Advertisement

ಜಾತಿ ಸಂಘರ್ಷದಿಂದ ದೇಶ ಕಟ್ಟಲು ಅಸಾಧ್ಯ

04:47 PM Aug 09, 2022 | Team Udayavani |

ರಾಯಚೂರು: ಜಾತಿ, ಧರ್ಮಗಳ ಹೆಸರಿನಲ್ಲಿ ಸಂಘರ್ಷ ಮಾಡುವ ಮೂಲಕ ಯಾವ ದೇಶವನ್ನೂ ಕಟ್ಟಿದ ನಿದರ್ಶನಗಳಿಲ್ಲ. ನಾವೆಲ್ಲ ಒಂದೇ ಎಂಬ ಭಾವನೆಯಿಂದ ದೇಶಕ್ಕಾಗಿ ಶ್ರಮಿಸಿದಾಗ ಮಾತ್ರ ಸುಂದರ ರಾಷ್ಟ್ರ ನಿರ್ಮಾಣ ಸಾಧ್ಯವಾಗಲಿದೆ ಎಂದು ರಾಯಚೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ| ಹರೀಶ್‌ ರಾಮಸ್ವಾಮಿ ಅಭಿಪ್ರಾಯಪಟ್ಟರು.

Advertisement

ನಗರದ ಪಂಡಿತ್‌ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಸೋಮವಾರ 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ “ಸ್ವಾತಂತ್ರ್ಯ ಹೋರಾಟದ ನೆನಪುಗಳು’ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಾತಿ, ಕೋಮು ಗಲಭೆಗಳಿಂದ ಯುವ ಸಮೂಹ ವಿಚಲಿತಗೊಳ್ಳದೇ ಸರಿ-ತಪ್ಪು ಕೂಲಂಕಷವಾಗಿ ಅರಿತು ಮುನ್ನಡೆಯಬೇಕು. ಎಲ್ಲರೂ ಜಾತಿ, ಧರ್ಮ ಬದಿಗಿರಿಸಿ, ನಾವೆಲ್ಲ ಭಾರತೀಯರು ಒಂದೇ ಎಂಬ ಭಾವನೆ ಮೂಡಿದಾಗ ಮಾತ್ರ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು. ನಾವು ಓದಿದ್ದಷ್ಟೇ ಇತಿಹಾಸ ಎಂದುಕೊಳ್ಳುವುದಲ್ಲ. ನಾವು ಓದದೇ ಇರುವ ಸಾಕಷ್ಟು ವಿಷಯಗಳೂ ಇತಿಹಾಸ ಪಠ್ಯಗಳಲ್ಲಿ ದಾಖಲಾಗದಿರಬಹುದು. ಅಂಥ ಸಂಗತಿಗಳನ್ನು ಹೆಕ್ಕಿ ತೆಗೆದು ಜನರಿಗೆ ತಿಳಿಸುವ ಕೆಲಸವಾಗಬೇಕಿದೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳು ಗತಿಸಿದ್ದು, ಇದನ್ನು ದೊಡ್ಡ ಹಬ್ಬದ ರೀತಿ ಇಡೀ ದೇಶವೇ ಆಚರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದರು.

ಇತಿಹಾಸದ ಮರು ಅಧ್ಯಯನ ನಡೆಯಬೇಕಿದೆ. ಸ್ವಾತಂತ್ರ್ಯ ಹೋರಾಟದ ಕಿಚ್ಚು ದೇಶದ ಪ್ರತಿ ಹಳ್ಳಿ-ಹಳ್ಳಿಗೂ ವ್ಯಾಪಿಸಿತ್ತು. ಪ್ರತಿ ಹಳ್ಳಿಯಿಂದಲೂ ಹೋರಾಟಗಾರರು ಸಂಗ್ರಾಮದಲ್ಲಿ ಧುಮುಕಿದ್ದರು. ಧಾರವಾಡದಲ್ಲಿಯೇ ನೂರಕ್ಕಿಂತ ಹೆಚ್ಚು ಹೋರಾಟಗಾರರಿದ್ದಾರೆ. ಇನ್ನೂ ಎಷ್ಟೋ ಜನ ಎಲೆಮರೆ ಕಾಯಿಯಂತೆ ಉಳಿದಿರಬಹುದು. ಅಂಥವರನ್ನು ಗುರುತಿಸಿ- ಗೌರವಿಸುವ ಕೆಲಸವಾಗಬೇಕಿದೆ ಎಂದರು.

