ಕಳೆದ ಎರಡು ವರ್ಷಗಳಿಂದಲೂ ಒಂದಿಲ್ಲೊಂದು ಕಾರಣದಿಂದ ದೇಶದ ಶೈಕ್ಷಣಿಕ ವಲಯ ಬಸವಳಿದಿದೆ. ಮನುಕುಲದ ಇತಿಹಾಸದಲ್ಲೇ ಕಂಡು ಕೇಳರಿಯದ ಕೊರೊನಾ ಎಂಬ ಮಹಾಮಾರಿ ಇಡೀ ವ್ಯವಸ್ಥೆಯನ್ನೇ ಅಲುಗಾಡಿಸಿಬಿಟ್ಟಿದೆ. ಇದು ಕೇವಲ ಶೈಕ್ಷಣಿಕ ವಲಯಕ್ಕಷ್ಟೇ ಸೀಮಿತವಲ್ಲ, ಹೆಚ್ಚು ಕಡಿಮೆ ಎಲ್ಲ ವಲಯಗಳೂ ಕೊರೊನಾದ ಆಘಾತದಿಂದ ನರಳುತ್ತಿವೆ ಎಂಬುದು ಕನ್ನಡಿಯೊಳಗಿನ ಪ್ರತಿಬಿಂಬದ ರೀತಿಯ ಸತ್ಯ.
ಇದರ ನಡುವೆಯೇ ಕಳೆದೊಂದು ವರ್ಷದಿಂದ ಹಾಗೂ ಹೀಗೂ ಶೈಕ್ಷಣಿಕ ವಲಯ ಸುಧಾರಿಸಿಕೊಳ್ಳುತ್ತಿದೆ. ಆಫ್ಲೈನ್ ಮತ್ತು ಆನ್‌ಲೈನ್ ತರಗತಿಗಳ ಮೂಲಕ ಶಿಕ್ಷಣವನ್ನು ನೀಡಲಾಗುತ್ತಿದೆ. ಆನ್‌ಲೈನ್ ತರಗತಿ ಗಳಿಂದಾಗಿ ವಿದ್ಯಾರ್ಥಿಗಳ ಗ್ರಹಿಕೆಯ ಮಟ್ಟ ಕುಸಿದಿದೆ ಎಂಬ ಮಾತುಗಳೂ ಇವೆ. ಇದರ ನಡುವೆಯೇ ಈಗ ಪದವಿ ಕೋರ್ಸ್‌ಗಳ ಸೆಮಿಸ್ಟರ್ ಪರೀಕ್ಷೆ ಒಂದು ತಿಂಗಳು ಮುಂದೂಡಲು ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಕೋರಿಕೆ ಸಲ್ಲಿಸಿದ್ದಾರೆ. ಬೋಧನಾ ಕಾರ್ಯ ಮುಗಿದಿಲ್ಲ. ಹೀಗಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆಯನ್ನು ಮುಂದೂಡುವಂತೆ ಕೋರಿಕೆ ಸಲ್ಲಿಸಿರುವುದು ಸ್ವಾಗತಾರ್ಹ. ಆದರೆ ರಾಜ್ಯದ ಕೆಲವು ವಿಶ್ವವಿದ್ಯಾನಿಲಯಗಳು ಈಗಾಗಲೇ ಸೆಮಿಸ್ಟರ್ ಪರೀಕ್ಷೆಯ ವೇಳಾಪಟ್ಟಿ ಪ್ರಕಟಿಸಿವೆ. ಹೀಗಾಗಿ ಈ ವಿಚಾರದಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡದಂತೆ ಸರಕಾರ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ.
