Advertisement

ಕನ್ನಡಕ್ಕಾಗಿ ಲಾಠಿ ಏಟು ತಿಂದು 15 ದಿನ ಆಸ್ಪತ್ರೆಯಲ್ಲಿದ್ದೆ: ಸಚಿವ ಆರ್.ಅಶೋಕ್

07:35 PM Oct 27, 2021 | Team Udayavani |

ಬೆಂಗಳೂರು: ನ್ಯಾಷನಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ನಡೆದ ಪೊಲೀಸರ ಲಾಠಿ ಪ್ರಹಾರದಲ್ಲಿ ಗಾಯಗೊಂಡು ಹದಿನೈದು ದಿನ ಆಸ್ಪತ್ರೆಗೆ ದಾಖಲಾಗಿದ್ದೆ ಎಂದು ಸಚಿವ ಆರ್.ಅಶೋಕ್ ಅವರು ತಮ್ಮ ಹಳೆಯ ಹೋರಾಟದ ದಿನಗಳನ್ನು ಬುಧವಾರ ನೆನೆಸಿಕೊಂಡಿದ್ದಾರೆ.

Advertisement

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ಕನ್ನಡದ ಹಿರಿಮೆಯನ್ನು ಸಾರುವ ಅಭಿಯಾನದಲ್ಲಿ ಪಾಲ್ಗೊಳ್ಳುವುದು ಪ್ರತಿಯೊಬ್ಬರ ಕರ್ತವ್ಯ. ಈ ನಿಟ್ಟಿನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳು ಸ್ವಾಗತಾರ್ಹವಾಗಿದೆ” ಎಂದರು.

”ವಿದ್ಯಾರ್ಥಿ ಜೀವನದಲ್ಲಿ ನಾನೂ ಕೂಡ ಕನ್ನಡಪರ ಹೋರಾಟದಲ್ಲಿ ಪಾಲ್ಗೊಂಡಿದ್ದೇನೆ. ವರನಟ ಡಾ. ರಾಜ್ ಕುಮಾರ್ ರವರು ಕನ್ನಡಪರ ಚಳುವಳಿ ಕೈಗೊಂಡಿದ್ದರು. ನ್ಯಾಷನಲ್ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ನಡೆದ ಪೊಲೀಸರ ಲಾಠಿ ಪ್ರಹಾರದಿಂದ ಗಾಯಗೊಂಡು ಹದಿನೈದು ದಿನ ಆಸ್ಪತ್ರೆಗೆ ದಾಖಲಾಗಿದ್ದೆ. ನಂತರದ ದಿನಗಳಲ್ಲಿ ನಾನು ಸಚಿವನಾದ ತಕ್ಷಣವೇ ಹಾರ, ಹೂಗುಚ್ಚದ ಬದಲಿಗೆ ಕನ್ನಡ ಪುಸ್ತಕಗಳನ್ನು ಕೊಡಿ ಎನ್ನುವದಾಗಿ ಆದೇಶ ಹೊರಡಿಸಿದ್ದೆ” ಎಂದು ತಮ್ಮ ಕನ್ನಡಪರ ಕಾಳಜಿ ತೋರಿಕೊಂಡರು.

ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರದ್ದು ಕೆಳಮಟ್ಟದ ರಾಜಕಾರಣ

”ವೈಯಕ್ತಿಕ ಮತ್ತು ಆಧಾರರಹಿತ ದಾಳಿ ಮಾಡುವ ಮೂಲಕ ಕೀಳುಮಟ್ಟದ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಬಗ್ಗೆ ನನಗೆ ವಿಷಾದವಿದೆ. ಅಭಿವೃದ್ಧಿ ಯೋಜನೆಗಳ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರು ಐದು ವರ್ಷಗಳ ಕಾಲ ಸಿಎಂ ಆಗಿದ್ದರೂ ಅವರ ಸಾಧನೆಗಳ ಬಗ್ಗೆ ಹೇಳಲು ಏನೂ ಇಲ್ಲ ಎಂಬುದು ಬೇಸರದ ಸಂಗತಿ” ಎಂದು ಕಂದಾಯ ಸಚಿವ ಆರ್ ಅಶೋಕ್ ಟೀಕಿಸಿದರು.

Advertisement

ಸಿಂದಗಿ ಮತ್ತು ಹಾನಗಲ್ ಉಪಚುನಾವಣೆಯಲ್ಲಿ ಬಿಜೆಪಿ ಉತ್ತಮ ಸ್ಥಿತಿಯಲ್ಲಿದೆ. “ಬಿಜೆಪಿ ಎರಡೂ ಕ್ಷೇತ್ರದಲ್ಲಿ ಬಲಯುತವಾಗಿದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಅನ್ನು ಜನರು ತಿರಸ್ಕರಿಸುತ್ತಾರೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಆರೆಸ್ಸೆಸ್ ನಂಥ ರಾಜಕೀಯೇತರ ಸ್ವಯಂ ಸೇವಾ ಸಂಸ್ಥೆಯ ವಿರುದ್ಧ ಟೀಕೆ ಮಾಡುವುದನ್ನು ನಿಲ್ಲಿಸಬೇಕು. ಕಾಂಗ್ರೆಸ್ ಸ್ಥಿತಿ ಹೇಗಾಗಿದೆ ಅನ್ನುವದಕ್ಕೆ ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ ಜ್ವಲಂತ ಸಾಕ್ಷಿಯಾಗಿದೆ” ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next