Advertisement

ಮತ್ತೆ ತೆರೆಯಿತು ಸಂಕಲಕರಿಯ ಪ್ರಾಥಮಿಕ ಶಾಲೆ

04:09 PM Apr 14, 2023 | Team Udayavani |

ಬೆಳ್ಮಣ್‌: ವಿದ್ಯಾರ್ಥಿಗಳ ಕೊರ‌ತೆಯಿಂದ 2017ರಲ್ಲಿ ಮುಚ್ಚಿ ಹೋಗಿ ಬಹುತೇಕ ನೇಪಥ್ಯಕ್ಕೆ ಸೇರಿದ್ದ ಕಾರ್ಕಳ ತಾಲೂಕಿನ ಮೂಡ್ಕೂರು ಗ್ರಾಮ ಪಂಚಾಯತ್‌ನ ಸಂಕಲಕರಿಯ ಖಾಸಗಿ ಅನುದಾನಿತ ಶಾಲೆಗೆ ಮತ್ತೆ ತೆರೆಯುವ ಭಾಗ್ಯ ಬಂದಿದೆ.

Advertisement

ಈ ಬಾರಿ ಶೈಕ್ಷಣಿಕ ಚಟುವಟಿಕೆಗಳಗಾಗಿ ಅಲ್ಲ ಬದಲಾಗಿ ಮೇ. 10ರಂದು ನಡೆಯಲಿರುವ ಸಾರ್ವತ್ರಿಕ ವಿಧಾನ ಸಭಾ ಚುನಾವಣೆಯ ಮತದಾನದ ಕರ್ತವ್ಯಕ್ಕಾಗಿ. 2017ರಲ್ಲಿ ವಿದ್ಯಾರ್ಥಿಗಳ ಕೊರತೆ ಹಾಗೂ ಶಿಕ್ಷಕರ ನಿವೃತ್ತಿಯ ಕಾರಣಗಳಿಂದ ಬೀಗ ಜಡಿಯಲ್ಪಟ್ಟಿದ್ದ ಈ ಶಾಲೆ ಪ್ರತೀ ಚುನಾವಣೆಗೆ ತೆರೆಯಲ್ಪಡುತ್ತಿರುವುದು ವಿಶೇಷ.2018ರ ವಿಧಾನ ಸಭಾ ಚುನಾವಣೆ, ಬಳಿಕ ನಡೆದ ಗ್ರಾಮ ಪಂಚಾಯತ್‌, ಜಿಲ್ಲಾ ಪಂಚಾಯತ್‌ ಚುನಾವಣೆಗಳಿಗೂ ಈ ಶಾಲೆ ತೆರೆಯಲ್ಪಟ್ಟಿತ್ತು.

ಸರ್ವ ಸುಸಜ್ಜಿತ ಶಾಲೆ
ಸ್ವಾತಂತ್ರ್ಯ ಪೂರ್ವದಲ್ಲಿ ಪ್ರಾರಂಭಗೊಂಡಿದ್ದ ಈ ಶಾಲೆ ಶತಮಾನೋತ್ತರ ಇತಿಹಾಸವನ್ನೇ ಹೊಂದಿದ್ದು ಮುಂಡ್ಕೂರು ದೊಡ್ಡಮನೆ ವೆಂಕಣ್ಣ ಶೆಟ್ಟರ ಆಡಳಿತದಲ್ಲಿ ನಡೆಯುತ್ತಿತ್ತು. ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾದಂತೆ ಸರಕಾರ ಅನುದಾನಿತ ಶಾಲೆಗಳಿಗೆ ಶಿಕ್ಷಕರನ್ನು ನೀಡುವುದನ್ನು ನಿಲ್ಲಿಸಿದ ಕಾರಣ ಈ ಶಾಲೆಯಲ್ಲಿ ಸೇವೆ ಸಲ್ಲಿಸಿದ್ದ ಕೊನೆಯ ಶಿಕ್ಷಕ, ಏಕೋಪಾಧ್ಯಾಯ, ಮುಖ್ಯೋಪಾಧ್ಯಾಯ ಬಾಬು ಶೆಟ್ಟರ ನಿವೃತ್ತಿಯ ಅನಂತರ ಮಕ್ಕಳೂ ಇಲ್ಲದೆ ಶಿಕ್ಷಕರೂ ಇಲ್ಲದ ಈ ಕಟ್ಟಡಕ್ಕೆ ಇಲಾಖೆಯೇ ಬೀಗ ಜಡಿದಿತ್ತು.

