Advertisement

ಎಲ್ಲರನ್ನೂ ಖುಷಿ ಪಡಿಸುವುದು ಅಸಾಧ್ಯ

12:05 AM Feb 01, 2021 | Team Udayavani |

ಸದಾ ಟೀಕೆ – ಟಿಪ್ಪಣಿಗಳನ್ನು ಮಾಡುವುದು, ಉಚಿತ ಸಲಹೆಗಳನ್ನು ನೀಡುವುದು ಸಮಾಜದ ಒಂದು ವ್ಯಸನ. ಸಮಾಜ ಎಂದರೆ ಯಾರು – ನಾವು ಸೇರಿ ಸಮಾಜ. ಅನೇಕರಿಗೆ ಇತರರ ಕುರಿತಾದ ವಾದ – ಪ್ರತಿವಾದಗಳೇ ಸಂಭಾಷಣೆಯ ಹೂರಣ. ಈ ಮಾತು, ಟೀಕೆ, ಸಲಹೆಗಳಲ್ಲಿ ಬಹುತೇಕ ಭಾಗ ಒಂದು ಕಿವಿಯಿಂದ ತೂರಿ ಇನ್ನೊಂದು ಕಿವಿಯ ಮೂಲಕ ಹೊರ ಹೋಗುವಂಥವೇ. ಇದರ ಜತೆಗೆ ಇರಬೇಕಾದ ಇನ್ನೊಂದು ಎಚ್ಚರಿಕೆ ಎಂದರೆ ಲೋಕವನ್ನಿಡೀ ಮೆಚ್ಚಿಸಲು ಸಾಧ್ಯವಿಲ್ಲ ಎಂಬುದು. ಒಬ್ಬೊಬ್ಬರ ನಿರೀಕ್ಷೆ ಒಂದೊಂದು ತರಹ ಇರುತ್ತದೆ. ಎಲ್ಲರನ್ನೂ ಮೆಚ್ಚಿಸು ವುದಕ್ಕೆ ಸಾಧ್ಯವಿಲ್ಲ. ನಮ್ಮ ನಡೆ ನೇರವಾಗಿದೆ, ಋಜುವಾಗಿದೆ, ಪ್ರಾಮಾ ಣಿಕವಾಗಿದೆ ಎಂಬುದು ನಮ್ಮ ಆತ್ಮಸಾಕ್ಷಿಗೆ ಗೊತ್ತಿದ್ದರೆ ಅಂಜಬೇಕಿಲ್ಲ, ಅಳುಕಬೇಕಿಲ್ಲ; ಲೋಕದ ಮಾತಿನಂತೆ ನಡೆಯನ್ನು ಬದಲಾಯಿಸಬೇಕಾಗಿಲ್ಲ.

Advertisement

ಎರಡೂವರೆ ಸಾವಿರ ವರ್ಷಗಳ ಹಿಂದೆ ಈಸೋಪ ಹೇಳಿದ ಈ ಕಥೆಯನ್ನು ನೀವು ಕೇಳಿರಬಹುದು. ಆದರೂ ಇನ್ನೊಮ್ಮೆ…
ಅದೊಂದು ಗುಡ್ಡಗಾಡಿನ ಹಳ್ಳಿ. ಒಂದು ಶುಭ್ರ ಮುಂಜಾನೆ ಆ ಹಳ್ಳಿಯ ಅಪ್ಪ ಮತ್ತು ಮಗ ಮಾರುಕಟ್ಟೆಗೆ ಹೊರಟಿದ್ದರು, ಕತ್ತೆಯ ಜತೆಗೆ. ಸಂತೆಯಲ್ಲಿ ಕತ್ತೆಯನ್ನು ಮಾರುವುದಕ್ಕಿತ್ತು. ಅದನ್ನು ಚೆನ್ನಾಗಿ ಮೀಯಿಸಿ, ಅಲಂಕರಿಸಿ ನಡೆಸಿಕೊಂಡು ಹೊರಟಿದ್ದರು ಅವರು. ಯುವ ಕತ್ತೆ ಸದೃಢವಾಗಿತ್ತು, ಸಂತೆಯಲ್ಲಿ ಖಂಡಿತ ಒಳ್ಳೆ ಬೆಲೆಯಲ್ಲಿ ಮಾರಾಟ ವಾಗಬಲ್ಲ ಮಾಲು.

“ಅಪ್ಪ – ಮಗನೇ ಇರಬೇಕು – ಎಂಥಾ ಮೂರ್ಖರು! ಈ ಗುಡ್ಡಗಾಡು ರಸ್ತೆಯಲ್ಲಿ ಆ ಕತ್ತೆಯ ಮೇಲೆ ಸವಾರಿ ಮಾಡಿಕೊಂಡು ಹೋಗದೆ ನಡೆದು ಹೋಗುತ್ತಿದ್ದಾರಲ್ಲ’ ಎಂದು ಹಾದಿಬದಿಯಲ್ಲಿ ನಿಂತಿದ್ದ ಕೆಲವರು ಮಾತಾಡಿಕೊಳ್ಳುವುದು ಅಪ್ಪ-ಮಗನ ಕಿವಿಗೆ ಬಿತ್ತು. “ಹೌದಲ್ಲ’ ಎಂದುಕೊಂಡು ಅವರೀರ್ವರು ಕತ್ತೆಯನ್ನು ನಿಲ್ಲಿಸಿ ಅದರ ಮೇಲೇರಿ ಮುಂದಕ್ಕೆ ಹೊರಟರು.

