ಮೈಸೂರು: ಸರ್ಕಾರಿ ಉತ್ತನಹಳ್ಳಿಯ ಜ್ವಾಲಾಮುಖೀ ತ್ರಿಪುರ ಸುಂದರಿ ಅಮ್ಮನವರ ಜಾತ್ರಾ ಮಹೋತ್ಸವದ ದಿನಾಂಕವು ದಿನದರ್ಶಿಕೆಯಲ್ಲಿ ತಪ್ಪಾಗಿ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಗೊಂದಲ ನಿವಾರಿಸಲು ಮುಂದಾಗಿರುವ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್, ಅರಮನೆಯ ಪಂಚಾಂಗದಂತೆ ಫೆ. 9ರಂದೇ ಜಾತ್ರೆ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಉತ್ತನಹಳ್ಳಿ ಗ್ರಾಮಸ್ಥರ ನಿಯೋಗವು ಸೋಮವಾರ ಪ್ರಮೋದಾದೇವಿ ಒಡೆಯರ್ ಅವರನ್ನು ಭೇಟಿ ಮಾಡಿತ್ತು. ಇದಕ್ಕೂ ಮುನ್ನ ಚಾಮುಂಡಿಬೆಟ್ಟದ ಅರ್ಚಕರು ಮತ್ತು ಅರಮನೆ ಅರ್ಚಕರ ಸಭೆ ನಡೆಸಿದ್ದ ಪ್ರಮೋದಾದೇವಿಯವರು ಯಾವ ದಿನ ಸೂಕ್ತವೆಂಬ ಮಾಹಿತಿ ಪಡೆದುಕೊಂಡಿದ್ದರು. ಮಾಘ ಮಾಸದ ಮೂರನೇ ಭಾನುವಾರವೇ ಜ್ವಾಲಾಮುಖೀ ತ್ರಿಪುರ ಸುಂದರಿ ವರ್ಧಂತಿ ನಡೆಸಬೇಕು. ಈ ಲೆಕ್ಕಾಚಾರದ ಪ್ರಕಾರ ಫೆ. 9ರಂದು ನಡೆಸುವುದು ಸೂಕ್ತ’ ಎಂಬ ಅಭಿಪ್ರಾಯವನ್ನು ಅರಮನೆ ಪಂಚಾಂಗ ತಜ್ಞರು ತಿಳಿಸಿದ್ದಾರೆ.
ಈ ವಿಚಾರವನ್ನು ಗ್ರಾಮಸ್ಥರಿಗೆ ತಿಳಿಸಿದ ಪ್ರಮೋದಾದೇವಿ ಒಡೆಯರ್, 1868ರಿಂದಲೂ ಅರಮನೆ ಪಂಚಾಂಗ ಪ್ರಕಾರವೇ ಉತ್ತನಹಳ್ಳಿ ಜಾತ್ರೆ ನಡೆಸಿಕೊಂಡು ಬರಲಾಗಿದೆ. ಈವರೆಗೂ ಯಾವುದೇ ಬದಲಾವಣೆಯಾಗಿಲ್ಲ. ಈ ಸಲ ದಿನಾಂಕ ಏಕೆ ತಪ್ಪಾಗಿ ಪ್ರಕಟವಾಗಿದೆ ಎಂಬುದು ನನಗೆ ಗೊತ್ತಿಲ್ಲ. ಪ್ರತಿ ವರ್ಷ ಉತ್ತನಹಳ್ಳಿ ಜಾತ್ರೆಯ ದಿನದಂದು ಅರಮನೆಯಲ್ಲಿಯೂ ಮಾರಿಸಾರು ಸಾರಿಕೆ ಮಾಡಿಸಲಾಗುತ್ತದೆ.