ಈ ಶಾಲೆಯಲ್ಲಿ ಏಳನೇ ತರಗತಿಯವರೆಗೆ ವ್ಯಾಸಂಗ ಮಾಡಿ ಬಳಿಕ ಉನ್ನತ ವ್ಯಾಸಂಗ ಮಾಡಿದ ಅದೆಷ್ಟೋ ಮಂದಿ ದೇಶ ವಿದೇಶಗಳಲ್ಲಿ ಉನ್ನತ ಉದ್ಯೋಗದಲ್ಲಿದ್ದಾರೆ. ಅಮೆರಿಕ, ಲಂಡನ್‌ಗಳಲ್ಲೂ ವೈದ್ಯರು, ಎಂಜಿನಿಯರರು, ವಿಜ್ಞಾನಿಗಳಾಗಿಯೂ ಸೇವೆಯಲ್ಲಿದ್ದಾರೆ. ಶಿಕ್ಷಕರು, ಉದ್ಯಮಿಗಳು, ರಂಗನಟರು, ಸಿನೆಮಾ ನಟರೂ ಇದ್ದಾರೆ. ಕೃಷಿಕರು, ರಾಜಕಾರಣಗಳೂ ಇದ್ದಾರೆ. ಸಾವಿರಾರು ಮಂದಿಗೆ ಉನ್ನತ ಭವಿಷ್ಯ ಬರೆದ ಈ ಶಾಲೆ ಇದೀಗ ಚುನಾವಣೆಗಳಿಗೆ ಮಾತ್ರ ತೆರೆಯುತ್ತಿದೆ.

ವೆಂಕಣ್ಣ ಶೆಟ್ಟಿ, ಮಹಾಬಲ ಶೆಟ್ಟಿ, ಸುರೇಂದ್ರ ಶೆಟ್ಟಿ, ಲಿಲ್ಲಿ ಟೀಚರ್‌, ಪ್ರಸಿಲ್ಲಾ ಟೀಚರ್‌, ಯತೀಶ್‌ ಭಂಡಾರಿ, ಬಾಬು ಶೆಟ್ಟಿ ಈ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸಿದ ಮೇರು ಶಿಕ್ಷಕರು. ಶಾಲೆಯಲ್ಲಿ ಸುಂದರವಾದ ಕೊಠಡಿಗಳು, ಅನ್ನದಾಸೋಹ ಕಟ್ಟಡ, ಶೌಚಾಲಯ, ಬಾತ್‌ರೂಮ್‌ಗಳಿದ್ದರೂ ಅಗತ್ಯ ಇರುವ ವಿದ್ಯಾರ್ಥಿಗಳ ಕೊರತೆ ಹಾಗೂ ಶಾಲೆಯನ್ನು ಮುಂದುವರಿಸುವ ಆಡಳಿತ ಮಂಡಳಿಯ ಇಚ್ಛಾ ಶಕ್ತಿಯ ಕೊರತೆಯಿಂದಾಗಿ ಈ ಶಾಲೆಯ ಮುಚ್ಚುವಂತಾಯಿತು. ಪ್ರತೀ ಚುನಾವಣೆಯ ಸಂದರ್ಭ ಮುಂಡ್ಕೂರು ಗ್ರಾಮ ಫಂಚಾಯತ್‌ ಪಿಡಿಒ, ನೌಕರರು, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು ಈ ಶಾಲೆಯನ್ನು ಶುಚಿಗೊಳಿಸಿ ಚುನಾವಣೆಗೆ ಅಣಿಗೊಳಿಸುತ್ತಾರೆ.

Advertisement

1,000ಕ್ಕೂ ಮತದಾರರು
ಕಾರ್ಕಳ ವಿಧಾನ ಸಭೆಯ ಮುಂಡ್ಕೂರು ಗ್ರಾಮ ಪಂಚಾಯತ್‌ನ ವಾಡ್‌ ಸಂಖ್ಯೆ 1ರ ಮತದಾರರಿಗೆ ಮತದಾನ ಇಲ್ಲಿ ನಡೆಯುತ್ತಿದ್ದು 1,000ಕ್ಕೂ ಮಿಕ್ಕಿ ಮತದಾರರಿದ್ದಾರೆ. ಮೇ 10ರಂದು ಇವರೆಲ್ಲ ಒಂದು ದಿನ ತೆರೆಯಲಿರುವ ಈ ಶಾಲೆಯಲ್ಲಿ ಮತದಾದ ಹಕ್ಕು ಚಲಾಯಿಸಲಿದ್ದಾರೆ

– ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next