ಬೇಕಾಬಿಟ್ಟಿಯಾಗಿ ಇರುತ್ತವಂತೆ. ಅವನ್ನು ಅವರು ಆಗಾಗ ಮಾರುತ್ತಲೂ ಇರುತ್ತಾರಂತೆ. ಅದನ್ನು ಮಾರುವ ಯಾರ್ಡುಗಳು ಮರುಭೂಮಿಯ ಅನಂತವಿಸ್ತಾರದಲ್ಲಿ ಕಿಲೋಮೀಟರುಗಟ್ಟಲೆ ಹರಡಿದ್ದು, ನಮ್ಮಲ್ಲಿ ಸೆಕೆಂಡ್‌ಹ್ಯಾಂಡ್ ಕಾರುಗಳನ್ನು ಮಾರಿದಂತೆ ಮಾರಲು ಅಲ್ಲಿ ಜನರಿಲ್ಲವಂತೆ. ಸುಡೊಕುವಿನ ಚಚ್ಚೌಕಗಳಂತೆ ಅವನ್ನು ಜೋಡಿಸಿಟ್ಟು ((Matrix) ಆಯಾ ಸಾಲು (row)/ಕಂಭ (column)ದ ಸಂಖ್ಯೆಯಿಂದ ಅವನ್ನು ಗುರುತಿಸಬಹುದಷ್ಟೆ. ಇಲ್ಲಿ ಮಾಡಬೇಕಾದ ಆವಿಷ್ಕಾರವೆಂದರೆ ನಮ್ಮ ಮೊಬೈಲನ್ನು ಯಾವುದೇ ಕಾರಿನತ್ತ ಹಿಡಿದರೆ ಅಕ್ಷಾಂಶ, ರೇಖಾಂಶವನ್ನು ಗುರುತಿಸಿ, ಮೊಬೈಲಿನ orientation ಸಹಾಯದಿಂದ ಕಾರನ್ನು ಗುರುತಿಸಿ ಅದರ ಎಲ್ಲ ವಿವರಗಳನ್ನು ಪರದೆಯ ಮೇಲೆ ಮೂಡಿಸುವುದು. ನೋಡಿದವನು ಇಷ್ಟಪಟ್ಟರೆ ಅಲ್ಲೇ ಪರದೆಯನ್ನು ಮುಟ್ಟಿ ದುಡ್ಡು ಕೊಡುವುದು, ಕಾರು ಒಯ್ಯುವುದು- ಇತ್ಯಾದಿಗಳ ಬಗ್ಗೆ ಬಹಳ ಉತ್ತೇಜಕವಾಗಿ ಅವರು ಭಾಷಣ ಮಾಡಿದ್ದರು.
Related Articles
Advertisement
ನಮ್ಮ ಚರ್ಚೆ ಸುಮಾರು ಮುಕ್ಕಾಲು ಗಂಟೆ ನಡೆಯಿತು. ಅವರು ವೈಯಕ್ತಿಕವಾಗಿ ಸರಳ ಮನುಷ್ಯ. ಬಹು ಸಜ್ಜನ. ಅವರಿಗೆ ನನ್ನನ್ನು ಹೊಸಕಿ ವಾದವನ್ನು ಗೆಲ್ಲುವ ಆಸೆಯೇನೂ ಇರಲಿಲ್ಲ. ಆದರೆ, ಅವರು ಉತ್ತರಿಸಲು ಪ್ರಯತ್ನಿಸಿದರು. ನೀನೆನ್ನುವುದನ್ನು ನಿರಾಕರಿಸುವಂತಿಲ್ಲ. ನಾನು ವೈಯಕ್ತಿಕವಾಗಿ ಸರಳವಾಗಿರುತ್ತೇನೆ. ಐಷಾರಾಮ ನನ್ನ ಆಯ್ಕೆಯಲ್ಲ’ ಎಂದು ಹೇಳಿ ನನ್ನ ಕಾವನ್ನು ಶಮನಗೊಳಿಸಲು ಯತ್ನಿಸಿದರು. ಅದಕ್ಕೆ ನಾನೆಂದೆ, “”ನೀವೊಂದು ಪ್ರಮುಖ ಶಾಖೆಯ ಮುಖ್ಯಸ್ಥರು. ನಿಮ್ಮ ಆಣತಿಯಂತೆ ಕೋಟ್ಯಂತರ ರೂಪಾಯಿ ವ್ಯಯವಾಗುತ್ತದೆ; ನೀವು ಮೇಲೆ ವಿವರಿಸಿದ ದಿಕ್ಕಿನಲ್ಲಿ ಗಮನಹರಿಸಿದರೆ ಆ ದುಡ್ಡು ಅಲ್ಲಿಗೆ ಹರಿಯುತ್ತದೆ. ನಿಮ್ಮ ಆ ಶಕ್ತಿಯೆದುರು ನಿಮ್ಮ ವೈಯಕ್ತಿಕ ಜೀವನದ ಸರಳತೆ ನಗಣ್ಯವಲ್ಲವೆ? ಇದು ದೇಶದ ಪ್ರಧಾನಿ ನಾನು ಹಳೆಯ ಬಟ್ಟೆ ಬಳಸುತ್ತೇನೆ- ಅಂದಂತೆ. ಇಡೀ ದೇಶದ ಆರ್ಥಿಕ ವ್ಯವಸ್ಥೆ ಅವನ ಕೈಯಲ್ಲಿದೆ. ಅವನ ವೈಯಕ್ತಿಕ ದೃಷ್ಟಿಕೋನ, ಸದುದ್ದೇಶಗಳು ಪ್ರಧಾನಿ ಸ್ಥಾನದಿಂದಲೂ ಕಂಡರಷ್ಟೇ ದೇಶಕ್ಕೆ ಅದು ಒಳಿತು ಮಾಡಬಲ್ಲುದಲ್ಲವೆ?” ಇಷ್ಟು ಹೇಳಿ ನಾನು ಮಾತು ನಿಲ್ಲಿಸಿದೆ. “”ನಾನು ಇದರ ಬಗ್ಗೆ ಯೋಚಿಸುತ್ತೇನೆ” ಎಂದು ಅವರು ಮೌನವಾದರು. ಮುಂದಿನ ಒಂದೂವರೆ ವರ್ಷ ಅವರು ನನ್ನಲ್ಲಿ ಈ ಬಗ್ಗೆ ಉತ್ತರಿಸಲಿಲ್ಲ. ಅವರ ಬಳಿ ಉತ್ತರ ಇರುವುದು ಸಾಧ್ಯವೂ ಇರಲಿಲ್ಲ. ನನ್ನನ್ನು ಕಂಡಾಗಲೆಲ್ಲ “”ನಿಮ್ಮ ತೋಟಕ್ಕೊಮ್ಮೆ ಬರಬೇಕಿದೆ” ಎನ್ನುತ್ತಿದ್ದರು.
ಅವರು ಮುಂದೆ ಬೇರೆ ಕಾರಣಗಳಿಗೆ ಆ ಕಂಪೆನಿ ಬಿಟ್ಟರು. ಹೋಗುವ ಮೊದಲು ಅವರ ಸ್ವಂತ ಆಸಕ್ತಿಯಿಂದ ನಮ್ಮ ತೋಟಕ್ಕೆ ಪತ್ನಿàಸಮೇತರಾಗಿ ಬಂದು ನಮ್ಮ ಕಾಡು, ತೋಟಗಳಲ್ಲೆಲ್ಲ ಸುತ್ತಾಡಿದರು. ಕಾಡಿನ ಬಗ್ಗೆ ವಿವರಿಸುತ್ತಿ¨ªಾಗ “ಈ ಕಾಡಿನ ಪ್ರತಿಯೊಂದು ಜೀವಿಗೂ ಬೇರೊಂದರ ಜೊತೆ ಸಂಬಂಧವಿದೆ’ ಎಂದು ನಾನು ಹೇಳಿದೆ. “ಅದು ಹೇಗೆ?’ ಜ್ಞಾನಾಕಾಂಕ್ಷಿಯಾಗಿದ್ದ ಅವರು ಆಸಕ್ತ ವಿದ್ಯಾರ್ಥಿಯಂತೆ ಕೇಳಿದರು. ಭಯಾನಕ ರೋಮಗಳನ್ನು ಹೊತ್ತ ಬಣ್ಣಬಣ್ಣದ ಕಂಬಳಿಹುಳವೊಂದು ನೊರೆಕಾಯಿ ಎಂಬ (ಸೋಪ್ ನಟ್) ಮರಜಾತಿಯ ಸಣ್ಣಗಿಡದ ಎಲೆಗಳನ್ನು ನಮ್ಮೆದುರೇ ಭಕ್ಷಿಸುತ್ತಿತ್ತು. ನೋಡಿ “ಈ ಕಂಬಳಿಹುಳಗಳು ಎಲೆಯನ್ನು ಬೇಕಾದಷ್ಟು ಕಬಳಿಸಿ ಕೋಶಾವಸ್ಥೆಗೆ ಜಾರುತ್ತವೆ. ಅವು ಚಿಟ್ಟೆ/ಪತಂಗಗಳಾದ ಬಳಿಕ ಬೇರೆಯೇ ಜಾತಿಯ ಸಸ್ಯಗಳಿಗೆ ಪರಾಗಸ್ಪರ್ಶದ ಸಹಾಯ ಮಾಡುತ್ತವೆ ಹೊರತು ತಾವು ಭಕ್ಷಿಸಿದ್ದಕ್ಕಲ್ಲ. ಆ ಚಿಟ್ಟೆಗಳನ್ನು ತಿನ್ನಲು ಹಲವು ಜಾತಿಯ ಹಲ್ಲಿ, ಓತಿ, ಅರಣೆಯಂಥ ಪ್ರಾಣಿಗಳು ಸದಾ ಹೊಂಚುಹಾಕುತ್ತಿರುತ್ತವೆ- ಎಷ್ಟೆಲ್ಲ ಜೀವಿಗಳು ಒಂದಕ್ಕೊಂದು ಸಂಬಂಧಿಸಿದಂತಾಯಿತು!’ ಎಂದು ನನಗೆ ತಿಳಿದಿದ್ದ ಮಾಹಿತಿಗಳಿಂದ ಅವರಿಗೆ ಹೇಳಿದೆ. ಅದೆಲ್ಲ ತಿಳಿದಿರದ ಅವರು ರೋಮಾಂಚನಗೊಂಡರು. ನನಗೊಂದು ವಿಚಿತ್ರ ವಿಷಣ್ಣತೆ ಉಂಟಾಯಿತು. ಹತ್ತಾರು ದೇಶಗಳನ್ನು ಸುತ್ತಾಡಿದ ಮನುಷ್ಯ, ನನಗಿಂತ ಒಂದೂವರೆ ಪಟ್ಟು ವಯಸ್ಸಾಗಿರುವವರು, ದೇಶದ ಸಂಪರ್ಕ ಕ್ರಾಂತಿಯನ್ನು ಹತ್ತಿರದಿಂದ ನೋಡಿದವರಿಗೆ ಅಲಸಂಡೆಯನ್ನು ಹಸಿಯಾಗಿ ಗಿಡದಿಂದ ಕೊಯ್ದು ತಿಂದು ಗೊತ್ತಿರಲಿಲ್ಲ; ಬೆಂಡೆ ಗಿಡವನ್ನು ನೋಡಿರಲಿಲ್ಲ; ಯಾವ ಜೀವವ್ಯವಸ್ಥೆ ನಮ್ಮನ್ನು ಪೋಷಿಸುತ್ತಿದೆಯೋ ಅದನ್ನು ಅವರು ತಿಳಿದಿರಲಿಲ್ಲ. ಹಾಗಾದರೆ ನಮ್ಮ ಜೀವನ ನಮಗೆ ಕಲಿಸುತ್ತಿರುವುದೇನು? ವ್ಯಾಪಾರೀ ವ್ಯವಸ್ಥೆಯನ್ನು ಬೆಳೆಸುವುದಷ್ಟನ್ನೆಯೆ? ನನ್ನ ಮೇಲಧಿಕಾರಿಯ ಉದಾಹರಣೆಗೆ ಅಪವಾದವಾಗಿ ವಾರಾಂತ್ಯದಲ್ಲಿ ಪ್ರಕೃತಿಪ್ರೇಮ ನಡೆಸುವ, ಜೀವಜಗತ್ತಿನ ಥಿಯರಿಯನ್ನು ಬಲ್ಲ ಒಂದಷ್ಟು ಜನ ಉದ್ಯೋಗಸ್ಥರು ಇ¨ªಾರೆ, ನಿಜ. ಆದರೆ ಅವರ ವೃತ್ತಿಯು ಪ್ರಕೃತೀಪರವಾಗಿದೆಯೆ? ದಿನದ ಹೊತ್ತು ಅವರುಗಳು ನಡೆಸುವ ಉದ್ಯಮವು ನಾವು ಆಶ್ರಯಿಸುವ ಅನ್ನಾಹಾರ, ಅರಣ್ಯದಂತಹ ಮೂಲವಸ್ತುಗಳ ಬಗ್ಗೆ ಕಾಳಜಿಯನ್ನು ಹೊಂದಿದೆಯೆ? ಅವರ ವಾರದ ಕೆಲಸವು ವಾರಾಂತ್ಯದ ಹವ್ಯಾಸದೊಂದಿಗೆ ಹೊಂದಾಣಿಕೆ ಹೊಂದಿದೆಯೆ? ಎಂಬ ಪ್ರಶ್ನೆಗಳು ಅವರುಗಳ ಮುಂದಿವೆ.
ನಿಜಕ್ಕೆಂದರೆ ನನ್ನ ಮೇಲಧಿಕಾರಿ ಸೋತ ವಾದದಲ್ಲಿ ನಾನೂ ಸೋತಿದ್ದೆ. ನನ್ನನ್ನು ನಾನು ಮೊದಲು ಸೋಲಿಸಿದ್ದರಿಂದ ನನಗೆ ಅವರನ್ನು ಸೋಲಿಸುವುದು ಹೇಗೆಂದು ತಿಳಿದಿತ್ತು. ಅವರಿಗೆ ನಾನು ಕೇಳಿದ ಪ್ರಶ್ನೆಗಳು ನನಗೆ ನಾನೇ ಸತತ ಕೇಳುತ್ತಿದ್ದ ಪ್ರಶ್ನೆಗಳಾಗಿದ್ದವು. ಕೃಷಿಭೂಮಿಯ ಸರಳ ಸಮೃದ್ಧ ಜೀವನದ ಶ್ರೇಷ್ಠತೆಯೆದುರು ನನ್ನ ಐಟಿ ಉದ್ಯೋಗವನ್ನು ಮಿಗಿಲೆಂದು ಪ್ರೂವ್ ಮಾಡುವುದು ಹೇಗೆಂದು ನನಗೆ ತಿಳಿದಿರಲಿಲ್ಲ. ಅದು ಅವರಿಗೂ ತಿಳಿಯಲಿಲ್ಲ.