ಹೀಗಾಗಿ ಗ್ರಾಮಸ್ಥರು ಒಮ್ಮತದಿಂದ ಫೆ. 9ರಂದು ಆಚರಿಸುವುದು ಸೂಕ್ತ. ಆದರೆ ಯಾವುದೇ ಪೂರ್ವ ತಯಾರಿ ಮಾಡಿಕೊಂಡಿಲ್ಲ ಎನ್ನುವುದಾದರೆ ಫೆ.16 ರಂದು ಜಾತ್ರೆ ನಡೆಸಲು ನಮ್ಮ ಅಡ್ಡಿಯಿಲ್ಲ. ಒಟ್ಟಿನಲ್ಲಿ ಯಾವುದಾದರೂ ನಿರ್ಧಾರ ತೆಗೆದುಕೊಳ್ಳಲು ಗ್ರಾಮಸ್ಥರು ಸ್ವತಂತ್ರರು, ನನ್ನ ಅಭಿಪ್ರಾಯವನ್ನಷ್ಟೇ ಹೇಳುತ್ತಿದ್ದೇನೆ ಎಂದು ಗ್ರಾಮಸ್ಥರಿಗೆ ಸ್ಪಷ್ಟಪಡಿಸಿದರು ಎನ್ನಲಾಗಿದೆ.
ಈ ಸಂಬಂಧ ಗ್ರಾಮದಲ್ಲಿಯೇ ಎಲ್ಲಾ ಕೋಮಿನವರ ಸಭೆ ನಡೆಸಿ ಫೆ.9 ಅಥವಾ 16ರಲ್ಲಿ ಯಾವ ದಿನ ಜಾತ್ರೆ ನಡೆಸಬೇಕೆಂಬ ನಿರ್ಧಾರವನ್ನು ಗ್ರಾಮಸ್ಥರೆ ಕೈಗೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಜಾತ್ರೆ ಆಚರಣೆ ವಿಚಾರವಾಗಿ ತಮ್ಮ ಹೆಸರನ್ನು ಮಧ್ಯ ತರದಂತೆಯೂ ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಫೆ.11ರಂದು ತಾಂಡವಪುರ ಜಾತ್ರೆ: ಉತ್ತನಹಳ್ಳಿ ಜಾತ್ರೆ ನಡೆಯುವ ಮೊದಲು ತಾಂಡವಪುರ ಜಾತ್ರೆ ನಡೆಯುವುದು ವಾಡಿಕೆ. ಅದರಂತೆ ಫೆ. 16ರ ದಿನಾಂಕವನ್ನೇ ಆಧರಿಸಿ ತಾಂಡವಪುರ ಮಾರಿ ಜಾತ್ರೆ ಫೆ. 11 ರಂದು ನಡೆಯಲಿದೆ. ಉತ್ತನಹಳ್ಳಿ ಜಾತ್ರೆಯ ದಿನಾಂಕ ಗೊಂದಲವು ತಾಂಡವಪುರ ಜಾತ್ರೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂಬುದು ತಾಂಡವುಪರ ಗ್ರಾಮಸ್ಥರ ಅನಿಸಿಕೆಯಾಗಿದೆ.
ಜಿಲ್ಲಾಧಿಕಾರಿ ನಿರ್ಧಾರ ಕೈಗೊಳ್ಳುವರೆ?: ಉತ್ತನಹಳ್ಳಿ ಜ್ವಾಲಾಮುಖೀ ತ್ರಿಪುರ ಸುಂದರಿ ಅಮ್ಮನವರ ದೇವಸ್ಥಾನವು ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಶಿಷ್ಟಾಚಾರದಂತೆ ಎಲ್ಲಾ ರೀತಿಯ ಕ್ರಮ ವಹಿಸುವುದು ಜಿಲ್ಲಾಧಿಕಾರಿಗಳ ಸುಪರ್ದಿಗೆ ಬರುತ್ತದೆ. ಈಗ ಉದ್ಭವಿಸಿರುವ ಗೊಂದಲವನ್ನು ನಿವಾರಿಸಲು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.