ಚಿಕ್ಕಬಳ್ಳಾಪುರ: ಪ್ರಜ್ವಲ್ ರೇವಣ್ಣ ಮುಂದಿನ ಚುನಾವಣೆಗೆ ನಿಲ್ಲುವುದು ಮುಖ್ಯವಲ್ಲ. ಕುಮಾರಣ್ಣ ಈ ರಾಜ್ಯದ ಮುಖ್ಯಮಂತ್ರಿಯಾಗುವುದು ಮುಖ್ಯ. ಕಾರ್ಯಕರ್ತರು ಖುಷಿಯಾಗಿರಬೇಕು. ಹೀಗಾಗಿ ಮುಂದಿನ 2018ರ ಚನಾವಣೆಯಲ್ಲಿ ಪಕ್ಷದ ಪರವಾಗಿ ರಾಜಾÂದ್ಯಂತ ಪ್ರಚಾರ ಮಾಡಲು ಬರುತ್ತೇನೆಂದು ನಟ ನಿಖೀಲ್ ಕುಮಾರಸ್ವಾಮಿ ತಿಳಿಸಿದರು.
ಹನುಮ ಜಯಂತಿ ಪ್ರಯುಕ್ತ ನಗರದ ಹೊರವಲಯದ ಸೋಲಾಲಪ್ಪ ದಿನ್ನೆಯಲ್ಲಿರುವ ವೀರಾಂಜನೇಯಸ್ವಾಮಿ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ನಾನು ರಾಜಕೀಯಕ್ಕೆ ಬರಬೇಕಾದ ಅನಿವಾರ್ಯತೆ ಸದ್ಯಕ್ಕಿಲ್ಲ. ನಮ್ಮ ತಂದೆ ಕುಮಾರಸ್ವಾಮಿ ಇದುವರೆಗೂ ನನ್ನ ಮೇಲೆ ಯಾವುದೇ ಒತ್ತಡ ಹೇರಿಲ್ಲ.
ಆದರೆ, ಕಾರ್ಯಕರ್ತರಲ್ಲಿ ನಾನು ರಾಜಕೀಯ ಕ್ಷೇತ್ರಕ್ಕೆ ಬರಬೇಕೆಂಬ ಅಭಿಲಾಷೆ ಹೆಚ್ಚಾಗಿದೆ. ನಾನು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಜನರ ಸೇವೆ ಮಾಡಬೇಕೆಂದು ಪಕ್ಷ ಕಾರ್ಯಕರ್ತರಲ್ಲಿ ಒತ್ತಾಸೆಯಾಗಿದೆ. ಆದರೆ ಈಗ ನಾನು ಚಲನಚಿತ್ರ ಕ್ಷೇತ್ರದಲ್ಲಿ ಹೆಚ್ಚು ತೊಡಿಗಿಸಿಕೊಳ್ಳಲಿದ್ದೇನೆ ಎಂದರು.
ಕುಮಾರಣ್ಣ ಸಿಎಂ: ಮುಂದಿನ ಬಾರಿ ಕುಮಾರಣ್ಣ ರಾಜ್ಯದ ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನ ಹಾಗೂ ಕಾರ್ಯಕರ್ತರ ಅಭಿಲಾಷೆ. ಇದು ರಾಜ್ಯದ ಜನರ ಆಸೆ ಕೂಡ ಆಗಿದೆ. ಹೀಗಾಗಿ ಮುಂದಿನ ಬಾರಿ ಅವರು ಸಿಎಂ ಆಗಲಿದ್ದಾರೆ. ಕಳೆದ ಬಾರಿ ನಡೆದ ಚುನಾವಣೆಯಲ್ಲಿ ಕೇವಲ 35ರಿಂದ 40 ಸೀಟುಗಳು ಮಾತ್ರ ಸೋತಿದ್ದೇವೆ. ಅದು ದೊಡ್ಡ ವ್ಯಾತ್ಯಾಸವೇನು ಅಲ್ಲ. ಮುಂದಿನ ಚುನಾವಣೆಯಲ್ಲಿ ಪಕ್ಷ ಸ್ವಂತ ಬಲದಿಂದ ಅಧಿಕಾರ ಹಿಡಿಯುವ ವಿಶ್ವಾಸವಿದೆ ಎಂದರು.
ನಟನಾಗಿ ಮೊದಲು ಜನರು ಮರೆತಿರುವ ಪೌರಾಣಿಕ ಚಿತ್ರಗಳನ್ನು ಕಟ್ಟಿಕೊಡುವ ಪ್ರಯತ್ನವಾಗಿ ಕುರುಕ್ಷೇತ್ರ, ಸೀತಾರಾಮ ಕಲ್ಯಾಣದಂತಹ ಚಿತ್ರಗಳಲ್ಲಿ ನಟಿಸಬೇಕೆಂದು ಬಯಸಿದ್ದೇನೆ. ಜಾಗ್ವಾರ್ ಚಿತ್ರ ನೋಡಿದ ಬಳಿಕ ನಿರ್ಮಾಪಕ ಮುನಿರತ್ನ ಅವರು ಮೂರು ಬಾರಿ ನನ್ನನ್ನು ಭೇಟಿ ಮಾಡಲು ಪ್ರಯತ್ನಿಸಿದ್ದರು.
ಕೊನೆಗೆ ಅಭಿಮನ್ಯು ಪಾತ್ರ ಮಾಡಲು ಒಪ್ಪಿಕೊಂಡೆ. ಮುಂದಿನ ವರ್ಷದ ಮಾರ್ಚ್ ಅಂತ್ಯಕ್ಕೆ ಈ ಚಿತ್ರ ತೆರೆ ಕಾಣಲಿದೆ. ನಿರ್ಮಾಪಕರು ಉಳಿದರೆ, ಕನ್ನಡ ಚಿತ್ರರಂಗ ಉಳಿಯಲು ಸಾಧ್ಯ. ಹೀಗಾಗಿ ಅವರು ಹೇಳಿದ ರೀತಿ ನಟಿಸಿ, ಪಾತ್ರಕ್ಕೆ ನ್ಯಾಯ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ನಿಖೀಲ್ ಕುಮಾರಸ್ವಾಮಿ ತಿಳಿಸಿದರು.
ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ವಿ.ನಾಗರಾಜ್, ಜಿಪಂ ಸದಸ್ಯರಾದ ಕೆ.ಸಿ.ರಾಜಾಕಾಂತ್, ಕೆ.ಎಂ.ಮುನೇಗೌಡ, ತಾಪಂ ಸದಸ್ಯ ಸತೀಶ್, ಜೆಡಿಎಸ್ ತಾಲೂಕಾಧ್ಯಕ್ಷ ಮುನಿರಾಜು, ಅಂಗರೇಖನಹಳ್ಳಿ ರವಿಕುಮಾರ್ ಇತರರು ಇದ್ದರು.