Advertisement

ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಓದು ಕಡ್ಡಾಯ

03:33 PM Sep 02, 2022 | Team Udayavani |

ವಾಡಿ: ಪ್ರತಿದಿನ ಬೆಳಗ್ಗೆ ಶಾಲೆಯಲ್ಲಿ ರಾಷ್ಟ್ರಗೀತೆ ಹಾಡಿದ ನಂತರ ವಿದ್ಯಾರ್ಥಿಗಳಿಗೆ ಸಂವಿಧಾನದ ಪೂರ್ವ ಪೀಠಿಕೆ ಹಾಡಿಸುವುದು ಕಡ್ಡಾಯವಾಗಿದ್ದು, ದೈಹಿಕ ಶಿಕ್ಷಕರು ಇದನ್ನು ಶಿಸ್ತುಬದ್ಧವಾಗಿ ಪಾಲಿಸಬೇಕು ಎಂದು ಚಿತ್ತಾಪುರ ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ಧವೀರಯ್ಯ ರುದ್ನೂರ ಹೇಳಿದರು.

Advertisement

ಕೊಂಚೂರು ಏಕಲವ್ಯ ಮಾದರಿ ವಸತಿ ಶಾಲೆ ಮೈದಾನದಲ್ಲಿ ಏರ್ಪಡಿಸಲಾಗಿದ್ದ ನಾಲವಾರ ಹೋಬಳಿ ಮಟ್ಟದ ಪ್ರಾಥಮಿಕ ಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ರಾಷ್ಟ್ರಗೀತೆ ಮತ್ತು ನಾಡಗೀತೆ ಹೇಳಿದ ಬಳಿಕ ಸರ್ವಜನಾಂಗದ ಹಿತವನ್ನೇ ಬಯಸುವ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾರತ ಸಂವಿಧಾನದ ಪೀಠಿಕೆಯನ್ನು ಮಕ್ಕಳು ನಿರರ್ಗಳವಾಗಿ ಹಾಡುವಂತೆ ಅಥವಾ ಓದುವಂತೆ ಪ್ರೇರೇಪಿಸಬೇಕು. ಇದು ಆಯಾ ಶಾಲೆಗಳ ಮುಖ್ಯಶಿಕ್ಷಕರು ಮತ್ತು ದೈಹಿಕ ಶಿಕ್ಷಕರ ಜವಾಬ್ದಾರಿಯಾಗಿದೆ ಎಂದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಸಂಘಟನಾ ಕಾರ್ಯದರ್ಶಿ ಶರಣಪ್ಪ ಐಕೂರ ಮಾತನಾಡಿ. ಗ್ರಾಮೀಣ ಭಾಗದ ಬಹುತೇಕ ಸರಕಾರಿ ಶಾಲೆಗಳಿಗೆ ಕ್ರೀಡಾ ಪರಿಕರಗಳು ಪೂರೈಕೆಯಾಗಿಲ್ಲ. ಈ ಸಮಸ್ಯೆಯನ್ನು ದೈಹಿಕ ಶಿಕ್ಷಣ ಇಲಾಖೆ ಗಂಭೀರವಾಗಿ ಪರಿಗಣಿಸಿ, ಆಟದ ಸಾಮಗ್ರಿ ಒದಗಿಸಬೇಕು ಎಂದು ಆಗ್ರಹಿಸಿದರು.

ಸರಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಬಸವರಾಜ ಬಳೂಂಡಗಿ, ಕಾರ್ಯದರ್ಶಿ ಅಬ್ದುಲ್‌ ಸಲೀಂ ಪ್ಯಾರೆ, ದೈಹಿಕ ಶಿಕ್ಷಣಾ ಧಿಕಾರಿ ದೇವಿಂದ್ರರೆಡ್ಡಿ ದುಗನೂರ, ಏಕಲವ್ಯ ಮಾದರಿ ವಸತಿ ಶಾಲೆಯ ಪ್ರಾಂಶುಪಾಲ ಗಂಗಾಧರ, ಕೊಲ್ಲೂರ ಸಿಆರ್‌ಸಿ ಸಂಜೀವಕುಮಾರ, ಶಿವಾನಂದ ಹಿರೇಮಠ, ದೇವಿಂದ್ರಪ್ಪ ದೊರೆ, ಶ್ರೀಧರ ರಾಠೊಡ, ವಿಜಯಕುಮಾರ ಕುಲಕರ್ಣಿ, ಸುರೇಶ ರಾಂಪೂರೆ, ಮೇರಿ ವರ್ಜಿನ್‌, ಹುಸೇನ ಪಾಶಾ, ವೆಂಕಟರೆಡ್ಡಿ ಪಾಲ್ಗೊಂಡಿದ್ದರು. ಶಿಕ್ಷಕ ಸಿಂಗ್ರಯ್ಯ ನಿರೂಪಿಸಿ, ವಂದಿಸಿದರು. ನಾಲವಾರ ವಲಯದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪಥಸಂಚಲನ ನಡೆಸಿಕೊಟ್ಟರು. ಇದೇ ವೇಳೆ ಅಥಿತಿಗಳು ಕ್ರೀಡಾ ಧ್ವಜಾರೋಹಣ ನೆರವೇರಿಸಿ ಕ್ರೀಡಾ ಜ್ಯೋತಿ ಸ್ವೀಕರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next