ಸ್ವಲ್ಪ ದೂರ ಕಳೆಯುವಷ್ಟರಲ್ಲಿ ದಾರಿ ಬದಿ ಒಂದು ಚಹಾದಂಗಡಿ ಎದುರಾಯಿತು. ಕೆಲವು ಯುವಕರು ಕುಳಿತು ಲೋಕಾಭಿರಾಮ ಮಾತುಕತೆಯಲ್ಲಿದ್ದರು. “ಪಾಪದ ಕತ್ತೆ, ಇಬ್ಬರೂ ಅದರ ಮೇಲೇರಿದ್ದಾರಲ್ಲ, ಅದರ ಬೆನ್ನು ಮುರಿಯಬಹುದು’ ಎಂದು ಅವರಲ್ಲೊಬ್ಬ ಆಡಿಕೊಂಡುದು ಕಿವಿಗೆ ಬಿತ್ತು.

ಅಪ್ಪ – ಮಗನಿಗೆ ಅದು ಹೌದೆನ್ನಿಸಿತು. ಅಪ್ಪ ಕೆಳಕ್ಕಿಳಿದು ನಡೆಯ ತೊಡಗಿದ, ಮಗ ಸವಾರಿ ಮುಂದುವರಿಸಿದ.
ಕೊಂಚ ದೂರ ಕ್ರಮಿಸುವಷ್ಟು ಹೊತ್ತಿನಲ್ಲಿ ಹೊಲಕ್ಕೆ ಹೊರಟಿದ್ದ ರೈತ ಹೆಣ್ಮಕ್ಕಳ ಗುಂಪು ಎದುರಾಯಿತು. ಅದರ ನಡುವಿಂದ, “ಎಂಥ ಸೋಮಾರಿ! ವಯಸ್ಸಾದ ಅಪ್ಪನನ್ನು ನಡೆಯಲು ಬಿಟ್ಟು ತಾನು ಕತ್ತೆ ಸವಾರಿ ಮಾಡು ತ್ತಿದ್ದಾನಲ್ಲ’ ಎಂಬ ಮಾತು ತೂರಿಬಂದು ಅಪ್ಪ – ಮಗನ ಕಿವಿಗೆ ಬಿತ್ತು.

Advertisement

ಮಗ ನಾಚಿಕೊಂಡು ಕತ್ತೆಯಿಂದ ಕೆಳಗಿಳಿದ, ಅಪ್ಪ ಮೇಲೇರಿದ. ಪ್ರಯಾಣ ಮುಂದುವರಿಯಿತು. ಮತ್ತಷ್ಟು ದೂರ ಹೋಗುವಾಗ ದಾರಿಹೋಕರ ಗುಂಪು ಎದುರಾಯಿತು. ಅವರಲ್ಲಿಬ್ಬರು, “ಆ ಸ್ವಾರ್ಥಿ ಮುದಿಯನನ್ನು ನೋಡು, ಮಗನನ್ನು ನಡೆಯಲು ಬಿಟ್ಟು ತಾನು ಸವಾರಿ ಮಾಡುತ್ತಿರುವ ಚೆಂದವೇ’ ಎಂದರು. ಇದನ್ನು ಕೇಳಿ ಅಪ್ಪನೂ ಕೆಳಕ್ಕಿಳಿದ. ಸ್ವಲ್ಪ ದೂರ ಹೋದ ಬಳಿಕ ಅವರಿಬ್ಬರೂ ಕತ್ತೆಯನ್ನು ಮಾರ್ಗದ ಬದಿಯ ಮರಕ್ಕೆ ಕಟ್ಟಿ ಹಾಕಿ ಸ್ವಲ್ಪ ಹೊತ್ತು ವಿಶ್ರಮಿಸಿದರು.

ಸಂಜೆಯ ಹೊತ್ತಿಗೆ ಸಂತೆಯ ಹತ್ತಿರಕ್ಕೆ ಮುಟ್ಟುವಾಗ ಅಪ್ಪ ಮತ್ತು ಮಗನಿಗೆ ಏದುಸಿರು ಹತ್ತಿತ್ತು. ಅಪ್ಪ ಮುಂದಿದ್ದ, ಮಗ ಹಿಂದೆ. ಅವರಿಬ್ಬರ ನಡುವೆ, ಹೆಗಲ ಮೇಲೆ ಬಲವಾದ ಬಡಿಗೆಯೊಂದಕ್ಕೆ ಕೈಕಾಲು ಕಟ್ಟಿದ್ದ ಬಡಪಾಯಿ ಕತ್ತೆ ನೇತಾಡುತ್ತಿತ್ತು!
ಎಲ್ಲರ ಮಾತುಗಳನ್ನೂ ಕೇಳಿ, ಅದಕ್ಕೆ ತಕ್ಕಂತೆ ನಡೆಯುತ್ತ ಎಲ್ಲರನ್ನೂ ಖುಷಿಗೊಳಿಸಲು ಹೊರಟರೆ ಅಂತಿಮ ಫ‌ಲ ಹೀಗಿರುತ್ತದೆ.

(ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next