ನಮ್ಮೆಲ್ಲರಿಗೆ ಅನ್ನಾಹಾರಗಳನ್ನು ಪೂರೈಸುತ್ತಿರುವುದು ವೃತ್ತಿಪರ ಕೃಷಿಕರು, ಐಟಿಯಿಂದ ನಿನ್ನೆಮೊನ್ನೆ ಬಂದವರಲ್ಲ ಎನ್ನುವುದನ್ನು ನೆನಪಿನಲ್ಲಿಡಬೇಕಾಗಿದೆ. ಆದರೆ, ಐಟಿ ಅಥವಾ ಆಧುನಿಕ ಔದ್ಯೋಗಿಕ ಕೃಷಿ ಆಯ್ಕೆಮಾಡುವವರು ಗಮನಿಸಬಹುದಾದ ಮಾದರಿಗಳು ಭಾರತದಲ್ಲಿ ಹಲವಿವೆ. ಧೀರೇಂದ್ರ ಸೋನೆಜಿ ಮತ್ತು ಸ್ಮಿತಾ ದಂಪತಿ, ತಮಿಳುನಾಡಿನ ಶ್ರೀರಾಮ್ ಮತ್ತು ಕರ್ಪಗಂ, ನಾರಾಯಣ ರೆಡ್ಡಿ, ಎ. ಪಿ. ಚಂದ್ರಶೇಖರ, ಮೈಸೂರಿನ ಮಧು ಅಯ್ಯಂಗಾರ್ ದಂಪತಿ ನನಗೆ ತಿಳಿದಿರುವವರಲ್ಲಿ ಕೆಲವರು. ಒಂದೆಡೆ ಮನುಷ್ಯರನ್ನು ಅಚ್ಚಿನಲ್ಲಿ ಹೊಯ್ದು ಕಾರ್ಮಿಕರನ್ನಾಗಿ ಬದಲಿಸುವ ಶಿಕ್ಷಣ ವ್ಯವಸ್ಥೆ ಮುಂದುವರೆಯುತ್ತಿದ್ದಂತೆ ಇನ್ನೊಂದೆಡೆ ಇಷ್ಟವೃತ್ತಿಯನ್ನು ಆಯ್ದುಕೊಳ್ಳುವವರ ಈ ಪಟ್ಟಿ ಬೆಳೆಯಲಿದೆ.
ಅಮೆರಿಕದ ಕೃಷಿಕ ವೆಂಡೆಲ್ ಬೆರಿಯವರ ಕೃಷಿ-ಸಂಸ್ಕೃತಿಯ ಬಗೆಗಿನ ಲೇಖನಗಳನ್ನು ನಾನು ತುಂಬಾ ಇಷ್ಟಪಟ್ಟಿದ್ದೇನೆ. ಇಂಗ್ಲೆಂಡಿನ ಮಾರ್ಕ್ ಬಾಯ್ಲ… (Mark Boyle) ನಮ್ಮ ಆಧುನಿಕ ಆರ್ಥಿಕತೆಯನ್ನು ಅತ್ಯಂತ ಸೂಕ್ತವಾಗಿ ವಿಮರ್ಶಿಸಿ ಅದಕ್ಕೆ ಪರ್ಯಾಯವಾಗಿ ಪರಸ್ಪರರಿಗೆ ಮಾಡುವ ಉಪಕಾರದ ವಿನಿಮಯವನ್ನೇ ಆರ್ಥಿಕತೆಯನ್ನಾಗಿ ಬೆಳೆಸುವ ಬಗ್ಗೆ ಆಳ ಪ್ರಯೋಗಗಳನ್ನು ನಡೆಸಿದ್ದಾರೆ. ದುಡ್ಡೇ ಬಳಸದೆ ಎರಡು ವರ್ಷ ಜೀವಿಸಿ ಅದರ ಅನುಭವಗಳನ್ನು ದಾಖಲಿಸಿದ್ದಾರೆ. ಈಗವರು ದುಡ್ಡು ಮತ್ತು ಆಧುನಿಕ ತಂತ್ರಜ್ಞಾನ ಎರಡೂ ಇಲ್ಲದ ಹಳ್ಳಿ ಬದುಕನ್ನು ತಮ್ಮ ಪತ್ನಿಯೊಂದಿಗೆ ಜೀವಿಸುತ್ತಿದ್ದಾರೆ. ಮಾರ್ಕ್ ಚಿಂತನೆಗಳ ಅನುಷ್ಠಾನ ಕಷ್ಟವೇ ಇರಬಹುದು. ಆದರೆ ಅವರ ತಾತ್ವಿಕ ಸ್ಪಷ್ಟತೆ ಬಹಳ ವಿರಳವಾಗಿ ಸಿದ್ಧಿಯಾಗುವಂಥದ್ದು. ಆದ್ದರಿಂದ ಅವರ ವಿಶ್ಲೇಷಣೆಯನ್ನು, ಪುಸ್ತಕಗಳನ್ನು ಆಸಕ್ತರು ಹುಡುಕಿ ಓದಬಹುದು. ಜಾನ್ ಜಾಂಡಾಯಿ ಎಂಬ ಥಾಯ್ ಕೃಷಿಕ ಜೀವನದ ಸಂಕೀರ್ಣತೆಯಿಂದ ಹೊರಬಂದು ಸುಖವಾಗಿ ಜೀವಿಸುವುದರ ಬಗ್ಗೆ ಪ್ರಭಾವಶಾಲಿಯಾಗಿ ಮಾತನಾಡುತ್ತಾರೆ, ಕೆಲಸ ಮಾಡಿದ್ದಾರೆ.