ಪದವಿ ಕಾಲೇಜುಗಳಿಗೆ ತರಗತಿಗಳು ಪ್ರಾರಂಭವಾಗಿದ್ದೇ ನವೆಂಬರ್ ತಿಂಗಳಿನಿಂದ. ಇದರ ನಡುವೆ ಅತಿಥಿ ಉಪನ್ಯಾಸಕರು ಒಂದೂವರೆ ತಿಂಗಳು ತಮ್ಮ ಬೇಡಿಕೆ ಈಡೇರಿಸಲು ಪಟ್ಟು ಹಿಡಿದು ಪ್ರತಿಭಟನೆ ನಡೆಸಿದ್ದರಿಂದ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆಯಲಿಲ್ಲ. ಇದರ ನಡುವೆ ಒಮಿಕ್ರಾನ್ ಪ್ರಕರಣಗಳ ಹೆಚ್ಚಳ ಹಿನ್ನೆಲೆಯಲ್ಲಿ ಆನ್‌ಲೈನ್ ತರಗತಿಗಳು ನಡೆಯುವಂತಾಯಿತು. ಇದರಿಂದ ವಿದ್ಯಾರ್ಥಿಗಳಿಗೆ ಕಲಿಕೆಗೆ ತೊಂದರೆಯಾಯಿತು.
ಸರಕಾರ ಮೊದಲೇ ಎಚ್ಚೆತ್ತುಕೊಂಡು ಅತಿಥಿ ಉಪನ್ಯಾಸಕರ ಪ್ರತಿಭಟನೆ ಮುಂದುವರಿಯದಂತೆ ಮನವೊಲಿಸಿ ಅವರು ತರಗತಿಗಳಿಗೆ ಹಾಜರಾಗುವಂತೆ ನೋಡಿಕೊಂಡಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಆಗ ಮೌನವಹಿಸಿದ್ದರಿಂದ ಇಂದು ಪಠ್ಯಕ್ರಮ ಪೂರ್ಣಗೊಳ್ಳದೆ ಪರೀಕ್ಷೆ ಎದುರಿಸುವಂತಾಗಿದೆ. ಈ ತಿಂಗಳಲ್ಲಿ ಮೊದಲನೇ ಪದವಿಯ ಮೊದಲ, ಎರಡನೇ ಪದವಿಯ ಮೂರನೇ ಹಾಗೂ ಅಂತಿಮ ಪದವಿಯ ಐದನೇ ಸೆಮಿಸ್ಟರ್ ಪರೀಕ್ಷೆ ನಡೆಯಬೇಕಿತ್ತು. ಇದೀಗ ಒಂದು ತಿಂಗಳ ಕಾಲ ಮುಂದೂಡಲು ಮನವಿ ಮಾಡಲಾಗಿದೆಯಾದರೂ ಆ ಕುರಿತು ವಿಶ್ವವಿದ್ಯಾನಿಲಯಗಳ ಕುಲಪತಿಗಳ ಜತೆ ಸಭೆ ನಡೆಸಿದ ಅನಂತರವೇ ತೀರ್ಮಾನವಾಗಲಿದೆ. ಒಂದೊಮ್ಮೆ ತಿಂಗಳ ಕಾಲ ಮುಂದೂಡಿದರೂ ಪಠ್ಯಕ್ರಮ ಬೋಧನೆ ಪೂರ್ಣಗೊಳ್ಳುವುದು ಅನುಮಾನ.
ಹೀಗಾಗಿ ಪ್ರಸಕ್ತ ಸನ್ನಿವೇಶದಲ್ಲಿ ರಾಜ್ಯ ಸರಕಾರ ವಿದ್ಯಾರ್ಥಿಗಳ ಹಿತಾಸಕ್ತಿ ಗಮನದಲ್ಲಿಟ್ಟುಕೊಂಡು ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ. ಸರಕಾರದ ತೀರ್ಮಾನ, ವಿದ್ಯಾರ್ಥಿ ಪೋಷಕರಲ್ಲಿ ಗೊಂದಲ ಮೂಡಿಸುವಂತಿರಬಾರದು. ವಿದ್ಯಾರ್ಥಿಗಳ ಭವಿಷ್ಯಕ್ಕೂ ಮಾರಕವಾಗಬಾರದು.