ಘಟನೆ ಸತ್ಯಾಸತ್ಯತೆ ಅರಿಯದೆ ಪರ-ವಿರೋಧ ಮಾಡುವುದು ಸರಿಯಲ್ಲ. ಯಾವುದೇ ವಿಷಯವಾಗಲಿ ಮೊದಲು ಪರೀಕ್ಷಿಸಿ ಗೊಂದಲ ನಿವಾರಿಸಿಕೊಂಡ ಬಳಿಕವೇ ಅದರ ಬಗ್ಗೆ ಮಾತನಾಡುವುದು ಸೂಕ್ತ. ಏನಾದರೂ ಪ್ರಶ್ನೆಗಳಿದ್ದಲ್ಲಿ ಉತ್ತರ ತಿಳಿಯುವ ಪ್ರಯತ್ನ ಮಾಡಬೇಕು. ನೇರವಾಗಿ ಮಾತನಾಡುವ ಶಕ್ತಿ ನಮಗಿಲ್ಲ. ಆದರೆ, ದೇಶಕ್ಕೆ ಅಗೌರವಾದರೆ, ಅನ್ಯಾಯವಾಗುತ್ತಿರುವುದು ನಿಜವಾದಲ್ಲಿ ಪ್ರತಿಯೊಬ್ಬರಿಗೂ ಪ್ರಶ್ನಿಸುವ ಹಕ್ಕಿದೆ ಎಂದರು.

Advertisement

ಕಲಬುರಗಿಯ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ರೋಹಿಣಾಕ್ಷ ಶಿರ್ಲಾಲು ಉಪನ್ಯಾಸ ಮಾಡಿ, ಇತಿಹಾಸದಲ್ಲಿ ಸ್ವಾತಂತ್ರÂದ ಹೋರಾಟದ ಬಗ್ಗೆ ತಪ್ಪು ವ್ಯಾಖ್ಯಾನ ಮಾಡಿದ್ದು, ಇಂದಿಗೂ ಅದನ್ನೇ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. ಕೇವಲ ಕಾಂಗ್ರೆಸ್‌ ಪಕ್ಷ ಹಾಗೂ ಮಹಾತ್ಮ ಗಾಂಧಿ  ಮಾತ್ರ ಸ್ವಾತಂತ್ರ್ಯ ಹೋರಾಟಗಾರರು ಎಂಬರ್ಥದಲ್ಲಿ ಇತಿಹಾಸ ಸೃಷ್ಟಿಸಿರುವುದು ವಿಪರ್ಯಾಸ. ಲಕ್ಷಾಂತರ ಜನರ ತ್ಯಾಗ-ಬಲಿದಾನದಿಂದಲೇ ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತ್ತು ಎನ್ನುವುದು ಎಲ್ಲರ ಮನಗಾಣಬೇಕಿದೆ ಎಂದರು.

ಕೇವಲ ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಸ್ವಾತಂತ್ರ್ಯ ಹೋರಾಟ ಎನ್ನುವುದು ಸರಿಯಲ್ಲ. ಡಚ್ಚರು, ಫ್ರೆಂಚರು, ಮೊಘಲರು, ಗ್ರೀಕರು ಹಾಗೂ ಹೈದ್ರಾಬಾದ್‌ ನಿಜಾಮರ ವಿರುದ್ಧವೂ ನಾನಾ ಹೋರಾಟಗಳು ನಡೆದಿದ್ದು, ಅವುಗಳನ್ನು ಸ್ವಾತಂತ್ರ್ಯ ಹೋರಾಟ ಎಂದೇ ಪರಿಗಣಿಸಬೇಕು ಎಂದರು.

ವಿವಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವಿದ್ಯಾರ್ಥಿಗಳು ಆರಂಭಿಸಿದ ಕೃಷ್ಣ-ತುಂಗಾ ಪ್ರಾಯೋಗಿಕ ಪತ್ರಿಕೆ ಬಿಡುಗಡೆ ಮಾಡಲಾಯಿತು. ರಾಯಚೂರು ವಿವಿ ಸಿಂಡಿಕೇಟ್‌ ಸದಸ್ಯ ಶಿವಬಸಪ್ಪ ಮಾಲಿಪಾಟೀಲ್‌ ಪ್ರಾಸ್ತಾವಿಕ ಮಾತನಾಡಿದರು.

ಸಿಂಡಿಕೇಟ್‌ ಸದಸ್ಯ ಸಂಜಯಕುಮಾರ ಮೂಥಾ, ಕುಲಸಚಿವ ಪ್ರೊ| ವಿಶ್ವನಾಥ ಎಂ., ಹಣಕಾಸು ಅಧಿಕಾರಿ ಪ್ರೊ| ಪಾರ್ವತಿ ಸಿ.ಎಸ್‌, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಜಿ.ಎಸ್‌. ಬಿರಾದಾರ್‌, ಜಗದೀಶ ವಕೀಲ, ಡಾ|ನಾಗರಾಜ ಬಾಲ್ಕಿ ಸೇರಿದಂತೆ ಇತರರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next