Advertisement

ಮತ್ತೆ ಲಾಕ್‌ ಆಗದಂತೆ ನೋಡಿಕೊಳ್ಳುವುದು ಎಲ್ಲರ ಹೊಣೆ

11:51 PM Jan 03, 2022 | Team Udayavani |

ರಾಜ್ಯದಲ್ಲಿ ಕೊರೊನಾ ಹಾಗೂ ಒಮಿಕ್ರಾನ್‌ ಪ್ರಕರಣಗಳ ಸಂಖ್ಯೆ ಹೆಚ್ಚಳ ಹಿನ್ನೆಲೆಯಲ್ಲಿ ಮತ್ತೊಮ್ಮೆ ಲಾಕ್‌ಡೌನ್‌ ಆತಂಕ ಎದುರಾಗಿದೆ. ಆದರೆ ಈ ಹಿಂದೆ ಎರಡು ಬಾರಿಯ ಲಾಕ್‌ಡೌನ್‌ನಿಂದ ರಾಜ್ಯದ ಆರ್ಥಿಕತೆ ಮೇಲೆ ಆದ ಪರಿಣಾಮ ಹಾಗೂ ಜನಸಾಮಾನ್ಯರು ಎದುರಿ ಸಿದ ಸಮಸ್ಯೆ, ಬಡವರು, ಕಾರ್ಮಿಕರ ಬವಣೆ ಕಡಿಮೆಯೇನಲ್ಲ.

Advertisement

ರಾಜ್ಯದ ಜನತೆ ಮತ್ತೊಮ್ಮೆ ಲಾಕ್‌ಡೌನ್‌ ಹೇರುವ ಸ್ಥಿತಿ ನಿರ್ಮಾಣವಾಗದಂತೆ ನೋಡಿಕೊಳ್ಳಬೇಕಿದೆ. ಇದು ಪ್ರತಿಯೊಬ್ಬರ ಜವಾಬ್ದಾರಿ ಸಹ. ವಿಶ್ವ ಆರೋಗ್ಯ ಸಂಸ್ಥೆ ಹಾಗೂ ಕೇಂದ್ರ ಸರಕಾರದ ಸೂಚನೆ ಮೇರೆಗೆ ರಾಜ್ಯ ಸರಕಾರ ರೂಪಿಸಿರುವ ಮಾರ್ಗಸೂಚಿ, ನಿಯಮಾವಳಿ ತಪ್ಪದೇ ಪಾಲಿಸುವ ಮೂಲಕ ಪ್ರತಿಯೊಬ್ಬ ನಾಗರಿಕ ತನ್ನ ಹೊಣೆಗಾರಿಕೆ ನಿಭಾಯಿಸಬೇಕಾಗಿದೆ.

ಸರಕಾರ, ಪೊಲೀಸ್‌, ಬಿಬಿಎಂಪಿ, ಸ್ಥಳೀಯ ಆಡಳಿತ ನಿಯಂತ್ರಣ ಹೇರುವ ಮುನ್ನ ಪ್ರತಿಯೊಬ್ಬರೂ ಸ್ವಯಂ ನಿಯಂತ್ರಣ ಹೇರಿಕೊಂಡು ಕೊರೊನಾ ಹಾಗೂ ರೂಪಾಂತರಿ ಒಮಿಕ್ರಾನ್‌ ವಿರುದ್ಧ ಹೋರಾಟ ಮಾಡಬೇಕಾಗಿದೆ.

ರಾಜ್ಯದ ಅಭಿವೃದ್ಧಿ, ಆರ್ಥಿಕತೆ ಚೇತರಿಕೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ, ಕೋಟ್ಯಂತರ ಕಾರ್ಮಿಕರು ಹಾಗೂ ದುಡಿಯುವ ವರ್ಗದ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ನಡೆದುಕೊಳ್ಳಬೇಕಾಗಿದೆ. ಇಲ್ಲಿ ಒಬ್ಬರು, ಇಬ್ಬರು, ಸರಕಾರ, ಜನಪ್ರತಿನಿಧಿಗಳ ಪ್ರಶ್ನೆಯಲ್ಲ. ರಾಜ್ಯದ ಪ್ರಶ್ನೆ. ಹೀಗಾಗಿ ಯಾವುದೇ ಹಂತದಲ್ಲೂ ಮತ್ತೆ ಲಾಕ್‌ಡೌನ್‌ ಹೇರುವ ಪರಿಸ್ಥಿತಿ ಬಾರದಂತೆ ನೋಡಿಕೊಳ್ಳಬೇಕಾಗಿದೆ.

ರಾಜ್ಯ ಸರಕಾರವು ಸಹ ಲಾಕ್‌ಡೌನ್‌ ಪ್ರಸ್ತಾವ ಅಥವಾ ಜಪ ಕೈ ಬಿಟ್ಟು ನಿಯಂತ್ರಣ ಕ್ರಮಗಳ ಬಗ್ಗೆ ಹೆಚ್ಚು ಆದ್ಯತೆ ನೀಡಬೇಕು. ಸಾರ್ವಜನಿಕರು, ಸಂಘ-ಸಂಸ್ಥೆಗಳು, ನಾಗರಿಕ ಕ್ಷೇಮಾಭಿವೃದ್ಧಿ ಸಂಘ ಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಮನ್ವಯತೆ ಸಾಧಿಸಿ ಜನರಲ್ಲಿ ಜಾಗೃತಿ ಮೂಡಿಸಬೇಕು.

Advertisement

ಕೊರೊನಾ ಎರಡೂ ಲಸಿಕೆ, ಇದೀಗ 15ರಿಂದ 18 ವರ್ಷದ ಮಕ್ಕಳಿಗೆ ಮೊದಲ ಲಸಿಕೆ, 60 ವರ್ಷ ಮೇಲ್ಪಟ್ಟವರಿಗೆ ಬೂಸ್ಟರ್‌ ಡೋಸ್‌ ಪಡೆದು ಕೊಳ್ಳಲು ಎಲ್ಲ ರೀತಿಯಲ್ಲೂ ಕ್ರಮ ಕೈಗೊಳ್ಳಬೇಕು.

ಇದನ್ನೂ ಓದಿ:ಓಮಿಕ್ರಾನ್‌ ಉಲ್ಬಣದ ಹಿನ್ನೆಲೆ: ಅಂಗನವಾಡಿ ಬಂದ್‌ ಮಾಡಲ್ಲ: ಆಚಾರ್‌

ಆರ್ಥಿಕತೆಯ ವೇಗ ಕುಸಿಯದಂತೆ ಉದ್ಯಮಿಗಳು ಹಾಗೂ ವಾಣಿಜ್ಯ ಸಂಸ್ಥೆಗಳ ಜತೆ ಸಮಾಲೋಚನೆ ನಡೆಸಿ ಕಾರ್ಮಿಕರಲ್ಲಿ ಧೈರ್ಯ ತುಂಬಿ ಎಲ್ಲ ಕಡೆ ಸುರಕ್ಷತ ಕ್ರಮಗಳನ್ನು ಕೈಗೊಳ್ಳುವಂತೆ ಮಾಡಬೇಕು. ಇದು ಪ್ರತಿಯೊಬ್ಬರ ಜವಾಬ್ದಾರಿ, ಕರ್ತವ್ಯ ಎಂಬಂತೆ ಮನವರಿಕೆ ಮಾಡಿಕೊಡಬೇಕಾಗಿದೆ. ಮುಖ್ಯಮಂತ್ರಿ ಸಹಿತ ಸಚಿವ ಸಂಪುಟ ಸದಸ್ಯರು ಲಾಕ್‌ಡೌನ್‌ ಅನಿವಾರ್ಯ ಅಥವಾ ಲಾಕ್‌ಡೌನ್‌ ಹೇರಬೇಕಾಗಬಹುದು ಎಂಬ ಮಂತ್ರ ಜಪಿಸುವುದು ಬಿಟ್ಟು ಜನರಲ್ಲಿ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಹೆಚ್ಚು ಹೆಚ್ಚು ಜಾಗೃತಿ ಮೂಡಿಸಬೇಕಾಗಿದೆ.

ಕಾನೂನು ಸುವ್ಯವಸ್ಥೆ ಪಾಲನೆ, ಲಸಿಕೆ ಅಭಿಯಾನ, ಚಿಕಿತ್ಸೆ ಮತ್ತು ಆರೈಕೆಯಲ್ಲಿ ತೊಡಗಿರುವ ಲಕ್ಷಾಂತರ ಪೊಲೀಸ್‌ ಸಿಬಂದಿ, ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರು, ಶಿಕ್ಷಕರು, ಕಂದಾಯ ಇಲಾಖೆ ಅಧಿಕಾರಿಗಳ ಸೇವೆ ವ್ಯರ್ಥವಾಗಬಾರದು. ಕೊರೊನಾ ಅಥವಾ ರೂಪಾಂತರಿ ಒಮಿಕ್ರಾನ್‌ ವಿರುದ್ಧದ ಹೋರಾಟದಲ್ಲಿ ರಾಜ್ಯದ ಪ್ರತಿ ಯೊಬ್ಬರ ಪ್ರಜೆಯೂ ಯೋಧನಂತೆ ಜವಾಬ್ದಾರಿ ನಿರ್ವಹಿಸಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next