ಒಂದು ವೇಳೆ ಸಸ್ಯಗಳು ಹೊರಬಿಡುವ, ನಾವು ಉಸಿರಾಡುವ ಗಾಳಿ ಕಣ್ಣಿಗೆ ಕಾಣುವಂತಿದ್ದರೆ ನಾವುಗಳು ಒಬ್ಬರಿಗೊಬ್ಬರು ಎಷ್ಟೊಂದು ಸಂಪರ್ಕದಲ್ಲಿದ್ದೇವೆ ಎಂಬುದು ನಮಗೆ ಸ್ಪಷ್ಟವಾಗುತ್ತಿತ್ತು. ನಮ್ಮ ಪರಿಸರ ಮತ್ತು ನಾವುಗಳು ಬೇರೆಬೇರೆಯಾಗಿಲ್ಲ. ಪ್ರತೀಕ್ಷಣ ನಮ್ಮ ದೇಹ ಸವೆದು ಪ್ರಕೃತಿಗೆ ಸೇರುತ್ತಿರುತ್ತದೆ, ಪರಿಸರದಿಂದ ಅಡಕವಸ್ತುಗಳನ್ನು ಪಡೆದು ಹೊಸತಾಗುತ್ತಿರುತ್ತದೆ. ಬದಲಾಗದಿರುವುದು ನಮ್ಮ ಜೆನೆಟಿಕ್ ಮೆಟೀರಿಯಲ್ ಮಾತ್ರ. ಅದೊಂದೇ ನಮ್ಮ “ನಮ್ಮತನ’. ಆದ್ದರಿಂದ ನಾವು ದುಡ್ಡಿಗಾಗಿ ಹೇಗುಹೇಗೋ ಜೀವಿಸಿ, “ಶುದ್ಧ’ ಎಂದು ನಾವು ನಂಬುವ ಆಹಾರವನ್ನು ಖರೀದಿಸಿ ಆರೋಗ್ಯವಾಗಿರಬಹುದೆಂದರೆ ಅದೊಂದು ಭ್ರಮೆಯಷ್ಟೆ. ಶುದ್ಧಗಾಳಿ, ನೀರು, ಆಹಾರ, ಒಂದಷ್ಟು ಹೊರಾಂಗಣ ಜೀವನ, ಕೆಲಸದೊಂದಿಗೆ ವ್ಯಾಯಾಮ, ಕುಟುಂಬ ಜೀವನ, ಬೆವರು, ಪಚನ, ಶೌಚ ಇತ್ಯಾದಿಗಳು ಮನುಷ್ಯನಿಗೆ ಅತ್ಯಗತ್ಯ. ಇದೇ ನಾವುಗಳು ಪ್ರಕೃತಿಯ ಮಡಿಲಿಗೆ ವಾಪಸು ಬರಬೇಕಾದ ಮೂಲಕಾರಣ. ನಾವು ಮರಳಬೇಕಾದ್ದೇನಿದ್ದರೂ ನಮ್ಮ ಜೀವನವನ್ನು ಚೆನ್ನಾಗಿಡಬೇಕೆಂಬ ಒಂದು ಸಾತ್ವಿಕ ಸ್ವಾರ್ಥಕ್ಕಾಗಿ. ಪ್ರಕೃತಿಯನ್ನು ಉಳಿಸಲೆಂದು ಅಲ್ಲ. ಪ್ರಕೃತಿಯು ನಾವು ಅಳಿದರೂ ಉಳಿಯಬಲ್ಲುದು. ಇದು ತಿಳಿದವರ ಹೇಳಿಕೆ, ನನ್ನ ನಂಬಿಕೆ.
ವಸಂತ ಕಜೆ